ಲಿಖಿತ ಭರವಸೆ ನೀಡಲು CM ನಕಾರ: ಧರಣಿ ಮುಂದುವರಿಸಲು ಆಶಾ ಕಾರ್ಯಕರ್ತೆಯರ ನಿರ್ಧಾರ, ‘ಕೇವಲ ₹5,000 ದಲ್ಲಿ ಕುಟುಂಬ ನಡೆಸುವುದು ಹೇಗೆ..? ಎಂದು ಕಣ್ಣೀರು
ನಮ್ಮ ಕುಟುಂಬದಲ್ಲಿ ಏಳು ಜನರಿದ್ದಾರೆ. ಕುಟುಂಬದ ಖರ್ಚುಗಳನ್ನು ನಿಭಾಯಿಸಲು ತಿಂಗಳಿಗೆ ಕನಿಷ್ಠ 15 ಸಾವಿರ ರೂ. ಬೇಕು. ನನ್ನ ಪತಿ ರೈತನಾಗಿದ್ದು, ಈ ವರ್ಷ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ದಿನಸಿ ಸಾಮಗ್ರಿಗಳನ್ನು ಖರೀದಿಸುವುದೂ ಕಷ್ಟವಾಗಿದೆ.
ಬೆಂಗಳೂರು: ಮಾಸಿಕ ₹15,000 ನಿಶ್ಚಿತ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಾವಿರಾರು ಆಶಾ (ASHA) ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ.
ಸರ್ಕಾರದಿಂದ ಸ್ಪಷ್ಟ ಲಿಖಿತ ಆದೇಶ ಹೊರಬೀಳುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.
ಜಪಾನ್ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗೆ ಮರಳಿರುವ ಹಿನ್ನೆಲೆಯಲ್ಲಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಶೀಘ್ರದಲ್ಲೇ ಸಭೆ ನಡೆಸಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತೆಯರಿದ್ದಾರೆ.
ಇದೇ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಾವಿತ್ರಿಬಾಯಿ ಎಂಬ ಕಾರ್ಯಕರ್ತೆ ತಮ್ಮ ಕುಟುಂಬದ ಸಂಕಷ್ಟಗಳನ್ನು ವಿವರಿಸುವಾಗ ಕಣ್ಣೀರಿಟ್ಟರು.
ಹೋರಾಟ 9ನೇ ದಿನಕ್ಕೆ; ಮಳೆ-ಚಳಿ, ಅನಾರೋಗ್ಯಕ್ಕೂ ಜಗ್ಗದ ಆಶಾ ಕಾರ್ಯಕರ್ತೆಯರು, ಪಟ್ಟು ಸಡಿಲಿಸದಿರಲು ನಿರ್ಧಾರ! Video
ನಮ್ಮ ಕುಟುಂಬದಲ್ಲಿ ಏಳು ಜನರಿದ್ದಾರೆ. ಕುಟುಂಬದ ಖರ್ಚುಗಳನ್ನು ನಿಭಾಯಿಸಲು ತಿಂಗಳಿಗೆ ಕನಿಷ್ಠ 15 ಸಾವಿರ ರೂ. ಬೇಕು. ನನ್ನ ಪತಿ ರೈತನಾಗಿದ್ದು, ಈ ವರ್ಷ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ದಿನಸಿ ಸಾಮಗ್ರಿಗಳನ್ನು ಖರೀದಿಸುವುದೂ ಕಷ್ಟವಾಗಿದೆ. ರಾಜ್ಯ ಸರ್ಕಾರ ನೀಡುವ ಕೇವಲ 5 ಸಾವಿರ ರೂ.ನಲ್ಲಿ ಕುಟುಂಬವನ್ನು ಹೇಗೆ ನಿರ್ವಹಿಸಬೇಕು?” ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಕಾರ್ಯಕರ್ತೆ ಮುತ್ತಮ್ಮ ಮಾತನಾಡಿ, “ನನ್ನ ಆರು ವರ್ಷದ ಮಗಳು ಊರಿನಲ್ಲಿ ನೆರೆಮನೆಯವರ ಬಳಿ ಇದ್ದಾಳೆ. ನಾನು ಇಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ. ಮತ್ತೊಬ್ಬ ಮಗಳು ವಸತಿ ನಿಲಯದಲ್ಲಿದ್ದಾಳೆ. ನಮಗೆ ಗೌರವಯುತವಾಗಿ ಬದುಕುವ ಹಕ್ಕು ಇಲ್ಲವೇ? ನಮ್ಮ ಕಷ್ಟಗಳು ಮುಖ್ಯಮಂತ್ರಿಗಳಿಗೆ ತಿಳಿದಿಲ್ಲವೇ?” ಎಂದು ಅಳಲು ತೋಡಿಕೊಂಡರು.
ಇದೇ ವೇಳೆ ಪ್ರತಿಭಟನಾ ಸ್ಥಳದಲ್ಲಿ ಸಮರ್ಪಕ ಮೂಲಸೌಕರ್ಯಗಳಿಲ್ಲ ಎಂದು ಹಲವು ಕಾರ್ಯಕರ್ತೆಯರು ದೂರಿದ್ದಾರೆ.
ಲಭ್ಯವಿರುವ ಸೌಲಭ್ಯಗಳಲ್ಲೇ ಹೇಗೋ ದಿನ ಕಳೆಯುತ್ತಿದ್ದೇವೆ. ಆದರೆ, ನಮ್ಮ ಮಕ್ಕಳಿಗೆ ಇಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಸರ್ಕಾರ ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡು ಮಾತುಕತೆಗೆ ಆಹ್ವಾನಿಸಬೇಕು ಎಂದು ಒತ್ತಾಯಿಸಿದ್ದಾರೆ.