ಹೆಚ್.ಡಿ.ಕುಮಾರಸ್ವಾಮಿ ಪಾದಯಾತ್ರೆ 
ರಾಜ್ಯ

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್‌ ಕೇಸ್‌: ಆರೋಪಿಗಳ ಬಂಧನಕ್ಕೆ HDK ಪಟ್ಟು, ವಿಜಯದಶಮಿ ಬಳಿಕ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ..!

ಸ್ಟಿಂಗ್ ಆಪರೇಷನ್‌ನ ಹಿಂದಿರುವ ಪ್ರಮುಖ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರಿಗೆ ಕುಮಾರಸ್ವಾಮಿ ನೀಡಿದ್ದ ಎರಡು ದಿನಗಳ ಗಡುವು ಮುಕ್ತಾಯಗೊಂಡರೂ ಯಾರನ್ನೂ ಬಂಧಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್‌ನಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಶನಿವಾರ ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸಿದರು.

ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಫ್ರೀಡಂ ಪಾರ್ಕ್‌ವರೆಗೆ ಸಾಗಿತು. ಈ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್‌ನ ಹಿಂದಿರುವ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕದಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ವಿಜಯದಶಮಿ ಬಳಿಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದ ಅವರು, “ನನ್ನ ಹೋರಾಟ ವೈಯಕ್ತಿಕವಾದುದಲ್ಲ” ಎಂದರು.

ಸ್ಟಿಂಗ್ ಆಪರೇಷನ್‌ನ ಹಿಂದಿರುವ ಪ್ರಮುಖ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರಿಗೆ ಕುಮಾರಸ್ವಾಮಿ ನೀಡಿದ್ದ ಎರಡು ದಿನಗಳ ಗಡುವು ಮುಕ್ತಾಯಗೊಂಡರೂ ಯಾರನ್ನೂ ಬಂಧಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜೆಡಿಎಸ್ ಶಾಸಕರು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿ ಅವರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರ ಕಚೇರಿಯತ್ತ ಪಾದಯಾತ್ರೆ ನಡೆಸಿದರು. ಆದರೆ, ಪ್ರತಿಭಟನಾಕಾರರು ಮುಂದೆ ಸಾಗದಂತೆ ಪೊಲೀಸರು ಫ್ರೀಡಂ ಪಾರ್ಕ್‌ನಲ್ಲಿ ಬ್ಯಾರಿಕೇಡ್‌ಗಳು ಹಾಗೂ ಬಸ್‌ಗಳನ್ನು ನಿಯೋಜಿಸಿ ಮೆರವಣಿಗೆಯನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ, ತಳ್ಳಾಟ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಂತರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಬಳಿಕ ನಿಯೋಗದೊಂದಿಗೆ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರನ್ನು ಭೇಟಿಯಾಗಿ, ಸ್ಟಿಂಗ್ ಆಪರೇಷನ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದರು.

ಈ ನಡುವೆ ಪತ್ರಕರ್ತ ರಾಕೇಶ್ ಶೆಟ್ಟಿ, ಬಾಗೇಪಲ್ಲಿ ಪ್ರಶಾಂತ್ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಬಂಧಿಸಬೇಕೆಂದು ಜೆಡಿಎಸ್ ಆಗ್ರಹಿಸಿದೆ. ಮೂವರೂ ಈ ಸ್ಟಿಂಗ್ ಆಪರೇಷನ್‌ನಲ್ಲಿ ಭಾಗಿಯಾಗಿದ್ದಾರೆ ಎಂಬುದು ಪಕ್ಷದ ಆರೋಪವಾಗಿದೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಕೇಶ್ ಶೆಟ್ಟಿ ಜೊತೆ ಸೇರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ರೂಪಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.

ವಿಡಿಯೊವನ್ನು ತಾನೇ ಚಿತ್ರೀಕರಿಸಿರುವುದಾಗಿ ಶೆಟ್ಟಿ ಒಪ್ಪಿಕೊಂಡಿದ್ದಾರೆ ಮತ್ತು ಅದರಲ್ಲಿರುವ ಧ್ವನಿ ಕೂಡ ತಮ್ಮದೇ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ರಾಜಕೀಯ ನಾಯಕರನ್ನು ಗುರಿಯಾಗಿಸಲು ಹಾಗೂ ರಾಜ್ಯದ ರಾಜಕೀಯ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಈ ವಿಡಿಯೊವನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ದೂರಿದರು.

ಈ ಹಿಂದೆ ಹಲವು ಬಾರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿ ಅವರು, ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿವಾದ ಸಿದ್ದರಾಮಯ್ಯ ಅವರಿಗೆ ಮಾತ್ರ ಸೀಮಿತವಾಗಿಲ್ಲ ಎಂಬ ಸುಳಿವು ನೀಡಿದರು.

ಹಾಲಿ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ರಾಜಕೀಯ ನಾಯಕತ್ವದಲ್ಲಿರುವವರೂ ಇಂತಹ ಕಾರ್ಯಾಚರಣೆಗಳಿಗೆ ಗುರಿಯಾಗುವ ಸಾಧ್ಯತೆಯಿದೆ ಎಂಬರ್ಥದಲ್ಲಿ ಅವರು ಮಾತನಾಡಿದರು.

ಎಸ್‌ಐಟಿ ತನಿಖೆ, ಧ್ವನಿ ಮಾದರಿ ಪರೀಕ್ಷೆಗೆ ಜೆಡಿಎಸ್ ಆಗ್ರಹ

ಈ ನಡುವೆ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಿದ ದೂರಿನಲ್ಲಿ, ಸ್ಟಿಂಗ್ ಆಪರೇಷನ್ ಕುರಿತು ಉನ್ನತ ಮಟ್ಟದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕು ಹಾಗೂ ಧ್ವನಿಮುದ್ರಣದ ಸತ್ಯಾಸತ್ಯತೆ ಪತ್ತೆಹಚ್ಚಲು ಧ್ವನಿ ಮಾದರಿ ಪರೀಕ್ಷೆ ನಡೆಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.

ಮಹಿಳೆಯೊಬ್ಬರ ಅರಿವಿಗೆ ಅಥವಾ ಒಪ್ಪಿಗೆಗೆ ಬಾರದಂತೆ ರಾಕೇಶ್ ಶೆಟ್ಟಿ ರಹಸ್ಯವಾಗಿ ವಿಡಿಯೊ ಚಿತ್ರೀಕರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಹಿಳೆ ಮಾಡಿರುವ ಆರೋಪಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಬದಲು, ವಿಡಿಯೊವನ್ನು ಹಲವು ವರ್ಷಗಳ ಕಾಲ ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಪಕ್ಷ ದೂರಿದೆ.

ರಾಜಕೀಯ ಉದ್ದೇಶ, ಪ್ರಚಾರ ಹಾಗೂ ಬ್ಲ್ಯಾಕ್‌ಮೇಲ್‌ಗಾಗಿ ವಿಡಿಯೊವನ್ನು ಬಳಸಿಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯ ವಿರುದ್ಧ ಮಾಧ್ಯಮಗಳ ಮುಂದೆ ಆರೋಪಗಳನ್ನು ಮಾಡುವಂತೆ ಮಹಿಳೆಯನ್ನು ಮನವೊಲಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಆರ್ಥಿಕ ನೆರವು ನೀಡುವ ಭರವಸೆ ನೀಡಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ನಾಯಕರು, ಅಧಿಕಾರಿಗಳು ಹಾಗೂ ಉದ್ಯಮಿಗಳನ್ನು ಗುರಿಯಾಗಿಸಲು ಸಂಪಾದಿತ ಅಥವಾ ತಿರುಚಿದ ಧ್ವನಿಮುದ್ರಣಗಳನ್ನು ಬಳಸುವ ದೊಡ್ಡ ಸಂಚಿನ ಭಾಗವಾಗಿ ಈ ವಿಡಿಯೊ ಇರಬಹುದು ಎಂಬ ಅನುಮಾನವನ್ನೂ ಜೆಡಿಎಸ್ ವ್ಯಕ್ತಪಡಿಸಿದೆ.

ಇದೇ ವೇಳೆ ಪ್ರಸಾರ ಸಂಸ್ಥೆಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿರುವ ಪಕ್ಷ, ಪೊಲೀಸರು ಕ್ರಮ ಕೈಗೊಳ್ಳದಿರುವುದನ್ನೂ ಪ್ರಶ್ನಿಸಿದೆ.

ವಿಡಿಯೊದ ಮೂಲ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಘೋರ ದುರಂತ; ಕಾಲ್ತುಳಿತ ಸಂಭವಿಸಿ 17 ಮಂದಿ ಸಾವು

India vs West Indies: ಮಳೆಯಿಂದಾಗಿ 5ನೇ ಟಿ20 ಪಂದ್ಯ ರದ್ದು; ಎರಡು ತಂಡಕ್ಕೂ ಟ್ರೋಫಿ ಹಂಚಿಕೆ

'ಭಾರತ ತೊರೆಯುವಂತೆ' ನೋಟಿಸ್ ಕಾನೂನು ಬಾಹಿರ: ಹೈಕೋರ್ಟ್‌ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಈ ದೇಶದಲ್ಲಿ ಸ್ಟಿಂಗ್ ಆಪರೇಷನ್ 'ಪಿತಾಮಹ' ಅಂತ ಯಾರಾದ್ರೂ ಇದ್ರೆ ಅದು ಮೋದಿ: ಹಳೇ ಘಟನೆ ಕೆದಕಿದ ಬಿಕೆ ಹರಿಪ್ರಸಾದ್

ಮುಳುಗಿದ ಸರಕು ಹಡಗಿನಿಂದ ಐಫೋನ್‌, ಸುಗಂಧ ದ್ರವ್ಯ ಸಂಗ್ರಹಕ್ಕೆ ಧಾವಿಸಿದ ಇರಾನಿನ ಮೀನುಗಾರರು| video