ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಉತ್ತೇಜಿಸಲು ರಾಜ್ಯದಲ್ಲಿ 6,342 ಗ್ರಾಮ ಗ್ರಂಥಾಲಯ ಉದ್ಘಾಟನೆ!

ಹೊಸದಾಗಿ ಪ್ರಾರಂಭಿಸಲಾದ ಈ ಶಾಖಾ ಗ್ರಂಥಾಲಯಗಳು ಶನಿವಾರ ಮತ್ತು ಭಾನುವಾರಗಳಂದು, ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ, ಅಂದರೆ ದಿನಕ್ಕೆ ಆರು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.

ಈಶ್ವರ ಖಂಡ್ರೆ
Lingaraj Badiger
Updated On : 24 Nov 2026, 3:04 pm

ಬೆಂಗಳೂರು: ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದ ಲಭ್ಯತೆಯನ್ನು ವಿಸ್ತರಿಸಲು ಮತ್ತು ಅವರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸುವ ಉದ್ದೇಶದಿಂದ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರು ಮಂಗಳವಾರ ರಾಜ್ಯಾದ್ಯಂತ 6,342 ಗ್ರಾಮ ಗ್ರಂಥಾಲಯಗಳನ್ನು ಉದ್ಘಾಟಿಸಿದರು.

ಈ ಹೊಸ ಗ್ರಂಥಾಲಯಗಳು, ಈಗಾಗಲೇ ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 5,888 'ಅರಿವು ಕೇಂದ್ರ'ಗಳ(ಜ್ಞಾನ ಕೇಂದ್ರಗಳು) ಜೊತೆಗೆ ಶಾಖಾ ಗ್ರಂಥಾಲಯಗಳಾಗಿ ಕಾರ್ಯನಿರ್ವಹಿಸುತ್ತವೆ.

ಗ್ರಾಮ ಗ್ರಂಥಾಲ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ಅಸ್ತಿತ್ವದಲ್ಲಿರುವ ಅರಿವು ಕೇಂದ್ರಗಳು ಸಮುದಾಯ ಗ್ರಂಥಾಲಯಗಳಾಗಿ ಮತ್ತು ಡಿಜಿಟಲ್ ಕಲಿಕಾ ಕೇಂದ್ರಗಳಾಗಿ ವಾರದಲ್ಲಿ ಆರು ದಿನಗಳು, ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.

Advertisement

Advertisement

Also Read

ಆರೋಗ್ಯ ಇಲಾಖೆಯಿಂದ ವಿಶೇಷ ತಪಾಸಣಾ ಅಭಿಯಾನ; 112 ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಘಟಕಗಳ ಪರಿಶೀಲನೆ

ಹೊಸದಾಗಿ ಪ್ರಾರಂಭಿಸಲಾದ ಈ ಶಾಖಾ ಗ್ರಂಥಾಲಯಗಳು ಶನಿವಾರ ಮತ್ತು ಭಾನುವಾರಗಳಂದು, ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ, ಅಂದರೆ ದಿನಕ್ಕೆ ಆರು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.

ಈ ಉಪಕ್ರಮದ ಅಗತ್ಯವನ್ನು ವಿವರಿಸಿದ ಸಚಿವರು, ಸಾಮಾನ್ಯವಾಗಿ ಒಂದು ಗ್ರಾಮ ಪಂಚಾಯಿತಿಯು ಜನಸಂಖ್ಯೆಗೆ ಅನುಗುಣವಾಗಿ ನಾಲ್ಕರಿಂದ ಐದು ಹಳ್ಳಿಗಳನ್ನು ಒಳಗೊಂಡಿರುತ್ತದೆ ಮತ್ತು ಮುಖ್ಯ 'ಅರಿವು ಕೇಂದ್ರ'ವು ಪಂಚಾಯಿತಿ ಕೇಂದ್ರ ಕಚೇರಿಯಲ್ಲಿರುತ್ತದೆ ಎಂದು ತಿಳಿಸಿದರು.

ಅನೇಕ ಹಳ್ಳಿಗಳಲ್ಲಿ ಗ್ರಂಥಾಲಯ ಸೌಲಭ್ಯದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ತಲಾ 4 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಶಾಖಾ ಗ್ರಂಥಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹೆಚ್ಚಿಸಲು ಮತ್ತು ಮಕ್ಕಳು ಹಾಗೂ ಯುವಜನರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಈ ಗ್ರಾಮ ಗ್ರಂಥಾಲಯಗಳು ಸಹಕಾರಿಯಾಗಲಿವೆ ಎಂದು ಖಂಡ್ರೆ ಹೇಳಿದರು.

"ಪುಸ್ತಕಗಳು ಜೀವನದಲ್ಲಿ ನಾವು ತಲೆ ಎತ್ತಿ ಬಾಳಲು ಸಹಾಯ ಮಾಡುತ್ತವೆ" ಎಂದು ಹೇಳಿದ ಅವರು, ಇಂದಿನ ಮಕ್ಕಳು ಮತ್ತು ಯುವಜನರು ತಮ್ಮ ಸಮಯವನ್ನು ಹೆಚ್ಚಾಗಿ ಮೊಬೈಲ್ ಫೋನ್ ರೀಲ್ಸ್ ವೀಕ್ಷಿಸಲು ಮತ್ತು ವಿಡಿಯೋ ಗೇಮ್‌ಗಳನ್ನು ಆಡಲು ಕಳೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಅಲ್ಲದೆ, ವಿಶೇಷಚೇತನರಿಗೂ ಈ ಕೇಂದ್ರಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು, ಅವರಿಗೆ ಸಹಾಯಕವಾಗುವ ಕಲಿಕಾ ಸಾಧನಗಳನ್ನು (assistive learning devices) ಒದಗಿಸಲಾಗಿದೆ. ದೃಷ್ಟಿ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಕಲಿಕೆಯ ಅಗತ್ಯಗಳನ್ನು ಬೆಂಬಲಿಸಲು 899 'ಬೀಕನ್ ಲೈಬ್ರರಿ'ಗಳನ್ನು (Beacon Libraries) ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

ಆರು ಮತ್ತು 18 ವರ್ಷ ವಯಸ್ಸಿನ ಮಕ್ಕಳಿಗೆ 'ಅರಿವು ಕೇಂದ್ರ'ಗಳಲ್ಲಿ ಉಚಿತ ಸದಸ್ಯತ್ವವನ್ನು ನೀಡಲಾಗುತ್ತಿದ್ದು, ಇಲ್ಲಿಂದ ಅವರು ಪುಸ್ತಕಗಳನ್ನು ಪಡೆದುಕೊಂಡು ಮನೆಗೆ ಕೊಂಡೊಯ್ದು ಓದಬಹುದಾಗಿದೆ ಎಂದರು.

ಈ ಉಪಕ್ರಮದ ಪರಿಣಾಮವಾಗಿ, ಕರ್ನಾಟಕದಾದ್ಯಂತ ಗ್ರಾಮೀಣ ಗ್ರಂಥಾಲಯಗಳಲ್ಲಿ 51 ಲಕ್ಷಕ್ಕೂ ಹೆಚ್ಚು ಮಕ್ಕಳು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments