ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ವಾಲ್ಮೀಕಿ ನಿಗಮ ಹಗರಣ: ಶಾಸಕರಾದ ನಾಗೇಂದ್ರ, ಬಸವರಾಜ್ ದದ್ದಲ್‌ಗೆ ಸಿಐಡಿ ಕ್ಲೀನ್ ಚಿಟ್, ಸಾಕ್ಷಿಗಳಾಗಿ ಪರಿಗಣನೆ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸವರಾಜ್ ದದ್ದಲ್ ಅವರಿಗೆ ಸಿಐಡಿ ವಿಶೇಷ ತನಿಖಾ ತಂಡವು ಕ್ಲೀನ್ ಚಿಟ್ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಕಾಂಗ್ರೆಸ್ ಶಾಸಕರಾದ ಬಿ. ನಾಗೇಂದ್ರ, ಬಸವರಾಜ್ ದದ್ದಲ್‌ — Online Desk
Hruthin H P
Updated On : 26 Nov 2026, 8:41 am

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ್ ದದ್ದಲ್ ಅವರಿಗೆ ಸಿಐಡಿ ವಿಶೇಷ ತನಿಖಾ ತಂಡ ಕ್ಲೀನ್ ಚಿಟ್ ನೀಡಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ದೋಷಾರೋಪ ಪಟ್ಟಿಯಲ್ಲಿ ಇವರಿಬ್ಬರನ್ನು ಆರೋಪಿಗಳ ಪಟ್ಟಿಯಿಂದ ಕೈಬಿಟ್ಟು, ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕ್ಲೀನ್ ಚಿಟ್ ಸಿಗಲು ಕಾರಣವೇನು?

ನಿಗಮದ ಹಣವನ್ನು ಮಾಜಿ ಸಚಿವ ಬಿ. ನಾಗೇಂದ್ರ ಅವರು ವೈಯಕ್ತಿಕವಾಗಿ ಅಥವಾ ರಾಜಕೀಯ ಉದ್ದೇಶಕ್ಕೆ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ತನಿಖೆಯಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಸಿಐಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜೊತೆಗೆ, ನಿಗಮದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ನಡುವೆ ನಡೆದ ರಹಸ್ಯ ವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ವಿಚಾರ ಅಂದಿನ ಸಚಿವರಾಗಿದ್ದ ನಾಗೇಂದ್ರ ಅವರ ಗಮನಕ್ಕೆ ಬಂದಿರಲಿಲ್ಲ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

Advertisement

Advertisement

ಹಾಗಾದ್ರೆ, ಪ್ರಮುಖ ಆರೋಪಿಗಳು ಯಾರು?

ಹಗರಣದ ಸಂಪೂರ್ಣ ಸಂಚನ್ನು ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಹೈದರಾಬಾದ್ ಮೂಲದ ಮಧ್ಯವರ್ತಿಗಳಾದ ಸತ್ಯನಾರಾಯಣ ವರ್ಮ ಮತ್ತು ನೆಕ್ಕುಂಟಿ ನಾಗರಾಜ್ ಸೇರಿ ರೂಪಿಸಿದ್ದಾರೆ ಎಂದು ಸಿಐಡಿ ಗುರುತಿಸಿದೆ. ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ, ನಕಲಿ ದಾಖಲೆಗಳ ಮೂಲಕ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿತ್ತು.

Also Read

ವಾಲ್ಮೀಕಿ ನಿಗಮ ಹಗರಣ: ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ ED; 6 ಆರೋಪಿಗಳಿಗೆ ಕೋರ್ಟ್ ಸಮನ್ಸ್..!

ಏತನ್ಮಧ್ಯೆ, ರಾಜ್ಯದ ಸಿಐಡಿ ತನಿಖೆಯಲ್ಲಿ ನಾಗೇಂದ್ರ ಅವರಿಗೆ ದೊಡ್ಡ ಕಾನೂನು ರಿಲೀಫ್ ಸಿಕ್ಕಿದ್ದರೂ, ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಅವರು ಈಗಲೂ ಆರೋಪಿಯಾಗಿಯೇ ಮುಂದುವರಿದಿದ್ದಾರೆ. ಜೂನ್ 2026ರಲ್ಲಿ ಸಿಬಿಐ ಸಲ್ಲಿಸಿದ್ದ ಮೂರು ಚಾರ್ಜ್‌ಶೀಟ್‌ಗಳಲ್ಲಿ ನಾಗೇಂದ್ರ ಸೇರಿದಂತೆ 30 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಏನಿದು ಪ್ರಕರಣ?

2024ರ ಮೇ ತಿಂಗಳಲ್ಲಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್ ಅವರು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡು ಬರೆದಿಟ್ಟ ಮರಣಪೂರ್ವ ಪತ್ರದಿಂದ ಈ ಬಹುಕೋಟಿ ಹಗರಣ ಬಯಲಾಯಿತು. ಅದರಂತೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿಗಮದ ಖಾತೆಯಲ್ಲಿದ್ದ ಸುಮಾರು ₹187 ಕೋಟಿ ಮೊತ್ತದಲ್ಲಿ, ಸುಮಾರು ₹89.62 ಕೋಟಿ ಹಣವನ್ನು ನಕಲಿ ದಾಖಲೆ ಮತ್ತು ಚೆಕ್‌ಗಳ ಮೂಲಕ ತೆಲಂಗಾಣದ ನಕಲಿ ಕಂಪನಿಗಳ ಸುಮಾರು 600 ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement