ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕ ಹಗರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳಾದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಆಯೋಗದ ಸದಸ್ಯೆ ಬಿ.ವಿ. ಗೀತಾ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಇಬ್ಬರನ್ನೂ ಪ್ರತ್ಯೇಕವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ 2026ರ ಜನವರಿ 8 ಮತ್ತು 9ರಂದು ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀ ಸೋರಿಕೆ, ಅಭ್ಯರ್ಥಿಗಳಿಂದ ಹಣ ವಸೂಲಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮುನ್ನವೇ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಒದಗಿಸಲಾಗಿದೆ. ಇದಕ್ಕಾಗಿ ಅಭ್ಯರ್ಥಿಗಳಿಂದ ತಲಾ 20 ಲಕ್ಷದಿಂದ 40 ಲಕ್ಷ ರೂಪಾಯಿವರೆಗೆ ಹಣ ಪಡೆಯಲಾಗಿದೆ ಎಂಬುದು ಇಡಿ ತನಿಖೆ ವೇಳೆ ತಿಳಿದುಬಂದಿದೆ.
ಹಗರಣ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆದಿದೆ. ಜಾರಿ ನಿರ್ದೇಶನಾಲಯವು ಹೈಕೋರ್ಟ್‌ಗೆ ತನಿಖೆಯ ವಿವರ ಸಲ್ಲಿಕೆ ಮಾಡಿದೆ. ಈ ವೇಳೆ ಹೈಕೋರ್ಟ್, ಇಡಿ ತನಿಖೆ ನೋಡಿದರೆ ಮತ್ತಷ್ಟು ಎಫ್‌ಐಆರ್ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಇಡಿ ನೀಡಿರುವ ಮಾಹಿತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಎಸ್‌ಪಿಪಿ ಜಗದೀಶ್ ತಿಳಿಸಿದ್ದಾರೆ.
ಅದಕ್ಕೆ ಹೈಕೋರ್ಟ್, ಕೆಪಿಎಸ್‌ಸಿ ನಡೆಸಿದ ಹಲವು ನೇಮಕಗಳಲ್ಲಿ ಅಕ್ರಮವಾಗಿದೆ. ಇಡಿ ಎಸ್‌ಐಟಿಯೊಂದಿಗೆ ಶಾಕಿಂಗ್ ಮಾಹಿತಿ ಹಂಚಿಕೊಂಡಿದೆ. ಇಡಿ ಹಂಚಿಕೊಂಡಿರುವ ಮಾಹಿತಿ ಬಗ್ಗೆಯೂ ಎಫ್‌ಐಆರ್ ದಾಖಲಿಸಬೇಕು. ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಎಸ್‌ಐಟಿಗೆ ವರ್ಗಾಯಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿತ್ತು. ಬಳಿಕ ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಪ್ರಕರಣದ ತನಿಖೆಯನ್ನು ಸ್ವತಂತ್ರವಾಗಿ ಮುಂದುವರಿಸಲು ಎಸ್‌ಐಟಿಗೆ ಜವಾಬ್ದಾರಿ ನೀಡಲಾಗಿದೆ. ಈ ಪ್ರಕರಣದಲ್ಲಿ ಮಾಜಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಹಲವರ ವಿರುದ್ಧವೂ ತನಿಖೆ ನಡೆಯುತ್ತಿದೆ.
ಇದೀಗ ಶಿವಶಂಕರಪ್ಪ ಸಾಹುಕಾರ್ ಮತ್ತು ಬಿ.ವಿ. ಗೀತಾ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವುದು ಪ್ರಕರಣದ ತನಿಖೆಯಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ.