ರೈತ (ಸಂಗ್ರಹ ಚಿತ್ರ) 
ರಾಜ್ಯ

ತಾಪಮಾನ ಕುಸಿತ: ಕರ್ನಾಟಕದ ರೈತರ ಮೊಗದಲ್ಲಿ ಮಂದಹಾಸ; ಹಿಂಗಾರು ಬೆಳೆಗಳಿಗೆ ಬಂತು ಜೀವಕಳೆ, ಬಂಪರ್ ಫಸಲಿನ ನಿರೀಕ್ಷೆ..!

ಹಿಂಗಾರು ಹಂಗಾಮಿನ ಬಿತ್ತನೆ ಅಕ್ಟೋಬರ್‌ನಲ್ಲಿಯೇ ಆರಂಭವಾಗಿರುತ್ತದೆ. ಈಗ ತಾಪಮಾನ ಇಳಿಕೆಯಾಗುತ್ತಿರುವುದರಿಂದ ಮೇಲ್ಮಣ್ಣಿನಲ್ಲಿ ತೇವಾಂಶ ಮತ್ತು ಇಬ್ಬನಿ ಉಳಿಯಲು ಸಹಕಾರಿಯಾಗುತ್ತದೆ.

ಬೆಂಗಳೂರು: ರಾಜ್ಯಾದ್ಯಂತ ತಾಪಮಾನದಲ್ಲಿ ತೀವ್ರ ಇಳಿಕೆಯಾಗುತ್ತಿದ್ದು, ತೀವ್ರ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ರೈತರಿಗೆ ಇದು ದೊಡ್ಡ ಮಟ್ಟದ ನಿರಾಳತೆ ತಂದಿದೆ. ಚಳಿಯ ವಾತಾವರಣವು ಹಿಂಗಾರು (ರಬಿ) ಬೆಳೆಗಳ ಉತ್ತಮ ಫಸಲಿಗೆ ಪೂರಕವಾಗಿದ್ದು, ಕೃಷಿ ವಲಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ವಾತಾವರಣದಲ್ಲಿನ ತಾಪಮಾನ ಕುಸಿತದಿಂದ ಇಬ್ಬನಿ ಬೀಳುತ್ತಿದ್ದು, ಇದು ಮಣ್ಣಿನಲ್ಲಿ ತೇವಾಂಶ ಉಳಿಸಿಕೊಳ್ಳಲು ಹಾಗೂ ಬೆಳೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ ನೈಋತ್ಯ ಮತ್ತು ಈಶಾನ್ಯ ಎರಡೂ ಮುಂಗಾರು ಹಂಗಾಮುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ವಾಡಿಕೆಯ 852 ಮಿ.ಮೀ. ಮಳೆಯ ಬದಲಿಗೆ ಕೇವಲ 551 ಮಿ.ಮೀ. ಮಳೆಯಾಗಿದ್ದು, ಮಳೆ ಕೊರತೆ ದಾಖಲಾಗಿದೆ. ರಾಜ್ಯದ 30 ಜಿಲ್ಲೆಗಳು ಮಳೆ ಕೊರತೆಯ ವ್ಯಾಪ್ತಿಗೆ ಒಳಪಟ್ಟಿವೆ. ಅಕ್ಟೋಬರ್ 1ರಿಂದ ಈವರೆಗೆ ಈಶಾನ್ಯ ಮುಂಗಾರು ಅವಧಿಯಲ್ಲೂ ವಾಡಿಕೆಯ 165 ಮಿ.ಮೀ. ಮಳೆಯ ಬದಲಿಗೆ ಕೇವಲ 90 ಮಿ.ಮೀ. ಮಳೆಯಾಗಿದೆ ಎಂದು ತಿಳಿದುಬಂದಿದೆ.

ಕೃಷಿ ಹವಾಮಾನ ತಜ್ಞ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಎಂ.ಬಿ. ರಾಜೇಗೌಡ ಅವರು ಮಾತನಾಡಿ, ತಾಪಮಾನ ಕುಸಿತ ರೈತರಿಗೆ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.

ಹಿಂಗಾರು ಹಂಗಾಮಿನ ಬಿತ್ತನೆ ಅಕ್ಟೋಬರ್‌ನಲ್ಲಿಯೇ ಆರಂಭವಾಗಿರುತ್ತದೆ. ಈಗ ತಾಪಮಾನ ಇಳಿಕೆಯಾಗುತ್ತಿರುವುದರಿಂದ ಮೇಲ್ಮಣ್ಣಿನಲ್ಲಿ ತೇವಾಂಶ ಮತ್ತು ಇಬ್ಬನಿ ಉಳಿಯಲು ಸಹಕಾರಿಯಾಗುತ್ತದೆ. ಇದರಿಂದ ಜಲವಾಷ್ಪ ಉತ್ಪತ್ತಿಯಾಗಿ ಬೆಳೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ಈಗಾಗಲೇ ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪ್ರಸ್ತುತ ಹವಾಮಾನ ಸ್ವಲ್ಪಮಟ್ಟಿನ ಸಮಾಧಾನ ನೀಡಲಿದೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಕಡಲೆ, ಜೋಳ, ಮೇವು ಮೆಕ್ಕೆಜೋಳ ಮತ್ತು ಹೆಸರುಕಾಳು ಬಿತ್ತನೆ ಮಾಡಿರುವ ರೈತರಿಗೆ ಈ ಹವಾಮಾನದಿಂದ ಅನುಕೂಲವಾಗುವ ಸಾಧ್ಯತೆಯಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಇದೀಗ ಹಿಂಗಾರು ಬೆಳೆಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ತಾಪಮಾನ ನಿರಂತರವಾಗಿ ಕುಸಿಯುತ್ತಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕನಿಷ್ಠ ತಾಪಮಾನ ಮತ್ತಷ್ಟು ಕಡಿಮೆಯಾಗಿದೆ. ಬಾಗಲಕೋಟೆ, ಬೆಳಗಾವಿ, ತುಮಕೂರು, ಹಾವೇರಿ, ಗದಗ, ಧಾರವಾಡ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮತ್ತು ಬಳ್ಳಾರಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 12ರಿಂದ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ತಾಪಮಾನ 7ರಿಂದ 9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರು ತಾಪಮಾನ ಕುಸಿತಕ್ಕೆ ಹವಾಮಾನ ಪರಿಸ್ಥಿತಿಯೇ ಕಾರಣ ಎಂದು ವಿವರಿಸಿದ್ದಾರೆ.

ಮಳೆ ಬೀಳದಿದ್ದಾಗ ಆಕಾಶದಲ್ಲಿ ಮೋಡಗಳು ಕಡಿಮೆಯಾಗಿ ವಾತಾವರಣ ತಿಳಿಯಾಗಿರುತ್ತದೆ. ಇದರಿಂದ ತಾಪಮಾನ ಇಳಿಕೆಯಾಗುತ್ತದೆ. ಉತ್ತರದಿಂದ ದಕ್ಷಿಣದ ಕಡೆಗೆ ತಂಪಾದ ಗಾಳಿ ಬೀಸುತ್ತದೆ. ಈಶಾನ್ಯ ಮುಂಗಾರು ಅವಧಿಯಲ್ಲೂ ತೀವ್ರ ಮಳೆ ಕೊರತೆಯಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಮಳೆ ಕೊರತೆಯಿದ್ದರೂ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಣ್ಣು ಸಂಪೂರ್ಣವಾಗಿ ತೇವಗೊಂಡಿರಲಿಲ್ಲ. ಆದರೆ ಕಪ್ಪು ಮಣ್ಣಿನ ವಿಶೇಷ ಗುಣದಿಂದ ಕಡಿಮೆ ಮಳೆಯಾದರೂ ಅದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಬ್ಬನಿಯಿಂದ ರೂಪುಗೊಳ್ಳುವ ತೇವಾಂಶವೂ ಬೆಳೆಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ನಗರಗಳ ಕನಿಷ್ಠ ತಾಪಮಾನ (ಡಿಗ್ರಿ ಸೆಲ್ಸಿಯಸ್) ಇಂತಿದೆ...

  • ಬೆಳಗಾವಿ 12.9

  • ತುಮಕೂರು 13.3

  • ಬಾಗಲಕೋಟೆ 13.8

  • ಹಾವೇರಿ 14.2

  • ಗದಗ 14.2

  • ಧಾರವಾಡ 14.4

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!

ಮತಪಟ್ಟಿ ಪರಿಷ್ಕರಣೆ ವಿವಾದಕ್ಕೆ ತಿರುಗೇಟು; ಕಲಬುರಗಿಯಲ್ಲಿ BJP ಪಾದಯಾತ್ರೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿ..!

ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆಗೆ ಭಾರತ ಆಹ್ವಾನಿಸಲಿ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್

Haryana: ಸೇನಾ ತರಬೇತಿ ವೇಳೆ ಭೀಕರ ದುರಂತ: ಟ್ಯಾಂಕ್ ಹರಿದು ಇಬ್ಬರು ಯೋಧರು ಸಾವು