ಪಠ್ಯಪುಸ್ತಕಗಳಲ್ಲೂ 'ಸಂವಿಧಾನದ ಆಶಯ' ಸೇರ್ಪಡೆಗೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್
ದೇಶದಲ್ಲಿ ‘ವೋಟ್ ಚೋರಿ’ ಮೂಲಕ ಸಂವಿಧಾನ ನೀಡಿದ ಹಕ್ಕನ್ನು ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ಹಿಂದುಳಿದವರು, ದಲಿತರು ಮತ್ತು ಮುಸ್ಲಿಮರ ಮತಗಳನ್ನು ಕಿತ್ತುಕೊಳ್ಳುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.
ಮೈಸೂರು: ಸಂವಿಧಾನವು ಕೇವಲ ಕಾನೂನಿನ ಪುಸ್ತಕವಲ್ಲ, ಅದು ಭಾರತೀಯರ ಪವಿತ್ರ ಗ್ರಂಥ ಹಾಗೂ ದೇಶದ ಅಂತರಾತ್ಮ. 140 ಕೋಟಿ ಜನರ ಹಕ್ಕುಗಳನ್ನು ಕಾಪಾಡುವ ಬಹುದೊಡ್ಡ ಶಕ್ತಿಯೇ ಸಂವಿಧಾನ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲಾ ಪಠ್ಯಪುಸ್ತಕಗಳಲ್ಲೂ ಸಂವಿಧಾನದ ಆಶಯಗಳನ್ನು ಅಳವಡಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ನಾನು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನನಗೆ ಗೊತ್ತಿರುವುದು ಒಂದೇ ಜಾತಿ, ಅದು ಮಾನವೀಯತೆ ಜಾತಿ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ತಿಳಿಸುವ ಕೆಲಸ ಆಗಲೇಬೇಕಿದೆ ಎಂದರು.
ದೇಶದಲ್ಲಿ ‘ವೋಟ್ ಚೋರಿ’ ಮೂಲಕ ಸಂವಿಧಾನ ನೀಡಿದ ಹಕ್ಕನ್ನು ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ಹಿಂದುಳಿದವರು, ದಲಿತರು ಮತ್ತು ಮುಸ್ಲಿಮರ ಮತಗಳನ್ನು ಕಿತ್ತುಕೊಳ್ಳುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.