ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮದ್ಯದ ಲೈಸೆನ್ಸ್ ವರ್ಗಾವಣೆ ಗೊಂದಲಕ್ಕೆ ಬ್ರೇಕ್ ಹಾಕಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರಿನ ಅಬಕಾರಿ ಉಪ ಆಯುಕ್ತರು 2026ರ ಸೆಪ್ಟೆಂಬರ್ 3ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ಎಐ ಸೃಷ್ಟಿತ ಚಿತ್ರ
Manjula VN
Updated On : 24 Nov 2026, 8:19 am

ಬೆಂಗಳೂರು: ಪರವಾನಗಿದಾರರ ಮರಣದ ನಂತರ ಅವರ ವಾರಸುದಾರರಿಗೆ ಮದ್ಯದ ಪರವಾನಗಿ (Excise Licence) ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿರುವ ಗೊಂದಲಗಳನ್ನು ನಿವಾರಿಸಲು, 'ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮಗಳು, 1967' ರ ನಿಯಮ 17A ಗೆ ಸೂಕ್ತ ತಿದ್ದುಪಡಿ ತರುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ.

ವಾರಸುದಾರರ ಗುರುತಿಸುವಿಕೆ, ಪರವಾನಗಿ ವರ್ಗಾವಣೆಗೆ ಅವರು ನೀಡುವ ಒಪ್ಪಿಗೆಯ ಪರಿಣಾಮ, ವಿವಾದಿತ ಉಯಿಲುಗಳ ನಿರ್ವಹಣೆ ಹಾಗೂ ಪರವಾನಗಿ ವರ್ಗಾವಣೆ ಕುರಿತು ವಿವಾದ ಉಂಟಾದಾಗ ಯಾವ ಸಂದರ್ಭಗಳಲ್ಲಿ ಸಿವಿಲ್ ನ್ಯಾಯಾಲಯದ ತೀರ್ಪು ಅಗತ್ಯವಾಗುತ್ತದೆ ಎಂಬ ಅಂಶಗಳ ಬಗ್ಗೆ 1967ರ ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮಗಳ 17ಎ ನಿಯಮಕ್ಕೆ ಸೂಕ್ತ ಸ್ಪಷ್ಟನೆ ನೀಡುವ ಅಗತ್ಯವನ್ನು ಪರಿಶೀಲಿಸುವಂತೆ ನ್ಯಾಯಾಲಯ ತಿಳಿಸಿದೆ.

ಬೆಂಗಳೂರಿನ ಅಶ್ವತ್ಥ ನಾರಾಯಣ ರೆಡ್ಡಿ ಹಾಗೂ ಇತರ ಇಬ್ಬರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಈ ಆದೇಶ ನೀಡಿದ್ದಾರೆ.

Advertisement

Advertisement

ಬೆಂಗಳೂರಿನ ಅಬಕಾರಿ ಉಪ ಆಯುಕ್ತರು 2026ರ ಸೆಪ್ಟೆಂಬರ್ 3ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

1967ರ ನಿಯಮಗಳ 17ಎ ಪ್ರಕಾರ, ಪರವಾನಗಿದಾರರು ಮೃತಪಟ್ಟರೆ ಪರವಾನಗಿಯನ್ನು ವರ್ಗಾಯಿಸಲು ಅವಕಾಶವಿದೆ. ಆದರೆ, ಉಯಿಲು ಮಾಡದೆ ಮೃತಪಟ್ಟ ಸಂದರ್ಭದಲ್ಲಿ ವಾರಸುದಾರರ ಹಕ್ಕು ಮತ್ತು ಉಯಿಲಿನ ಆಧಾರದ ಮೇಲೆ ಹಕ್ಕು ಮಂಡಿಸುವವರ ನಡುವೆ ಸ್ಪರ್ಧಾತ್ಮಕ ಹಕ್ಕುಗಳು ಎದುರಾದಾಗ ಯಾರನ್ನು ಕಾನೂನುಬದ್ಧ ವಾರಸುದಾರರೆಂದು ಪರಿಗಣಿಸಬೇಕು ಎಂಬುದನ್ನು ನಿಯಮ ಸ್ಪಷ್ಟವಾಗಿ ವಿವರಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

Also Read

'ಬಸವ ಮಂಟಪ' ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್

ಅಲ್ಲದೆ, ಈಗಾಗಲೇ ಕಾನೂನುಬದ್ಧ ವಾರಸುದಾರರೆಂದು ಒಪ್ಪಿಕೊಂಡಿರುವವರ ನಡುವಿನ ಭಿನ್ನಾಭಿಪ್ರಾಯ ಮತ್ತು ಉಯಿಲಿನ ಆಧಾರದ ಮೇಲೆ ಹಕ್ಕು ಮಂಡಿಸುವ ವ್ಯಕ್ತಿಯ ಆಕ್ಷೇಪಣೆಗಳ ನಡುವಿನ ವ್ಯತ್ಯಾಸವನ್ನೂ ನಿಯಮ ಸಮರ್ಪಕವಾಗಿ ವಿವರಿಸಿಲ್ಲ ಎಂದು ಹೇಳಿದೆ.

ಇವು ಕೇವಲ ಪದಗಳ ಬಳಕೆಗೆ ಸಂಬಂಧಿಸಿದ ಪ್ರಶ್ನೆಗಳಲ್ಲ. ಸ್ಪಷ್ಟ ನಿಯಮಗಳ ಕೊರತೆಯಿಂದಾಗಿ ಪ್ರತಿಯೊಂದು ಆಕ್ಷೇಪಣೆಯನ್ನೂ ಸಿವಿಲ್ ನ್ಯಾಯಾಲಯಕ್ಕೆ ಕೊಂಡೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಅಬಕಾರಿ ಕಾಯ್ದೆಯ 71ನೇ ವಿಧಿಯು ರಾಜ್ಯ ಸರ್ಕಾರಕ್ಕೆ ನಿಯಮಗಳನ್ನು ರೂಪಿಸುವ ಅಧಿಕಾರ ನೀಡುತ್ತದೆ. ಹೀಗಾಗಿ, 17ಎ ನಿಯಮಕ್ಕೆ ಮತ್ತಷ್ಟು ಸ್ಪಷ್ಟನೆ ಅಗತ್ಯವಿದೆಯೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ವಾರಸುದಾರರ ಗುರುತಿಸುವಿಕೆ, ಅವರು ನೀಡುವ ಒಪ್ಪಿಗೆಯ ಪರಿಣಾಮ, ವಿವಾದಿತ ಉಯಿಲುಗಳ ನಿರ್ವಹಣೆ ಹಾಗೂ ಪರವಾನಗಿ ವರ್ಗಾವಣೆಗೆ ಸಂಬಂಧಿಸಿದ ವಿವಾದಗಳಲ್ಲಿ ಯಾವ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯದ ತೀರ್ಪು ಅಗತ್ಯವಾಗುತ್ತದೆ ಎಂಬುದನ್ನು ನಿಯಮಗಳಲ್ಲಿ ಸ್ಪಷ್ಟಪಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಸೂಚಿಸಿದೆ.

ಅಲ್ಲದೆ, ವಾರಸುದಾರಿಕೆಯ ವಿವಾದಗಳು ದೀರ್ಘಕಾಲ ಮುಂದುವರಿದ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಪರವಾನಗಿಯ ಸ್ಥಿತಿಗತಿಯ ಬಗ್ಗೆಯೂ ಸ್ಪಷ್ಟ ನಿಲುವು ರೂಪಿಸುವ ಅಗತ್ಯವಿದೆ. ಈ ವೇಳೆ ಸಾರ್ವಜನಿಕ ಆದಾಯದ ರಕ್ಷಣೆ ಹಾಗೂ ಕಾಯ್ದೆಯಡಿ ನಿಗದಿಪಡಿಸಿರುವ ನಿಯಂತ್ರಣಾತ್ಮಕ ಷರತ್ತುಗಳನ್ನು ಕಾಪಾಡಿಕೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments