ಬೆಂಗಳೂರು: ಕಾಡುಗೊಲ್ಲ (ಅಡವಿಗೊಲ್ಲ) ಮತ್ತು ಹಟ್ಟಿಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸಬೇಕೆಂಬ ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಬಲ ತುಂಬಿದೆ.
ಈ ಹಿಂದೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಐದು ಬಾರಿ ತಿರಸ್ಕರಿಸಿದ್ದರೂ, ಸಮುದಾಯದ ಬೇಡಿಕೆಯನ್ನು ಕೈಬಿಡದ ರಾಜ್ಯ ಸರ್ಕಾರ ಇದೀಗ ಹೊಸದಾಗಿ ಸಮಗ್ರ ಅಧ್ಯಯನ ನಡೆಸಿ, ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲು ನಿರ್ಧರಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 19ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಾರಿ ಹಿಂದಿನ ವರದಿಗಳನ್ನೇ ಪುನರಾವರ್ತಿಸುವ ಬದಲು, ಕೇಂದ್ರ ಸರ್ಕಾರದ ಆಕ್ಷೇಪಣೆಗಳಿಗೆ ಸೂಕ್ತ ಉತ್ತರ ನೀಡುವ ರೀತಿಯಲ್ಲಿ ಹೊಸ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಮುಂದಾಗಿದೆ.
ಕಾಡುಗೊಲ್ಲ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಬುಡಕಟ್ಟು ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಹೊಸ ವರದಿ ಸಿದ್ಧಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಇದಕ್ಕಾಗಿ ಧಾರವಾಡದ 'ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪ್‌ಮೆಂಟ್ ರಿಸರ್ಚ್' (CMDR) ಸಂಸ್ಥೆಯ ತಜ್ಞ ಮಾನವಶಾಸ್ತ್ರಜ್ಞರ ನೆರವು ಪಡೆಯಲು ನಿರ್ಧರಿಸಲಾಗಿದೆ.
ಈ ಸಂಬಂಧ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನವೆಂಬರ್ 18ರಂದೇ ಆದೇಶ ಹೊರಡಿಸಿದೆ. ಮೂರು ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಲಾಗಿದೆ.
ಹೊಸ ಅಧ್ಯಯನದ ಮೂಲಕ ಸಮುದಾಯದ ವಿಶಿಷ್ಟ ಜೀವನಶೈಲಿ, ಸಾಮಾಜಿಕ ಸ್ಥಿತಿ, ಸಾಂಪ್ರದಾಯಿಕ ಆಚರಣೆಗಳು, ವಾಸಸ್ಥಳ ಮತ್ತು ಬುಡಕಟ್ಟು ಲಕ್ಷಣಗಳನ್ನು ದಾಖಲಿಸಿ, ಕೇಂದ್ರದ ಪರಿಶೀಲನೆಗೆ ಅಗತ್ಯವಿರುವ ಸಮಗ್ರ ದಾಖಲೆ ಸಿದ್ಧಪಡಿಸುವ ಉದ್ದೇಶ ಸರ್ಕಾರಕ್ಕಿದೆ ಎಂದಿದ್ದಾರೆ.
ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ 2015ರಿಂದ ನಿರಂತರವಾಗಿ ಪ್ರಯತ್ನಿಸುತ್ತಿದೆ. 2015ರ ಮಾರ್ಚ್ 18ರಂದು ಮೊದಲ ಬಾರಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೇ ವರ್ಷ ಆಗಸ್ಟ್ 17ರಂದು ಮತ್ತೊಂದು ಪ್ರಸ್ತಾವನೆಯನ್ನೂ ಕಳುಹಿಸಲಾಗಿತ್ತು.