ಬೆಂಗಳೂರು: 2026ರ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕದ ಅಥ್ಲೀಟ್ ಎಂ. ಆರ್. ಪೂವಮ್ಮ ಅವರು ಅದ್ಭುತ ಸಾಧನೆ ಮಾಡಿದ್ದಾರೆ. ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ದೇಶ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೂವಮ್ಮ ಹಾಗೂ ಅವರ ಕುಟುಂಬಸ್ಥರು ಭಾವನಾತ್ಮಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಕಳೆದ 2022 ರ ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು. ಆದರೆ ಈ ಬಾರಿ ಕಿರಣ್ ಪಹಲ್, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ ಭರ್ಜರಿ ಪ್ರದರ್ಶನ ನೀಡಿ ಮತ್ತೆ ಚಿನ್ನವನ್ನು ತನ್ನದಾಗಿಸಿಕೊಂಡಿದೆ.
ಈ ಬಗ್ಗೆ ಖುಷಿ ಹಂಚಿಕೊಂಡ ಪೂವಮ್ಮ, 2002ರಿಂದ 2018ರವರೆಗೆ ಸತತವಾಗಿ ಚಿನ್ನ ಗೆದ್ದಿದ್ದ ನಾವು 2022ರಲ್ಲಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಹೀಗಾಗಿ ಭಾರತೀಯರಾದ ನಾವು ಮತ್ತೆ ಗೆಲ್ಲಬಲ್ಲೆವು ಎಂಬುದನ್ನು ಸಾಬೀತುಪಡಿಸಬೇಕೆಂದು ನಿರ್ಧರಿಸಿದ್ದೆವು, ಇದೀಗ ನಾವು 'ಗೋಲ್ಡನ್ ಗರ್ಲ್ಸ್ ಆರ್ ಬ್ಯಾಕ್' (ಚಿನ್ನದ ಹುಡುಗಿಯರು ಮರಳಿದ್ದಾರೆ) ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ್ದೇವೆ. ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಮೊಳಗುವುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ರಾಷ್ಟ್ರಗೀತೆ ಮೊಳಗಿದಾಗ ರೋಮಾಂಚನವಾಯಿತು ಎಂದು ಹೇಳಿದ್ದಾರೆ.
ತಮ್ಮ 36ನೇ ವಯಸ್ಸಿನಲ್ಲೂ ಯುವ ಅಥ್ಲೀಟ್‌ಗಳಿಗೆ ಸವಾಲು ಹಾಕುವಂತೆ ಓಡಿ ಪದಕ ಗೆದ್ದಿರುವ ಪೂವಮ್ಮ, ತಮ್ಮ ವಯಸ್ಸನ್ನು ಟೀಕಿಸುವವರಿಗೆ ಸೂಕ್ತ ಉತ್ತರವನ್ನೇ ನೀಡಿದ್ದಾರೆ.
"ನನಗೆ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ. ಭಾರತದಲ್ಲಿ ಇಂದಿಗೂ ಕ್ರೀಡಾಪಟುಗಳ ವಯಸ್ಸಿನ ಬಗ್ಗೆ ಹೆಚ್ಚು ಚರ್ಚೆಯಾಗುವುದು ಬೇಸರದ ಸಂಗತಿ. ಕ್ರೀಡಾಪಟುವಿನ ಫಿಟ್‌ನೆಸ್ ಮತ್ತು ಪ್ರದರ್ಶನ ಮಾತ್ರ ಮುಖ್ಯವಾಗಬೇಕೇ ಹೊರತು ವಯಸ್ಸಲ್ಲ. ಇದು ತಮ್ಮ ಟೀಕಾಕಾರರಿಗೆ ತಾವು ನೀಡಿದ Golden Revenge ಎಂದು ಹೇಳಿದ್ದಾರೆ.
ವೃತ್ತಿಪರ ಕ್ರೀಡೆಯ ಹೊರಗಿನವರಿಗೆ ಇಂತಹ ಗೆಲುವು ದೊಡ್ಡ ಸಂಭ್ರಮಾಚರಣೆಗೆ ಕಾರಣವಾಗಬಹುದು. ಆದರೆ ಪೂವಮ್ಮ ಪಾಲಿಗೆ ಸಂಭ್ರಮ ಕೊಂಚ ಸರಳವಾಗಿತ್ತು.
ನಾನು ಹೆಚ್ಚು ಬೆರೆಯುವ ವ್ಯಕ್ತಿಯಲ್ಲ. ಓಡುವುದೇ ನನ್ನ ಏಕೈಕ ಆಸಕ್ತಿ. ಸ್ಥಳ ವೀಕ್ಷಣೆ ಮಾಡುವುದರಲ್ಲಂತೂ ನಾನು ತುಂಬಾ ಕೆಟ್ಟವಳು,” ಎಂದು ನಗುತ್ತಾ ಹೇಳಿದ ಅವರು, ಗುರುವಾರ ಮನೆಗೆ ಮರಳಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಏಷ್ಯನ್ ಗೇಮ್ಸ್‌ಗೆ ಮುನ್ನ ತರಬೇತಿಗೆ ಸಂಪೂರ್ಣ ಗಮನ ನೀಡಿದ್ದ ಪೂವಮ್ಮ ಕಳೆದ ಏಳು ತಿಂಗಳಿಂದ ತಮ್ಮ ತವರು ಮಂಗಳೂರಿಗೂ ಹೋಗಿರಲಿಲ್ಲ. ಆದರೆ, ಫಿನಿಶಿಂಗ್ ಲೈನ್ ದಾಟಿದ ತಕ್ಷಣ ಅವರು ಮಾಡಿದ ಮೊದಲ ಕರೆ ಎಲ್ಲವನ್ನೂ ಸಾರ್ಥಕಗೊಳಿಸಿತು. ಐದು ವರ್ಷಗಳು ಪೂವಮ್ಮ ಅವರಿಗೆ ಕಠಿಣವಾಗಿದ್ದವು. 2021ರಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರಿಗೆ ಎರಡು ವರ್ಷಗಳ ನಿಷೇಧ ವಿಧಿಸಲಾಗಿತ್ತು. ಆ ಬಳಿಕವೂ ತಾವು ಮುನ್ನಡೆಯಲು ಪತಿ ಜಿತಿನ್ ಪಾಲ್ ಕಾರಣ ಎಂದು ಪೂವಮ್ಮ ಹೇಳಿದ್ದಾರೆ.
ನನ್ನ ಕೋಚ್ ತರಬೇತಿ ವೇಳಾಪಟ್ಟಿಯನ್ನು ಕಳುಹಿಸುತ್ತಿದ್ದರು. ನನ್ನ ಪತಿ ತರಬೇತಿ ಮುಂದುವರಿಸಲು ಪ್ರೋತ್ಸಾಹಿಸುತ್ತಿದ್ದರು. ನನ್ನ ತರಬೇತಿ ಕಾರ್ಯಕ್ರಮದ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದರು. ಕಚೇರಿಗೆ ಹೋಗಿ, ಮನೆಗೆ ಮರಳಿ ನನಗೆ ಆಯಾಸವಾಗದಂತೆ ಅಡುಗೆ ಮಾಡುತ್ತಿದ್ದರು. ನನ್ನ ತಾಯಿಯೂ ನನಗೆ ಸಹಾಯ ಮಾಡುತ್ತಿದ್ದರು. ಎಲ್ಲರ ತ್ಯಾಗವೂ ಬಹಳ ಮುಖ್ಯವಾಗಿದೆ. ಹಾಗಾಗಿ ಅವರಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ನೀಡಲು ಸಾಧ್ಯವಾಗಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ಮುನ್ನ ಪೋಲೆಂಡ್‌ನಲ್ಲಿ ನಡೆದ ತರಬೇತಿ ಶಿಬಿರ ಹಾಗೂ ಜಮೈಕಾದ ಕೋಚ್ ಜೆರ್ರಿ ಲೀ ಹೋಲ್ನೆಸ್ ಅವರು 36ನೇ ವಯಸ್ಸಿನಲ್ಲಿ ಸ್ಪರ್ಧಿಸುವ ಬಗ್ಗೆ ಇದ್ದ ಆತಂಕವನ್ನು ನಿವಾರಿಸಲು ನೆರವಾದರು ಎಂದು ಪೂವಮ್ಮ ಹೇಳಿದ್ದಾರೆ.
ಕೆಲವೊಮ್ಮೆ ನನಗೆ ಈ ವಯಸ್ಸಿನಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆಯೇ ಎಂದು ಯೋಚಿಸಿ ಭರವಸೆ ಕಳೆದುಕೊಳ್ಳುತ್ತಿದ್ದೆ. ಆದರೆ, ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ‘ಈಗ ನೀನು ಅತ್ಯುತ್ತಮ ಫಾರ್ಮ್‌ನಲ್ಲಿದ್ದೀಯ. ವಯಸ್ಸಿನ ಬಗ್ಗೆ ಯೋಚಿಸಬೇಡ; ನಿನಗೆ 24 ವರ್ಷ ಎಂದುಕೊಂಡು ಸ್ಪರ್ಧಿಸು’ ಎಂದು ಹೇಳುತ್ತಿದ್ದರು,” ಎಂದು ಸ್ಮರಿಸಿದ್ದಾರೆ.
ಮಹಿಳೆಯರ ರಿಲೇ ತಂಡದ ಹಿಂದಿನ ಗೆಲುವಿನ ಸರಣಿಯನ್ನು ಮರಳಿ ಪಡೆಯುವ ಮಹತ್ವದ ಹೊಣೆಗಾರಿಕೆ ಇದ್ದಾಗ ಒತ್ತಡ ಎದುರಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ವರ್ಷ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರಿಂದ ಸ್ಪರ್ಧಿಸುವ ಮನಸ್ಥಿತಿ ನಮ್ಮಲ್ಲಿತ್ತು. ಆದರೆ, ಏಷ್ಯನ್ ಗೇಮ್ಸ್‌ನಲ್ಲಿ ಒತ್ತಡ ವಿಭಿನ್ನವಾಗಿರುತ್ತದೆ. ಎಷ್ಟೇ ವರ್ಷಗಳ ಅನುಭವವಿದ್ದರೂ ಒತ್ತಡ ಇದ್ದೇ ಇರುತ್ತದೆ. ಸ್ವಲ್ಪ ಆತಂಕವೂ ಅಗತ್ಯ. ಆಗ ಮಾತ್ರ ಅತಿಯಾದ ಆತ್ಮವಿಶ್ವಾಸ ಬರುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಈ ಗೆಲುವಿನೊಂದಿಗೆ ಪೂವಮ್ಮ ಅವರಲ್ಲಿ ಅಸಮಾಧಾನ ಮತ್ತು ಬೇಸರವೂ ಇದೆ. ಕರ್ನಾಟಕ ಸರ್ಕಾರ ರಾಜ್ಯದ ಕ್ರೀಡಾಪಟುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ಅವರು ಹಲವು ಬಾರಿ ಆಗ್ರಹಿಸಿದ್ದರೂ ಯಾವುದೇ ಪ್ರತ್ರಿಕ್ರಿಯೆ ಸಿಕ್ಕಿಲ್ಲ.
“ನನಗೆ ತುಂಬಾ ಬೇಸರವಾಗಿದೆ. ರಿಲೇ ತಂಡದಲ್ಲಿರುವ ನನ್ನ ಕೆಲವು ಸಹ ಆಟಗಾರರಿಗೆ ಮೂರು ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತಿದೆ. ಕೇರಳ ಬಹುಮಾನ ಮೊತ್ತವನ್ನು 50 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಆದರೆ, ಕರ್ನಾಟಕದಲ್ಲಿ ಇನ್ನೂ 35 ಲಕ್ಷ ರೂಪಾಯಿಯಷ್ಟೇ ಇದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆ. ಇದು ಕೇವಲ ಹಣದ ಮೊತ್ತದ ವಿಚಾರವಲ್ಲ. ಸರ್ಕಾರ ನೀಡುವ ಮಾನ್ಯತೆ ನನ್ನ ಸಹ ಆಟಗಾರರಿಗೆ ತಮ್ಮ ರಾಜ್ಯವನ್ನು ಪ್ರತಿನಿಧಿಸಿ ಮುಂದುವರಿಯಲು ಪ್ರೇರಣೆ ನೀಡುತ್ತದೆ. ಕರ್ನಾಟಕ ಸರ್ಕಾರ ಏಕೆ ನಿದ್ದೆ ಮಾಡುತ್ತಿದೆ?” ಎಂದು ಪೂವಮ್ಮ ಪ್ರಶ್ನಿಸಿದ್ದಾರೆ.
ಮನೆಗೆ ಮರಳಿದ ಬಳಿಕ ಈ ವಿಚಾರವನ್ನು ನೇರವಾಗಿ ಮುಖ್ಯಮಂತ್ರಿ ಕಚೇರಿಯ ಗಮನಕ್ಕೆ ತರಲು ಉದ್ದೇಶಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಮುಂದಿನ ಗುರಿ ಏನು ಎಂದು ಕೇಳಿದಾಗ, ಸದ್ಯಕ್ಕೆ ಗೆಲುವಿನ ಕ್ಷಣವನ್ನು ಆನಂದಿಸುತ್ತಿರುವುದಾಗಿ ಪೂವಮ್ಮ ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ನೀವು ನನ್ನನ್ನು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ನೋಡುತ್ತೀರಿ ಎಂಬ ನಿರೀಕ್ಷೆಯಿದೆ. ದೇವರು ನನಗಾಗಿ ಏನು ಇಟ್ಟಿದ್ದಾನೆ ನೋಡೋಣ ಎಂದು ಹೇಳಿದ್ದಾರೆ.