ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

ಜಂಟಿ ಮಾಲೀಕತ್ವದ ‘A-eKhata’ ಹೊಂದಿರುವವರಿಗೆ Good News: ಪ್ರತ್ಯೇಕ ಇಖಾತಾ ಪಡೆಯಲು ರಾಜ್ಯ ಸರ್ಕಾರ ಅವಕಾಶ..!

ಜಂಟಿ ಮಾಲೀಕತ್ವದ ಎ-ಖಾತಾ ಆಸ್ತಿಯನ್ನು ಮಾಲೀಕರ ಪಾಲಿನ ಅನುಸಾರ ಉಪವಿಭಾಗ ಮಾಡಿ, ಪ್ರತ್ಯೇಕ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರಿನ ಐದು ನಗರ ಪಾಲಿಕೆಗಳು ಇ-ಆಸ್ತಿ 2.0 ಜಾಲತಾಣದಲ್ಲಿ ‘ಪ್ಲಾಟ್ ಉಪವಿಭಾಗ’ ಸೇವೆಯನ್ನು ಆರಂಭಿಸಿವೆ.

ಬೆಂಗಳೂರು: ಬೆಂಗಳೂರಿನ ಸಣ್ಣ ಆಸ್ತಿ ಮಾಲೀಕರು ಹಾಗೂ ಜಂಟಿ ಆಸ್ತಿ ಹೊಂದಿರುವವರ ದಶಕಗಳ ಸಮಸ್ಯೆಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದೆ.

ಒಂದೇ ಆಸ್ತಿಗೆ ಜಂಟಿಯಾಗಿ 'ಎ-ಇಖಾತಾ' (A-eKhata) ಹೊಂದಿರುವ ಮಾಲೀಕರು, ಇನ್ನು ಮುಂದೆ ಆನ್‌ಲೈನ್ ಮೂಲಕವೇ ತಮ್ಮ ಪಾಲಿನ ಆಸ್ತಿಯನ್ನು ವಿಭಜಿಸಿಕೊಂಡು ಸ್ವತಂತ್ರ ಇಖಾತಾ ಪಡೆಯಬಹುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ಜಂಟಿ ಮಾಲೀಕತ್ವದ ಎ-ಖಾತಾ ಆಸ್ತಿಯನ್ನು ಮಾಲೀಕರ ಪಾಲಿನ ಅನುಸಾರ ಉಪವಿಭಾಗ ಮಾಡಿ, ಪ್ರತ್ಯೇಕ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರಿನ ಐದು ನಗರ ಪಾಲಿಕೆಗಳು ಇ-ಆಸ್ತಿ 2.0 ಜಾಲತಾಣದಲ್ಲಿ ‘ಪ್ಲಾಟ್ ಉಪವಿಭಾಗ’ ಸೇವೆಯನ್ನು ಆರಂಭಿಸಿವೆ ಎಂದು ತಿಳಿಸಿದ್ದಾರೆ.

ಶನಿವಾರ ಈ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸೌಲಭ್ಯಕ್ಕಾಗಿ ನಾಗರಿಕರು ಬಹಳ ದಿನಗಳಿಂದ ಕಾಯುತ್ತಿದ್ದರು. ಒಂದೇ ಎ-ಖಾತಾದಲ್ಲಿ ಜಂಟಿ ಮಾಲೀಕತ್ವ ಹೊಂದಿರುವ ಆಸ್ತಿಗಳಿಗೆ ಈ ಸೇವೆ ಅನ್ವಯಿಸುತ್ತದೆ. ಮಾಲೀಕರು ಒಂದೇ ಕುಟುಂಬದವರಾಗಿರಬಹುದು ಅಥವಾ ಕುಟುಂಬಕ್ಕೆ ಸಂಬಂಧವಿಲ್ಲದವರೂ ಆಗಿರಬಹುದು. ಆಸ್ತಿಯಲ್ಲಿ ಪ್ರತಿಯೊಬ್ಬರ ಪಾಲು ಸ್ಪಷ್ಟವಾಗಿ ದಾಖಲಾಗಿದ್ದರೆ, ಅವರ ಪಾಲಿನ ಆಧಾರದಲ್ಲಿ ನಿವೇಶನವನ್ನು ವಿಭಜಿಸಿ, ಪ್ರತ್ಯೇಕ ಹೆಸರಿನಲ್ಲಿ ಎ-ಖಾತಾ ಪಡೆಯಬಹುದು ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಒಂದೇ ಎ-ಖಾತಾದಲ್ಲಿ ಹಲವು ಮಂದಿ ಜಂಟಿಯಾಗಿ ಆಸ್ತಿ ಹೊಂದಿದ್ದಾರೆ. ಅವರು ಸಹೋದರರು, ಸಹೋದರಿಯರು, ವಾರಸುದಾರರು, ಸಂಬಂಧಿಕರು ಅಥವಾ ಕುಟುಂಬಕ್ಕೆ ಸಂಬಂಧಿಸದ ಇತರ ಜಂಟಿ ಮಾಲೀಕರಾಗಿರಬಹುದು. ಈ ಸೇವೆಯು ಪ್ರತಿಯೊಬ್ಬರಿಗೂ ಪ್ರತ್ಯೇಕ ಎ-ಖಾತಾ ಪಡೆಯಲು ನೆರವಾಗಲಿದೆ.

ಈ ಸೌಲಭ್ಯದಿಂದ ಮಾಲೀಕರು ತಮ್ಮ ಪಾಲಿನ ಆಸ್ತಿಯನ್ನು ಮಾರಾಟ ಮಾಡಬಹುದು, ಉಡುಗೊರೆಯಾಗಿ ನೀಡಬಹುದು ಅಥವಾ ಅಡಮಾನ ಇಡಬಹುದು. ತಮ್ಮ ಪಾಲಿನ ಜಾಗಕ್ಕೆ ಕಟ್ಟಡ ನಕ್ಷೆ ಮಂಜೂರಾತಿ ಪಡೆಯುವುದರ ಜೊತೆಗೆ, ಆಸ್ತಿ ತೆರಿಗೆಯನ್ನೂ ಪ್ರತ್ಯೇಕವಾಗಿ ಪಾವತಿಸಬಹುದು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಎದುರಾಗುತ್ತಿದ್ದ ತೊಂದರೆಗಳು ಕಡಿಮೆಯಾಗಲಿವೆ ಎಂದು ತಿಳಿಸಿದರು.

ಕಂದಾಯ ಅಧಿಕಾರಿಗಳು ಮಾತನಾಡಿ, ಉಪವಿಭಾಗ ಪ್ರಕ್ರಿಯೆಗೆ ವಿಧಿಸುವ ಶುಲ್ಕವು ಆಸ್ತಿಯ ಬಳಕೆ ಮತ್ತು ಮಾರ್ಗಸೂಚಿ ಮೌಲ್ಯವನ್ನು (ಗೈಡೆನ್ಸ್ ವ್ಯಾಲ್ಯೂ) ಆಧರಿಸಿರುತ್ತದೆ. ವಸತಿ ಆಸ್ತಿಗೆ ಮಾರ್ಗಸೂಚಿ ಮೌಲ್ಯದ ಶೇ. 2ರಷ್ಟು, ಕೈಗಾರಿಕಾ ಆಸ್ತಿಗೆ ಶೇ. 3ರಷ್ಟು ಹಾಗೂ ವಾಣಿಜ್ಯೇತರ ಮತ್ತು ಇತರ ಆಸ್ತಿಗಳಿಗೆ ಶೇ. 2ರಷ್ಟು ಶುಲ್ಕ ವಿಧಿಸಲಾಗುತ್ತದೆ. ಉದಾಹರಣೆಗೆ, ಒಂದು ಕೋಟಿ ರೂಪಾಯಿ ಮಾರ್ಗಸೂಚಿ ಮೌಲ್ಯ ಹೊಂದಿರುವ ವಸತಿ ನಿವೇಶನಕ್ಕೆ 20,000 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.

ಯಾರು ಅರ್ಜಿ ಸಲ್ಲಿಸಬಹುದು?

  • ಎ-ಖಾತಾದಲ್ಲಿ ವೈಯಕ್ತಿಕ ಪಾಲು ಸ್ಪಷ್ಟವಾಗಿ ದಾಖಲಾಗಿರುವ ಎಲ್ಲ ಜಂಟಿ ಮಾಲೀಕರು ಈ ಸೇವೆಗೆ ಅರ್ಜಿ ಸಲ್ಲಿಸಬಹುದು. ಅವರು ಒಂದೇ ಕುಟುಂಬದವರಾಗಿರಬೇಕೆಂಬ ನಿಯಮವಿಲ್ಲ. ಎ-ಖಾತಾ ಹೊಂದಿರುವ ಆಸ್ತಿಗಳನ್ನು ಮಾತ್ರ ಉಪವಿಭಾಗ ಮಾಡಬಹುದು.

  • 2,000 ಚದರ ಮೀಟರ್‌ವರೆಗಿನ (ಸುಮಾರು 21,500 ಚದರ ಅಡಿ) ನಿವೇಶನಗಳಿಗೆ ಜಂಟಿ ಮಾಲೀಕರ ನಡುವೆ ವಿಭಜನೆ ಮಾಡಿಕೊಳ್ಳಲು ಸರಳ ಹಾಗೂ ತ್ವರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ತಿಯು ಖಾಲಿ ನಿವೇಶನವಾಗಿರಬೇಕು ಅಥವಾ ಕಟ್ಟಡ ಹೊಂದಿರುವ ನಿವೇಶನವಾಗಿರಬೇಕು. ಬಹುಮಹಡಿ ಕಟ್ಟಡಗಳಲ್ಲಿನ ಪ್ರತ್ಯೇಕ ಫ್ಲ್ಯಾಟ್‌ಗಳು ಅಥವಾ ಘಟಕಗಳಿಗೆ ಸಂಬಂಧಿಸಿದ ಎ-ಖಾತಾಗಳನ್ನು ಈ ಸೌಲಭ್ಯದಡಿ ಉಪವಿಭಾಗ ಮಾಡಲು ಅವಕಾಶವಿಲ್ಲ.

  • 2,000 ಚದರ ಮೀಟರ್‌ಗಿಂತ ದೊಡ್ಡದಾದ ನಿವೇಶನಗಳ ಉಪವಿಭಾಗಕ್ಕೆ ಪಟ್ಟಣ ಯೋಜನಾ ವಿಭಾಗದ ಮೂಲಕ ಸಾಮಾನ್ಯ ಪ್ರಕ್ರಿಯೆಯಡಿ ಅನುಮತಿ ಪಡೆಯಬೇಕು.

  • ವಿಭಜನೆಯಿಂದ ರೂಪುಗೊಳ್ಳುವ ಪ್ರತಿಯೊಂದು ನಿವೇಶನವೂ ಮೂರು ಪ್ರಮುಖ ಷರತ್ತುಗಳನ್ನು ಪೂರೈಸಬೇಕು. ಮೊದಲನೆಯದಾಗಿ, ನಿವೇಶನದ ವಿಸ್ತೀರ್ಣ 50 ಚದರ ಮೀಟರ್‌ಗಿಂತ (ಸುಮಾರು 538 ಚದರ ಅಡಿ) ಹೆಚ್ಚಿರಬೇಕು. ಎರಡನೆಯದಾಗಿ, ರಸ್ತೆಗೆ ಕನಿಷ್ಠ ಆರು ಮೀಟರ್ (ಸುಮಾರು 20 ಅಡಿ) ಅಗಲದ ಮುಂಭಾಗ ಹೊಂದಿರಬೇಕು. ಮೂರನೆಯದಾಗಿ, ಸಾರ್ವಜನಿಕ ರಸ್ತೆಗೆ ನೇರವಾಗಿ ಅಥವಾ ಸಾರ್ವಜನಿಕ ರಸ್ತೆಗೆ ಸಂಪರ್ಕ ಕಲ್ಪಿಸುವ ಆಂತರಿಕ ರಸ್ತೆಯ ಮೂಲಕ ಸ್ವತಂತ್ರ ಪ್ರವೇಶ ವ್ಯವಸ್ಥೆ ಇರಬೇಕು.

  • ಕೆಲವು ವಿಭಜಿತ ನಿವೇಶನಗಳು ನೇರವಾಗಿ ಸಾರ್ವಜನಿಕ ರಸ್ತೆಗೆ ಹೊಂದಿಕೊಂಡಿರದಿದ್ದರೆ, ಅವುಗಳಿಗೆ ಆಂತರಿಕ ರಸ್ತೆ ಕಲ್ಪಿಸಬೇಕು. ಅಂತಹ ರಸ್ತೆಯ ಕನಿಷ್ಠ ಅಗಲ 3.5 ಮೀಟರ್‌ (ಸುಮಾರು 11.5 ಅಡಿ) ಇರಬೇಕು. ಈ ಷರತ್ತುಗಳು ಪ್ರತಿಯೊಂದು ನಿವೇಶನಕ್ಕೂ ರಸ್ತೆ ಸಂಪರ್ಕ ಮತ್ತು ಇತರ ನಿಯಮಗಳ ಪಾಲನೆ ಖಚಿತಪಡಿಸುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಜಿಬಿಎಯ ಇ-ಆಸ್ತಿ ಜಾಲತಾಣವಾದ https://GBAeAasthi.karnataka.gov.in ಗೆ ಭೇಟಿ ನೀಡಬೇಕು. ಅಲ್ಲಿ ಪ್ರಸ್ತುತ ಎ-ಖಾತಾದ ಉಪವಿಭಾಗ ಅಥವಾ ವಿಭಜನೆ ಆಯ್ಕೆಯನ್ನು ಆರಿಸಿಕೊಳ್ಳಬೇಕು.

  • ನಂತರ ಜಂಟಿ ಮಾಲೀಕರ ವಿವರಗಳನ್ನು ನಮೂದಿಸಿ, ವಾಸ್ತುಶಿಲ್ಪಿ ಸಿದ್ಧಪಡಿಸಿದ ನಕ್ಷೆಯನ್ನು ಅಪ್‌ಲೋಡ್ ಮಾಡಬೇಕು.

  • ವಿಭಜನೆಯಿಂದ ರೂಪುಗೊಳ್ಳುವ ಪ್ರತಿಯೊಂದು ನಿವೇಶನದ ವಿಸ್ತೀರ್ಣ ಮತ್ತು ಇತರ ವಿವರಗಳನ್ನು ದಾಖಲಿಸಬೇಕು. ಅರ್ಜಿ ಅನುಮೋದನೆಯಾದ ಬಳಿಕ ಮಾತ್ರ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬೇಕು.

  • ಈ ಸೇವೆಗೆ ಸಂಬಂಧಿಸಿದ ನೆರವು ಪಡೆಯಲು ಮಾಲೀಕರು 9480683695 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಪವಿತ್ರ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು..!

Cockroach Janta Partyಗೆ ಕಾಂಗ್ರೆಸ್ ಹಣಕಾಸು ನೆರವು, ಕರ್ನಾಟಕವೇನು ATM ಆಗಿದೆಯೇ..?

ಭಾರತದ ವಿರುದ್ಧದ ಷಡ್ಯಂತ್ರಗಳನ್ನು ಗಂಭೀರವಾಗಿ ಪರಿಗಣಿಸಿ, ವಿದೇಶಿ ಹಣದ ಹರಿವಿಗೆ ಕಡಿವಾಣ ಹಾಕಿ: ಕೇಂದ್ರಕ್ಕೆ ಸಂಸದ ಬೊಮ್ಮಾಯಿ ಆಗ್ರಹ

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್‌ ಕೇಸ್‌: ಆರೋಪಿಗಳ ಬಂಧನಕ್ಕೆ HDK ಪಟ್ಟು, ವಿಜಯದಶಮಿ ಬಳಿಕ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ..!