ಆನೆ ಸ್ಥಳಾಂತರಕ್ಕೆ ಬ್ರೇಕ್ ? ಉಲ್ಟಾ ಹೊಡೆದ ಶಾಸಕರು; ರಾಜೀನಾಮೆ ಮುಖ್ಯನಾ, ಸಮಸ್ಯೆಗೆ ಪರಿಹಾರ ಮುಖ್ಯನಾ?- ನಯನಾ ಮೋಟಮ್ಮ
ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಅವರು ಸ್ಪೀಕರ್ ಜಿ.ಎಸ್ ಪಾಟೀಲ್ ಅವರನ್ನು ಭೇಟಿಯಾಗಿದ್ದರು.
ಚಿಕ್ಕಮಗಳೂರು: ಹಾಸನದ ಬೇಲೂರು ಭಾಗದಿಂದ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯ ಭಾಗಕ್ಕೆ ಕಾಡಾನೆಗಳನ್ನು ಅಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದ ಚಿಕ್ಕಮಗಳೂರಿನ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಆನೆಗಳನ್ನು ಚಿಕ್ಕಮಗಳೂರು ಭಾಗಕ್ಕೆ ಅಟ್ಟಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೇ ವಿಚಾರವಾಗಿ ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಅವರು ಸ್ಪೀಕರ್ ಜಿ.ಎಸ್ ಪಾಟೀಲ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ನಡೆದ ಚರ್ಚೆ ಬಳಿಕ ರಾಜೀನಾಮೆ ನಿರ್ಧಾರದಿಂದ ಶಾಸಕರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಸಿಎಂ ಡಿ.ಕೆ ಶಿವಕುಮಾರ್ ಅವರು ಮೂವರು ಶಾಸಕರ ಮನವೊಲಿಕೆ ಮಾಡಿದ್ದರು. ಇದಾದ ಬಳಿಕ ರಾಜೀನಾಮೆ ನಿರ್ಧಾರದಿಂದ ಶಾಸಕರು ಹಿಂದೆ ಸರಿದಿದ್ದರು. ಈಗ ಸ್ಪೀಕರ್ ಬಳಿ ಚರ್ಚಿಸಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಶಾಸಕರು ಘೋಷಿಸಿದ್ದಾರೆ.
ಶಾಸಕರ ವಿರೋಧದ ಬೆನ್ನಲ್ಲೇ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಸದ್ಯಕ್ಕೆ ಕೊಂಚ ನಿರಾಳತೆ ಸಿಕ್ಕಂತಾಗಿದೆ. ಆದರೆ ರಾಜೀನಾಮೆ ವಿಚಾರದಲ್ಲಿ ಶಾಸಕಿ ನಯನಾ ಮೋಟಮ್ಮ ನೀಡಿರುವ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
'ರಾಜೀನಾಮೆ ಘೋಷಣೆ ಮಾಡಿದ್ದು ಹೌದು, ಅದನ್ನು ಇನ್ನೂ ವಾಪಸ್ ಪಡೆದಿಲ್ಲ. ನಮ್ಮ ರಾಜೀನಾಮೆ ಮುಖ್ಯನಾ ಅಥವಾ ಜನರ ಸಮಸ್ಯೆಗೆ ಪರಿಹಾರ ಮುಖ್ಯನಾ?' ಎಂದು ನಯನಾ ಮೋಟಮ್ಮ ಪ್ರಶ್ನಿಸಿದ್ದಾರೆ.
ನಮ್ಮ ಹಾಗೂ ಜನರ ಗಮನಕ್ಕೆ ಬಾರದೇ ಕಾರ್ಯಾಚರಣೆ ಮಾಡಿದ್ರು. ಅದು ಗೊತ್ತಾದ ಮೇಲೆ ರಾಜೀನಾಮೆ ಕೊಟ್ಟಿದ್ದು. ಅದು ಸ್ವೀಕಾರ ಆಗಿರಲಿಲ್ಲ. ಜನರಲ್ಲಿ ಭಯ ಆತಂಕ ಇದೆ. ಸ್ಪೀಕರ್ ಅಧಿಕಾರಿಗಳು ಹಾಗೂ ನಮ್ಮ ಜೊತೆ ಮಾತಾಡಿದ್ದಾರೆ. ಮುಂದೆ ನನ್ನ ನಿರ್ಧಾರ ತಿಳಿಸುತ್ತೇನೆ. ನಾವೇನು ಡ್ರಾಮಾ ಮಾಡಿಲ್ಲ. ಡ್ರಾಮಾ, ಹೈಡ್ರಾಮಾ ಅಂತ ನೀವು ಅಂದ್ಕೊಂಡ್ರೆ ಹಾಗೆ ಎಂದುಕೊಳ್ಳಿ. ರಾಜೀನಾಮೆ ಘೋಷಣೆ ಮಾಡಿದ್ದು ಹೌದು, ಅದನ್ನು ಇನ್ನೂ ವಾಪಸ್ ಪಡೆದಿಲ್ಲ. ರಾಜೀನಾಮೆ ಬಗ್ಗೆ ನಾನು ಮಾತಾಡಲ್ಲ. ಜನರ ಸಮಸ್ಯೆ ಬಗೆಹರೀಬೇಕು ಎಂದಿದ್ದಾರೆ.