

ಬೆಂಗಳೂರು: ನಗರದಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಮತ್ತು ಹಳೆಯ ದೀಪಗಳ ಬದಲಾವಣೆ ಕಾರ್ಯವನ್ನು ಪೂರ್ಣಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಅವರು ಅಕ್ಟೋಬರ್ 31ರ ಗಡುವು ನೀಡಿದ್ದಾರೆ.
ಬೀದಿ ದೀಪಗಳ ನಿರ್ವಹಣೆಯಲ್ಲಿ ವಿಫಲವಾಗಿರುವ ಗುತ್ತಿಗೆದಾರರಿಗೆ ಇದtವರೆಗೆ ಒಟ್ಟು 93.67 ಲಕ್ಷ ರೂ. ದಂಡ ವಿಧಿಸಲಾಗಿದೆ. ನಗರವಾಸಿಗಳು ಸಹಾಯ 2.0 ಕುಂದುಕೊರತೆ ಪರಿಹಾರ ವ್ಯವಸ್ಥೆಯ ಮೂಲಕ ಸಲ್ಲಿಸಿದ ದೂರುಗಳ ಆಧಾರದ ಮೇಲೆಯೂ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ನಡೆದ ವರ್ಚುವಲ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಬೀದಿ ದೀಪಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂಬ ವರದಿಗಳನ್ನು ಮಾತ್ರ ಅವಲಂಬಿಸದೆ, ಸ್ಥಳಕ್ಕೆ ತೆರಳಿ ದೀಪಗಳ ಗುಣಮಟ್ಟ ಮತ್ತು ಕಾರ್ಯನಿರ್ವಹಣೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದೀಪಗಳನ್ನು ಸರಿಯಾಗಿ ಅಳವಡಿಸದಿದ್ದರೆ ಅಥವಾ ಅವು ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.
ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರನ್ನು ಅಮಾನತುಗೊಳಿಸಿದ ಬಳಿಕ, ಸಚಿವರು ಬಾಕಿ ಉಳಿದಿರುವ ಲೋಪಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸುವಂತೆ ಹಾಗೂ ಬೀದಿ ದೀಪಗಳ ನಿರ್ವಹಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ನಿರಂತರ ಪರಿಶೀಲನೆಗಳ ಬಳಿಕ ನಗರದ ಹಲವು ಪ್ರದೇಶಗಳಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಮತ್ತು ಹಳೆಯ ದೀಪಗಳ ಬದಲಾವಣೆ ಕಾರ್ಯ ಪೂರ್ಣಗೊಂಡಿದೆ. ಆದರೆ, ಈವರೆಗಿನ ಪ್ರಗತಿ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ, ಉಳಿದಿರುವ ಎಲ್ಲ ಕಾಮಗಾರಿಗಳನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸೋಡಿಯಂ ವೇಪರ್ ಬೀದಿ ದೀಪಗಳನ್ನು ತೆಗೆದು ಎಲ್ಇಡಿ ದೀಪಗಳನ್ನು ಅಳವಡಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೀಪಗಳ ಅಳವಡಿಕೆಗೆ ಮಾತ್ರ ಸೀಮಿತವಾಗದೆ, ಅವು ನಿರಂತರವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ನಿರ್ವಹಣೆಯಲ್ಲಿ ಲೋಪ ಎಸಗುವ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸಚಿವರು ಒತ್ತಿ ಹೇಳಿದರು.
ಇದೇ ವೇಳೆ ಅಧಿಕಾರಿಗಳು ತೀವ್ರ ನಿಗಾ ವಹಿಸುತ್ತಿರುವುದರಿಂದ ಬೀದಿ ದೀಪಗಳಿಗೆ ಸಂಬಂಧಿಸಿದ ದೂರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಂಡುಬಂದಿದೆ. ಸಹಾಯ 2.0 ವ್ಯವಸ್ಥೆಯಲ್ಲಿ ದಾಖಲಾಗುತ್ತಿದ್ದ ದೂರುಗಳ ಸರಾಸರಿ ಸಂಖ್ಯೆ ಜೂನ್ನಲ್ಲಿ ದಿನಕ್ಕೆ 293ರಷ್ಟಿದ್ದರೆ, ಅಕ್ಟೋಬರ್ನಲ್ಲಿ 235ಕ್ಕೆ ಇಳಿದಿದೆ. ಸೆಪ್ಟೆಂಬರ್ 1ರಿಂದ ಅಕ್ಟೋಬರ್ 15ರವರೆಗೆ ಬೀದಿ ದೀಪಗಳಿಗೆ ಸಂಬಂಧಿಸಿದಂತೆ ಒಟ್ಟು 8,186 ದೂರುಗಳು ದಾಖಲಾಗಿದ್ದು, ಈ ಪೈಕಿ 6,765 ದೂರುಗಳನ್ನು ಪರಿಹರಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಇದಲ್ಲದೆ, ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಸ್ವಯಂಚಾಲಿತವಾಗಿ ಮೇಲ್ವಿಚಾರಣೆ ಮಾಡಲು ನೆರವಾಗುವ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CCMS) ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಲು ಕ್ಷೇತ್ರವಾರು ವಿವರವಾದ ವೇಳಾಪಟ್ಟಿಯನ್ನು ಸಲ್ಲಿಸುವಂತೆಯೂ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.