ಶಿವಮೊಗ್ಗ: ಮಲೆನಾಡು ಮತ್ತು ಕರಾವಳಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೂ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೋಮವಾರ ತಿಳಿಸಿದ್ದಾರೆ.
ನಿನ್ನೆಯಷ್ಟೇ ಸೋಮಣ್ಣ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಪ್ರಗತಿಯಲ್ಲಿರುವ ಕಾಮಗಾರಿಗಳು, ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿಜ ಅವರು, ಮುಂದಿನ 25ರಿಂದ 30 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 2027ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನ ಕಾಮಗಾರಿಯನ್ನು ರದ್ದುಗೊಳಿಸಲಾಗುವುದು. ಆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಮುಂದಿನ ಎರಡು ತಿಂಗಳೊಳಗೆ ಹೊಸ ಟೆಂಡರ್ ಆಹ್ವಾನಿಸಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಅವರು ಹೇಳಿದರು.
ಶಿವಮೊಗ್ಗ–ಬೀರೂರು ರೈಲು ಮಾರ್ಗದ ದ್ವಿಪಥ ಕಾಮಗಾರಿಗಾಗಿ ಸಮೀಕ್ಷೆ ನಡೆಯುತ್ತಿದೆ. ಹೊಸದಾಗಿ ಪ್ರಸ್ತಾಪಿಸಲಾಗಿರುವ ಶೃಂಗೇರಿ–ತೀರ್ಥಹಳ್ಳಿ–ಶಿವಮೊಗ್ಗ ರೈಲು ಮಾರ್ಗದ ಯೋಜನೆಯು ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಹೊಸ ರೈಲು ಮಾರ್ಗಗಳ ವಿಸ್ತರಣೆ ಸೇರಿದಂತೆ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಂಗಳೂರು, ಶಿವಮೊಗ್ಗ ಮತ್ತು ಉಡುಪಿ ಭಾಗಗಳಲ್ಲಿ ರೈಲ್ವೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬೇಡಿಕೆಗಳಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
2018ರಲ್ಲಿ ಮಂಜೂರಾಗಿದ್ದ ಶಿವಮೊಗ್ಗ–ಶೃಂಗೇರಿ–ಮಂಗಳೂರು ರೈಲು ಮಾರ್ಗದ ಸಮೀಕ್ಷೆ ಅಂತಿಮ ಹಂತ ತಲುಪಿದೆ ಎಂದು ಸೋಮಣ್ಣ ಮಾಹಿತಿ ನೀಡಿದರು.
178 ಕಿ.ಮೀ. ಉದ್ದದ ತಾಳಗುಪ್ಪ–ಸಿದ್ದಾಪುರ–ಸಿರ್ಸಿ–ಮುಂಡಗೋಡ–ಹುಬ್ಬಳ್ಳಿ ದಕ್ಷಿಣ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. 2025ರಲ್ಲಿ ಹೊಸ ತಾಳಗುಪ್ಪ–ಹೊನ್ನಾವರ ರೈಲು ಮಾರ್ಗಕ್ಕೆ ಮಂಜೂರಾತಿ ದೊರೆತಿದೆ. 173 ಕಿ.ಮೀ. ಉದ್ದದ ಭದ್ರಾವತಿ–ಚನ್ನಗಿರಿ–ಚಿಕ್ಕಜಾಜೂರು ರೈಲು ಮಾರ್ಗದ ಸಮೀಕ್ಷೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.
ಚಿಕ್ಕಮಗಳೂರು–ಶೃಂಗೇರಿ, ಹುಬ್ಬಳ್ಳಿ–ಅಂಕೋಲಾ ಹಾಗೂ ಶಿವಮೊಗ್ಗ–ತೀರ್ಥಹಳ್ಳಿ–ಶೃಂಗೇರಿ ರೈಲು ಮಾರ್ಗಗಳ ಸಮೀಕ್ಷೆ ಆರಂಭಿಸಲು ಸೂಚನೆ ನೀಡಲಾಗಿದೆ. ತುಮಕೂರು ರೈಲು ನಿಲ್ದಾಣವನ್ನು 100 ಕೋಟಿ ರೂ. ವೆಚ್ಚದಲ್ಲಿ ಹಾಗೂ ಶಿವಮೊಗ್ಗ ರೈಲು ನಿಲ್ದಾಣವನ್ನು 50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಆಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗಿರುವ ಸಾಗರ ಮತ್ತು ತಾಳಗುಪ್ಪ ರೈಲು ನಿಲ್ದಾಣಗಳನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ಶಿವಮೊಗ್ಗ ರೈಲು ನಿಲ್ದಾಣದ ಮಾದರಿಯಲ್ಲೇ ಭದ್ರಾವತಿ ರೈಲು ನಿಲ್ದಾಣವನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಕೊಂಕಣ ರೈಲ್ವೆಯ ಪ್ರಗತಿಯಲ್ಲಿರುವ ಕಾಮಗಾರಿಗಳಿಗಾಗಿ 9,000 ಕೋಟಿ ರೂ. ಮಂಜೂರು ಮಾಡಿರುವುದು ಸೇರಿದಂತೆ, ದಶಕಗಳಿಂದ ಬಾಕಿ ಉಳಿದಿದ್ದ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ರಾಜ್ಯದ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಪ್ರಸ್ತುತ ರಾಜ್ಯದಲ್ಲಿ ಸುಮಾರು 52,000 ಕೋಟಿ ರೂ. ಮೊತ್ತದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಒಂದು ರೂಪಾಯಿಯನ್ನೂ ಕೊಡುಗೆಯಾಗಿ ನೀಡಲಾಗುತ್ತಿಲ್ಲ ಎಂದು ತಿಳಿಸಿದರು.