ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ 
ರಾಜ್ಯ

ಕಾನೂನು ವೃತ್ತಿ ದುರ್ಬಲ ಮನಸ್ಸಿನವರಿಗಲ್ಲ, ಇದು ಧೈರ್ಯವಂತರ ಕ್ಷೇತ್ರ: CJI ಸೂರ್ಯ ಕಾಂತ್

ನೀವು ಮುಂದಿನ ದಿನಗಳಲ್ಲಿ ಬೀರಲಿರುವ ಪ್ರಭಾವದ ಅರಿವು ನನಗಿದೆ. ನಿಮ್ಮೆಲ್ಲರಿಂದ ನನಗೆ ಅಪಾರ ನಿರೀಕ್ಷೆಗಳಿವೆ. ಇಲ್ಲಿ ನೀವು ಕಲಿತ ಪಠ್ಯಕ್ರಮವು ನಿಮ್ಮ ಸಹನಶಕ್ತಿಯ ಮಿತಿಯನ್ನೇ ಪರೀಕ್ಷಿಸಿದೆ. ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರು ಧೈರ್ಯಶಾಲಿಗಳಾಗಿರಬೇಕು.

ಬೆಂಗಳೂರು: ಕಾನೂನು ವೃತ್ತಿಯು ಅಪಾರವಾದ ಧೈರ್ಯ ಮತ್ತು ಬೌದ್ಧಿಕ ಸ್ವಾತಂತ್ರ್ಯವನ್ನು ಬಯಸುತ್ತದೆ. ಇದು ಕೇವಲ ಕಾಯ್ದೆ-ಕಾನೂನುಗಳ ಮೇಲಿನ ಪ್ರಾವೀಣ್ಯತೆಯಷ್ಟೇ ಅಲ್ಲ, ನ್ಯಾಯದ ಪರವಾಗಿ ನಿಲ್ಲುವ ಧೀಮಂತಿಕೆಯಾಗಿದೆ. ಹೀಗಾಗಿ, ಕಾನೂನು ವೃತ್ತಿಯು ಧೈರ್ಯವಂತರಿಗೆ ಮಾತ್ರ ಸೀಮಿತವಾಗಿದ್ದು, ದುರ್ಬಲ ಮನಸ್ಸಿನವರಿಗಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿದ್ದಾರೆ. .

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದ ಅವರು, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದರು.

ನೀವು ಮುಂದಿನ ದಿನಗಳಲ್ಲಿ ಬೀರಲಿರುವ ಪ್ರಭಾವದ ಅರಿವು ನನಗಿದೆ. ನಿಮ್ಮೆಲ್ಲರಿಂದ ನನಗೆ ಅಪಾರ ನಿರೀಕ್ಷೆಗಳಿವೆ. ಇಲ್ಲಿ ನೀವು ಕಲಿತ ಪಠ್ಯಕ್ರಮವು ನಿಮ್ಮ ಸಹನಶಕ್ತಿಯ ಮಿತಿಯನ್ನೇ ಪರೀಕ್ಷಿಸಿದೆ. ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರು ಧೈರ್ಯಶಾಲಿಗಳಾಗಿರಬೇಕು. ಕಾನೂನು ಸ್ಥಿರವಾದ ವಿಷಯವಲ್ಲ, ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಕಾನೂನು ವೃತ್ತಿಯಲ್ಲಿ ತೊಡಗಿರುವವರ ಮೂಲಕ ಅದು ಜೀವಂತವಾಗಿರುತ್ತದೆ ಮತ್ತು ವಿಕಸನಗೊಳ್ಳುತ್ತದೆ. ಸಂವಾದದ ಸಾರವನ್ನು ರೂಪಿಸುವ ಪ್ರಮುಖ ವೇದಿಕೆಯೇ ಕಾನೂನು ಶಾಲೆ ಎಂದು ಅಭಿಪ್ರಾಯಪಟ್ಟರು.

ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಲಿಷ್ಠ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವ ಅವಕಾಶ ನಾಗರಿಕರಿಗೆ ಇರಬೇಕು ಎಂದು ಹೇಳಿದರು.

ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಸಂವಿಧಾನವನ್ನು ರಕ್ಷಿಸುವ ವಿಶೇಷ ಜವಾಬ್ದಾರಿ ಯುವ ವಕೀಲರು ಮತ್ತು ನೀತಿ ನಿರೂಪಕರ ಮೇಲಿದೆ. ಸರ್ಕಾರವನ್ನು ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯೇ ಬಲಿಷ್ಠ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವ ವ್ಯವಸ್ಥೆಯೇ ನಿಜವಾದ ಬಲಿಷ್ಠ ಪ್ರಜಾಪ್ರಭುತ್ವ ಎಂದು ಹೇಳಿದರು.

ಇದೇ ವೇಳೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೇಂದ್ರಗಳ ಮಾದರಿಯಲ್ಲಿ, ಕಾನೂನು ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗಾಗಿ ರಾಜ್ಯದಲ್ಲಿ ಪ್ರತ್ಯೇಕ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ಇದಲ್ಲದೆ, ಎನ್‌ಎಲ್‌ಎಸ್‌ಐಯುನಲ್ಲಿ ‘ಸ್ಟಾರ್ಟ್‌ಅಪ್ ಕಾನೂನು ಚಿಕಿತ್ಸಾಲಯ’ ಸ್ಥಾಪನೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ತಿಳಿಸಿದರು. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಕೀಲರು ಯುವ ಉದ್ಯಮಿಗಳಿಗೆ ಉಚಿತ ಕಾನೂನು ಸಲಹೆ ನೀಡಲಿದ್ದಾರೆ ಎಂದರು.

ಇದೇ ವೇಳೆ ನ್ಯಾಯಾಂಗದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆಯೂ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು. ದೇಶದ ನ್ಯಾಯಾಲಯಗಳಲ್ಲಿ ಕೋಟ್ಯಂತರ ಪ್ರಕರಣಗಳು ಬಾಕಿ ಉಳಿದಿದ್ದು, ನ್ಯಾಯಕ್ಕಾಗಿ ವ್ಯಕ್ತಿಗಳು ಮತ್ತು ಕುಟುಂಬಗಳು ಕಾಯುತ್ತಿವೆ ಎಂದು ಹೇಳಿದರು.

ನಮಗೆ ಅದು ಮತ್ತೊಂದು ಪ್ರಕರಣದ ಸಂಖ್ಯೆಯಾಗಿರಬಹುದು. ಆದರೆ, ಸಂಬಂಧಪಟ್ಟ ವ್ಯಕ್ತಿಗೆ ಅದೇ ಅವರ ಇಡೀ ಜೀವನವಾಗಿರಬಹುದು. ನ್ಯಾಯವು ತ್ವರಿತವಾಗಿ, ಸರಳವಾಗಿ, ಕೈಗೆಟುಕುವ ದರದಲ್ಲಿ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಈ ವರ್ಷ ಎನ್‌ಎಲ್‌ಎಸ್‌ಐಯುನಿಂದ ಒಟ್ಟು 1,720 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇವರಲ್ಲಿ ಆರು ಮಂದಿ ಪಿಎಚ್‌ಡಿ, 36 ಮಂದಿ ಮಾಸ್ಟರ್ ಆಫ್ ಪಬ್ಲಿಕ್ ಪಾಲಿಸಿ (ಎಂ.ಪಿ.ಪಿ.), 100 ಮಂದಿ ಮಾಸ್ಟರ್ ಆಫ್ ಲಾಸ್ (ಎಲ್‌ಎಲ್‌.ಎಂ.), 72 ಮಂದಿ ಮೂರು ವರ್ಷದ ಬ್ಯಾಚುಲರ್ ಆಫ್ ಲಾ (ಎಲ್‌ಎಲ್‌.ಬಿ. ಆನರ್ಸ್), 116 ಮಂದಿ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಆರ್ಟ್ಸ್ ಅಂಡ್ ಲಾಸ್ (ಬಿ.ಎ. ಎಲ್‌ಎಲ್‌.ಬಿ. ಆನರ್ಸ್) ಪಡೆದಿದ್ದಾರೆ.

ವಿಶ್ವವಿದ್ಯಾಲಯದ ಆನ್‌ಲೈನ್ ಮತ್ತು ಹೈಬ್ರಿಡ್ ಕಾರ್ಯಕ್ರಮಗಳ ಮೂಲಕ 1,390 ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದಾರೆ. ಘಟಿಕೋತ್ಸವದಲ್ಲಿ ಒಟ್ಟು 24 ವಿದ್ಯಾರ್ಥಿಗಳಿಗೆ 50 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಪವಿತ್ರ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು..!

CM ಡಿಕೆ.ಶಿವಕುಮಾರ್ ಭರವಸೆಗೂ ಜಗ್ಗದ ಕಬ್ಬು ಬೆಳೆಗಾರರು: ಹೋರಾಟ ಮುಂದುವರಿಸಲು ನಿರ್ಧಾರ..!

ಜಂಟಿ ಮಾಲೀಕತ್ವದ ‘A-eKhata’ ಹೊಂದಿರುವವರಿಗೆ Good News: ಪ್ರತ್ಯೇಕ ಇಖಾತಾ ಪಡೆಯಲು ರಾಜ್ಯ ಸರ್ಕಾರ ಅವಕಾಶ..!

Cockroach Janta Partyಗೆ ಕಾಂಗ್ರೆಸ್ ಹಣಕಾಸು ನೆರವು, ಕರ್ನಾಟಕವೇನು ATM ಆಗಿದೆಯೇ..?