ಹಾವೇರಿಯಲ್ಲಿ ಕಬ್ಬಿನ ಜ್ವಾಲೆ: ರಸ್ತೆಗೆ ಕಲ್ಲು-ಮುಳ್ಳು, ಡಿಸಿ ಕಚೇರಿ ಗೇಟ್ ಬಂದ್; ಪರಿಸ್ಥಿತಿ ಉದ್ವಿಗ್ನ!
ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿ ಆವರಣದ ಸುತ್ತಲೂ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ರೈತರನ್ನು ಪರಿಶೀಲಿಸಿದ ಪೊಲೀಸರು, ಕೇವಲ 25 ರೈತ ಮುಖಂಡರಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು.
ಹಾವೇರಿ: ಕಬ್ಬಿಗೆ ಸೂಕ್ತ ದರ ನಿಗದಿ ಸಂಬಂಧ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಜಿಲ್ಲಾಡಳಿತದ ನಡುವೆ ನಡೆದ ನಿರ್ಣಾಯಕ ಮಾತುಕತೆ ವಿಫಲವಾಗಿದ್ದು, ಸೋಮವಾರ ಹಾವೇರಿಯ ದೇವಗಿರಿ ಬಳಿಯಿರುವ ಜಿಲ್ಲಾಧಿಕಾರಿ(ಡಿಸಿ) ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರ ನೇತೃತ್ವದಲ್ಲಿ, ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿ ಆವರಣದ ಸುತ್ತಲೂ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ರೈತರನ್ನು ಪರಿಶೀಲಿಸಿದ ಪೊಲೀಸರು, ಕೇವಲ 25 ರೈತ ಮುಖಂಡರಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು.
ಚುನ್ನಪ್ಪ ಪೂಜಾರಿ, ಶಶಿಕಾಂತ್ ಗುರೂಜಿ, ಅಶೋಕ್ ರೆಡ್ಡಿ ಮತ್ತು ಮಾರಚಾರೆಡ್ಡಿ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ವಿವಿಧ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ವೇಳೆ, ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ನೀಡಬೇಕೆಂಬ ತಮ್ಮ ಬೇಡಿಕೆಯನ್ನು ರೈತರು ಪುನರುಚ್ಚರಿಸಿದರು. ಆದರೆ, ಕಾರ್ಖಾನೆ ಮಾಲೀಕರು ಈ ಬೇಡಿಕೆಯನ್ನು ಒಪ್ಪಲು ನಿರಾಕರಿಸಿದರು. ಕೆಲವರು ಪ್ರತಿ ಟನ್‌ಗೆ 3,000 ರೂಪಾಯಿ ಹಾಗೂ ಇನ್ನು ಕೆಲವರು 3,100 ರೂಪಾಯಿ ನೀಡಲು ಮುಂದಾದರಲ್ಲದೆ, ಇದೇ ಅಂತಿಮ ದರ ಎಂದು ಸ್ಪಷ್ಟಪಡಿಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದರೂ, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.
ಮಾತುಕತೆ ವಿಫಲವಾದ ನಂತರ, ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಹಾಕಲಾಗಿದ್ದ ದೊಡ್ಡ ಶಾಮಿಯಾನದ ಬಳಿ ರೈತರು ಜಮಾಯಿಸಿದರು. ಬೃಹತ್ ಪ್ರತಿಭಟನೆಗೆ ರೈತರ ಸಿದ್ಧತೆಗಳು ಚುರುಕುಗೊಳ್ಳುತ್ತಿದ್ದಂತೆ, ಪೊಲೀಸರು ಕಚೇರಿಯ ಮುಖ್ಯ ದ್ವಾರವನ್ನು ಬಂದ್ ಮಾಡಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು.
ತಮ್ಮ ಬೇಡಿಕೆಯನ್ನು ಒಪ್ಪಲು ಸಕ್ಕರೆ ಕಾರ್ಖಾನೆ ಮಾಲೀಕರು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ರೈತರು, ಮುಖ್ಯ ದ್ವಾರದತ್ತ ನುಗ್ಗಿ ಜಿಲ್ಲಾಧಿಕಾರಿ ಕಚೇರಿಯ ಒಳಗೆ ಪ್ರವೇಶಿಸಲು ಯತ್ನಿಸಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಪ್ರತಿಭಟನಾಕಾರರು ಗೇಟ್ ಅನ್ನು ತಳ್ಳಿ ಒಳಗೆ ನುಗ್ಗಲು ಯತ್ನಿಸಿದರು.
ಸಚಿವರ ಸ್ವಕ್ಷೇತ್ರದಲ್ಲೇ ರೈತರಿಗೆ ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದ ರೈತರು, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಕಾರ್ಖಾನೆ ಮಾಲೀಕರು ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು
ರಸ್ತೆಗೆ ಕಲ್ಲು, ಮುಳ್ಳು
ಮತ್ತೊಂದೆಡೆ, ಯಾವೊಬ್ಬ ಅಧಿಕಾರಿಯೂ ಕಚೇರಿಯಿಂದ ಹೊರಗೆ ಹೋಗದಂತೆ ರೈತರು ಡಿಸಿ ಕಚೇರಿಯ ಎರಡೂ ಗೇಟ್‌ಗಳನ್ನು ಬಂದ್ ಮಾಡಿದ್ದರು. ಅಲ್ಲದೆ, ರಸ್ತೆಗೆ ಕಲ್ಲು, ಕಟ್ಟಿಗೆ ಮತ್ತು ಮುಳ್ಳಿನ ಬೇಲಿ ಹಾಕಿ ಜಿಲ್ಲಾಧಿಕಾರಿ ನಿವಾಸಕ್ಕೆ ಹೋಗುವ ರಸ್ತೆಯನ್ನೂ ತಡೆದಿದ್ದಾರೆ. ಇದರಿಂದ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗಲು ಕಚೇರಿ ಸಿಬ್ಬಂದಿ ಪರದಾಡುವಂತಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೂರ್ವ ವಲಯ ಐಜಿಪಿ ಎನ್. ಸತೀಶ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.