ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಪಶುವೈದ್ಯಾಧಿಕಾರಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ₹3.5 ಕೋಟಿಗೆ KPSC ಅಧಿಕಾರಿಗಳಿಂದ ಡೀಲ್ ಆಗಿದ್ದು ಹೇಗೆ?; ED ಗೆ ತನಿಖೆಯಲ್ಲಿ ಪ್ರಗತಿ

ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ, ಆರೋಪಿಗಳು ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ಸೋರಿಕೆ ಮಾಡಿ, ಒಟ್ಟು ₹3.50 ಕೋಟಿ ಲಂಚದ ಪೈಕಿ ₹1.82 ಕೋಟಿ ಸಂಗ್ರಹಿಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ.

ಕೆಪಿಎಸ್ ಸಿ
Sumana Upadhyaya
Updated On : 25 Nov 2026, 10:52 am

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ದೂರಿನಲ್ಲಿ ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಉದ್ಯಮಿ ಬಸವರಾಜ್ ಕನ್ನಾಳೆ ಅವರ ವಿವರವಾದ ಹೇಳಿಕೆಗಳನ್ನು ದಾಖಲಿಸಲಾಗಿದೆ.

ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ, ಆರೋಪಿಗಳು ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ಸೋರಿಕೆ ಮಾಡಿ, ಒಟ್ಟು ₹3.50 ಕೋಟಿ ಲಂಚದ ಪೈಕಿ ₹1.82 ಕೋಟಿ ಸಂಗ್ರಹಿಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ಈ ಪೈಕಿ ಪ್ರಶ್ನೆಪತ್ರಿಕೆಗಳಿಗಾಗಿ ₹1.52 ಕೋಟಿ ಹಾಗೂ ಉತ್ತರ ಕೀಗಳಿಗಾಗಿ ₹30 ಲಕ್ಷ ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Also Read

ಮತ್ತೊಂದು ಅಕ್ರಮ? CID ದಾಳಿಯಲ್ಲಿ ಸಿಕ್ಕ ಡೀಲ್ ನೋಟ್ ಬೆನ್ನಲ್ಲೇ, ಸಾರಿಗೆ ಇಲಾಖೆಯ 150 MVI ನೇಮಕಾತಿ ಪಟ್ಟಿ ವಾಪಸ್ ಪಡೆದ KPSC

ಈ ಮೂವರು ಆರೋಪಿಗಳಿಗೆ ಸಂಬಂಧಿಸಿದ ₹1,22,24,440 ಮೌಲ್ಯದ ಆಸ್ತಿಗಳನ್ನು ಇ.ಡಿ. ಜಪ್ತಿ ಮಾಡಿದೆ. ಅಲ್ಲದೆ, ಗಂಗ್ವಾರ್ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಹಾಗೂ ಸಹಚರ ಉಮೇಶ್‌ಗಾಗಿ ₹52.30 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿರುವ ಬಗ್ಗೆಯೂ ಉಲ್ಲೇಖಿಸಿದೆ.

Advertisement

Advertisement

ಆರಂಭದಲ್ಲಿ ಅಭ್ಯರ್ಥಿಗಳಿಗೆ ತಲಾ ₹80 ಲಕ್ಷದವರೆಗೆ ಹಣ ಪಾವತಿಸುವಂತೆ ಕೇಳಲಾಗಿತ್ತು. ಬಳಿಕ ಮಾತುಕತೆ ಮೂಲಕ ಈ ಮೊತ್ತವನ್ನು ₹25 ಲಕ್ಷದಿಂದ ₹40 ಲಕ್ಷಕ್ಕೆ ಇಳಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಕಳೆದ ಜನವರಿ 8ರಂದು ಮಧ್ಯವರ್ತಿಗಳು ಅಭ್ಯರ್ಥಿಗಳ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು, ಬೆಂಗಳೂರಿನ ಸಮೀಪದ ಆರ್ಕಿಡ್ ನಿರ್ವಾಣ ಹೌಸಿಂಗ್ ಸೊಸೈಟಿಗೆ ಕರೆದೊಯ್ದಿದ್ದರು. ಅಲ್ಲಿ ಎರಡೂ ಪ್ರಶ್ನೆಪತ್ರಿಕೆಗಳಿಂದ ಗುರುತು ಮಾಡಲಾಗಿದ್ದ ತಲಾ 70ರಿಂದ 80 ಪ್ರಶ್ನೆಗಳ ಸೆಟ್‌ಗಳನ್ನು ನೀಡಿ, ಉತ್ತರಗಳನ್ನು ಕಂಠಪಾಠ ಮಾಡುವಂತೆ ಸೂಚಿಸಲಾಗಿತ್ತು. ಬಳಿಕ ಮರುದಿನ ಬೆಳಗ್ಗೆ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ದು ಬಿಡಲಾಗಿತ್ತು ಎಂದು ಇ.ಡಿ. ದೂರಿನಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ಅಕ್ರಮದ ಲಾಭ ಪಡೆದಿದ್ದಾರೆ ಎನ್ನಲಾದ 29 ಅಭ್ಯರ್ಥಿಗಳನ್ನು ಇ.ಡಿ. ಗುರುತಿಸಿದೆ. ಇವರು 344.25ರಿಂದ 493.5 ಅಂಕಗಳನ್ನು ಗಳಿಸಿದ್ದಾರೆ. ಇದೇ ವೇಳೆ, ಅರ್ಹತೆ ಹೊಂದಿದ್ದರೂ ಆಯ್ಕೆಯಿಂದ ವಂಚಿತರಾಗಿದ್ದಾರೆ ಎನ್ನಲಾದ 24 ಅಭ್ಯರ್ಥಿಗಳ ವಿವರಗಳನ್ನೂ ಪಟ್ಟಿ ಮಾಡಿದೆ.

ಅಕ್ಟೋಬರ್ 27ರಂದು ನೀಡಿದ ಹೇಳಿಕೆಯಲ್ಲಿ 13ನೇ ರ‍್ಯಾಂಕ್ ಪಡೆದಿದ್ದ ಡಾ. ಬಿ. ವಡಾರಿ ಅವರು, ತಮ್ಮ ಮೊಬೈಲ್ ಫೋನ್ ಅನ್ನು ವಸತಿಗೃಹವೊಂದರಲ್ಲಿ ಬಿಟ್ಟು ಬಂದ ಬಳಿಕ ತಮ್ಮನ್ನು ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು ಎಂದು ವಿವರಿಸಿದ್ದಾರೆ.

ಗುರುತು ತಿಳಿಯದ ವ್ಯಕ್ತಿಯೊಬ್ಬರು ನಮ್ಮನ್ನು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿದರು. ಪ್ರಶ್ನೆಪತ್ರಿಕೆಗಳನ್ನು ನೀಡಲಾಗುತ್ತದೆ, ಸರಿಯಾದ ಉತ್ತರಗಳನ್ನು ಮಾತ್ರ ಕಂಠಪಾಠ ಮಾಡಿಕೊಳ್ಳಬೇಕು ಎಂದು ಕನ್ನಾಳೆ ತಿಳಿಸಿದರು" ಎಂದು ವಡಾರಿ ಹೇಳಿಕೆ ನೀಡಿದ್ದಾರೆ. ಜನವರಿ 9ರಂದು ನಡೆದ ಪರೀಕ್ಷೆಯ ಪ್ರಶ್ನೆಗಳು ಸೋರಿಕೆಯಾಗಿದ್ದ ಪ್ರಶ್ನೆಗಳಿಗೆ ಹೊಂದಿಕೆಯಾಗಿದ್ದವು ಎಂದೂ ಅವರು ದೃಢಪಡಿಸಿದ್ದಾರೆ.

ಗಂಗ್ವಾರ್ ಅವರು ಗುರುತು ಮಾಡಿದ್ದ ಎರಡೂ ಪ್ರಶ್ನೆಪತ್ರಿಕೆಗಳ ಸಾಫ್ಟ್ ಕಾಪಿಗಳನ್ನು ಕನ್ನಾಳೆಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸಾಹುಕಾರ್ ಪರವಾಗಿ ಗೀತಾ ಆರು ಅಭ್ಯರ್ಥಿಗಳ ರೋಲ್ ನಂಬರ್‌ಗಳೊಂದಿಗೆ ತಮ್ಮನ್ನು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ.

ಜನವರಿ 8ರಂದು ಗೀತಾ ಅವರು ಆರು ಅಭ್ಯರ್ಥಿಗಳ ಉತ್ತರ ಕೀಗಳನ್ನು ನನ್ನಿಂದ ಪಡೆದುಕೊಂಡರು. ತಲಾ 80 ಉತ್ತರಗಳಿದ್ದ ಆರು ಪ್ರತ್ಯೇಕ, ಅಂಗೈ ಗಾತ್ರದ ಚೀಟಿಗಳಲ್ಲಿ ಅವುಗಳನ್ನು ನೀಡಲಾಗಿತ್ತು ಎಂದು ಗಂಗ್ವಾರ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಹುಕಾರ್ ಅವರು ಫೇಸ್‌ಟೈಮ್ ಮೂಲಕ ಕರೆ ಮಾಡಿದ ಬಳಿಕ, ಅವರ ಮೇಲಿನ ವಿಶ್ವಾಸದಿಂದ ಉತ್ತರ ಕೀಗಳನ್ನು ಹಂಚಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement