ಬೇಸಿಗೆ ವಿದ್ಯುತ್ ಅಭಾವ ನೀಗಿಸಲು ಬಲ: 600 ದಿನಗಳ ಬಳಿಕ ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕ-1 ಪುನರಾರಂಭ..!
ರಾಜ್ಯದ ಜಲಾಶಯಗಳಲ್ಲಿ ಕೇವಲ 124 ದಿನಗಳವರೆಗೆ ವಿದ್ಯುತ್ ಉತ್ಪಾದಿಸಲು ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ನವೆಂಬರ್ 26ರ ವೇಳೆಗೆ ರಾಜ್ಯದ ವಿದ್ಯುತ್ ಬಳಕೆ 321 ಮಿಲಿಯನ್ ಯೂನಿಟ್‌ಗಳಷ್ಟಿದ್ದರೆ, ಉತ್ಪಾದನೆ 166 ಮಿಲಿಯನ್ ಯೂನಿಟ್‌ಗಳಷ್ಟಿದೆ.
ಕಾರವಾರ (ಉತ್ತರ ಕನ್ನಡ): ಸತತ 600 ದಿನಗಳ ಸುದೀರ್ಘ ನವೀಕರಣ ಮತ್ತು ನಿರ್ವಹಣಾ ಕಾರ್ಯದ ನಂತರ, ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ 1ನೇ ಘಟಕವು (KGS-1) ಮತ್ತೆ ಕಾರ್ಯಾರಂಭ ಮಾಡಿದೆ. ಇದರಿಂದ ರಾಜ್ಯದ ವಿದ್ಯುತ್ ಕ್ಷೇತ್ರಕ್ಕೆ ದೊಡ್ಡ ಬಲ ಬಂದಂತಾಗಿದೆ.
ನಿರ್ವಹಣಾ ಕಾಮಗಾರಿಗಳಿಗಾಗಿ ಈ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ವಿದ್ಯುತ್ ಉತ್ಪಾದನೆಗೆ ಸಜ್ಜಾಗಿದೆ.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ನವೆಂಬರ್ 22ರಂದು ಕೈಗಾ ಘಟಕವು ಕ್ರಿಟಿಕಾಲಿಟಿ ಹಂತ ತಲುಪಿದೆ ಎಂದು ತಿಳಿಸಿದೆ.
ವರದಿಗಳ ಪ್ರಕಾರ, ರಾಜ್ಯದ ಜಲಾಶಯಗಳಲ್ಲಿ ಕೇವಲ 124 ದಿನಗಳವರೆಗೆ ವಿದ್ಯುತ್ ಉತ್ಪಾದಿಸಲು ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ನವೆಂಬರ್ 26ರ ವೇಳೆಗೆ ರಾಜ್ಯದ ವಿದ್ಯುತ್ ಬಳಕೆ 321 ಮಿಲಿಯನ್ ಯೂನಿಟ್‌ಗಳಷ್ಟಿದ್ದರೆ, ಉತ್ಪಾದನೆ 166 ಮಿಲಿಯನ್ ಯೂನಿಟ್‌ಗಳಷ್ಟಿದೆ. ಇದರಿಂದ 155 ಮಿಲಿಯನ್ ಯೂನಿಟ್‌ಗಳ ಕೊರತೆ ಉಂಟಾಗಿದೆ.
ಕೈಗಾ ಘಟಕ-1 ಮೊದಲ ಬಾರಿಗೆ 2000ರ ಸೆಪ್ಟೆಂಬರ್ 26ರಂದು ಕ್ರಿಟಿಕಾಲಿಟಿ ಹಂತ ತಲುಪಿತ್ತು. ಅದೇ ವರ್ಷದ ಅಕ್ಟೋಬರ್ 12ರಂದು ವಿದ್ಯುತ್ ಉತ್ಪಾದನೆ ಆರಂಭಿಸಿತ್ತು. ನವೆಂಬರ್ 16, 2000ರಂದು ವಾಣಿಜ್ಯ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿತ್ತು. ಅಂದಿನಿಂದ 25 ವರ್ಷಗಳ ಕಾಲ ಈ ಘಟಕ ಕಾರ್ಯನಿರ್ವಹಿಸಿದೆ.
ಇದೂವರೆಗೆ ಈ ಘಟಕ ಒಟ್ಟು 36,619 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿದೆ. ಅಲ್ಲದೆ, ಸತತ 962 ದಿನಗಳ ಕಾಲ ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವ ದಾಖಲೆಯನ್ನೂ ನಿರ್ಮಿಸಿದೆ. ಪ್ರತಿವರ್ಷ ಕನಿಷ್ಠ 1,000 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಗ್ರಿಡ್‌ಗೆ ಪೂರೈಸಿದೆ ಎಂದು ತಿಳಿದುಬಂದಿದೆ.
25 ವರ್ಷಗಳ ಕಾರ್ಯಾಚರಣೆಯ ಬಳಿಕ ರಿಯಾಕ್ಟರ್‌ನ ನಿರ್ವಹಣೆಗಾಗಿ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು. ರಿಯಾಕ್ಟರ್‌ಗೆ ಭಾರಜಲವನ್ನು ಪೂರೈಸುವ ಎನಾಮಾಸ್ ಶೀತಕ ವಾಹಿನಿ ಮತ್ತು ಫೀಡರ್‌ಗಳನ್ನು ಸಂಪೂರ್ಣವಾಗಿ ನವೀಕರಿಸುವ ಅಗತ್ಯವಿತ್ತು ಎಂದು ತಜ್ಞರು ತಿಳಿಸಿದ್ದಾರೆ.
ಸ್ಥಳೀಯ ಕಂಪನಿಗಳ ಸಹಕಾರ ಮತ್ತು ಭಾರತೀಯ ತಂತ್ರಜ್ಞಾನ ಬಳಸಿ 2025ರ ಏಪ್ರಿಲ್‌ನಲ್ಲಿ ಇವುಗಳನ್ನು ಬದಲಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಸಂಪೂರ್ಣ ಇಂಧನ ಮತ್ತು ಭಾರಜಲವನ್ನು ಬದಲಾಯಿಸಲಾಯಿತು. ಹಳೆಯ ಶೀತಕ ವಾಹಿನಿ ಹಾಗೂ ಫೀಡರ್‌ಗಳ ಬದಲಿಗೆ ಹೊಸದನ್ನು ಅಳವಡಿಸಲಾಯಿತು. ಬಳಿಕ ಭಾರಜಲ ತುಂಬಿ, ಹೈಡ್ರೋ ಪರೀಕ್ಷೆ ನಡೆಸಿ ವ್ಯವಸ್ಥೆಯನ್ನು ಕಾರ್ಯಾಚರಣೆಗೆ ಸಿದ್ಧಗೊಳಿಸಲಾಯಿತು ಎಂದು ಕೈಗಾ ಮೂಲಗಳು ತಿಳಿಸಿವೆ.
ಈ ಕಾರ್ಯಕ್ಕಾಗಿ ಸ್ವದೇಶಿ ರೊಬೊಟಿಕ್ ಉಪಕರಣಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಎನ್‌ಪಿಸಿಐಎಲ್ ಎಂಜಿನಿಯರ್‌ಗಳು, ಗುತ್ತಿಗೆ ಕಾರ್ಮಿಕರು ಹಾಗೂ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿಗಳು ಯಶಸ್ವಿಯಾಗಿ ಕಾರ್ಯ ಪೂರ್ಣಗೊಳಿಸಿವೆ. ಇದು ಮಹತ್ವದ ಸಾಧನೆಯಾಗಿದೆ ಎಂದು ಮೂಲಗಳು ತಿಳಿಸಿವೆ.