ಬೆಳಗಾವಿ: ಬೆಂಕಿ ಕೆನ್ನಾಲಿಗೆಗೆ 28 ಎಕರೆ ಕಬ್ಬು ಭಸ್ಮ; 1 ಕೋಟಿ ರೂ ನಷ್ಟ! Video
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಹೆಚ್ಚಿನ ಪ್ರಮಾಣದ ಬೆಳೆ ಬೆಂಕಿಗೆ ಆಹುತಿಯಾಗಿತ್ತು.
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನದಿ ಇಂಗಳಗಾವಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕಬ್ಬಿನ ಹೊಲಗಳಿಗೆ ಬೆಂಕಿ ಹೊತ್ತಿಕೊಂಡು ಸುಮಾರು 28 ಎಕರೆ ಪ್ರದೇಶದ ಬೆಳೆ ಸುಟ್ಟು ಭಸ್ಮವಾಗಿದೆ.
ಈ ಅವಘಡದಿಂದ ಸುಮಾರು 1 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದ್ದು, ರೈತರ ಬದುಕಿಗೆ ಬರಸಿಡಿಲು ಬಡಿದಂತಾಗಿದೆ.
ಸ್ಥಳೀಯ ರೈತರಾದ ಬಸಪ್ಪ ಚನ್ನಣ್ಣವರ, ಈರಪ್ಪ ಚನ್ನಣ್ಣವರ, ಗುರುಬಸು ತೇವರಮನಿ, ಚನಗೌಡ ರಾಚಗೌಡರ, ಅಪ್ಪಾಸಾಬ್ ಗಿರಿಮಲ್ಲಣ್ಣವರ ಮತ್ತು ರಾಮಣ್ಣ ಗಿರಿಮಲ್ಲಣ್ಣವರ ಅವರಿಗೆ ಸೇರಿದ ಕಬ್ಬಿನ ಗದ್ದೆಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಹೊಲಗಳಾದ್ಯಂತ ವ್ಯಾಪಿಸಿದ್ದು, ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಹೆಚ್ಚಿನ ಪ್ರಮಾಣದ ಬೆಳೆ ಬೆಂಕಿಗೆ ಆಹುತಿಯಾಗಿತ್ತು.
ಒಂದು ವರ್ಷಕ್ಕೂ ಹೆಚ್ಚು ಕಾಲ ಶ್ರಮಪಟ್ಟು, ಅಪಾರ ಹಣ ಹೂಡಿಕೆ ಮಾಡಿ ಬೆಳೆದಿದ್ದ ಕಬ್ಬಿನ ಬೆಳೆ ಕೈಗೆ ಬರುವ ಹಂತದಲ್ಲಿ ನಾಶವಾಗಿರುವುದು ರೈತರನ್ನು ಕಂಗಾಲಾಗಿಸಿದೆ. ಕಟಾವಿಗೆ ಸಿದ್ಧವಾಗಿದ್ದ ಬೆಳೆ ಕಳೆದುಕೊಂಡಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಪ್ರಮಾಣ ಪರಿಶೀಲಿಸಬೇಕು. ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಘಟನೆಯ ಕಾರಣದ ಬಗ್ಗೆ ಪರಿಶೀಲನೆ ನಡೆಸಬೇಕಿದೆ.