ಡ್ರೋನ್‌ಗಳಿಂದ ಅದ್ಭುತ ನವಿಲಿನ ಆಕೃತಿ ರಚಿಸಿ ಗಿನ್ನೆಸ್‌ ದಾಖಲೆ  
ರಾಜ್ಯ

ಮೈಸೂರು ದಸರಾ ಡ್ರೋನ್‌ ಶೋ: 3,473 ಡ್ರೋನ್‌ಗಳಿಂದ ನವಿಲಿನ ಆಕೃತಿ ರಚಿಸಿ ಗಿನ್ನೆಸ್‌ ದಾಖಲೆ

ಮೈಸೂರು ದಸರಾ ಡ್ರೋನ್‌ ಶೋನ ಮೊದಲ ಎರಡು ದಿನಗಳ ಪ್ರದರ್ಶನಗಳ ವೇಳೆ ಪ್ರೇಕ್ಷಕರ ಸಂಖ್ಯೆ ಭಾರಿ ಪ್ರಮಾಣದಲ್ಲಿತ್ತು. ಆಸನ ವ್ಯವಸ್ಥೆಯ ಅಧಿಕೃತ ಸಾಮರ್ಥ್ಯ 33,500 ಆಗಿದ್ದರೂ, 40,000ಕ್ಕೂ ಹೆಚ್ಚು ಜನರು ಮೈದಾನದಲ್ಲಿ ಪ್ರದರ್ಶನ ವೀಕ್ಷಿಸಿದರು.

ಮೈಸೂರು: ಮೈಸೂರು ದಸರಾ ಡ್ರೋನ್‌ ಶೋ ಮತ್ತೊಮ್ಮೆ ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ. ನಿನ್ನೆ ಅಕ್ಟೋಬರ್ 18ರ ರಾತ್ರಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಮೇಲೆ 3,473 ಡ್ರೋನ್‌ಗಳು ಹಾರಾಟ ನಡೆಸಿ, ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಬೃಹತ್‌ ನೃತ್ಯಮಯ ಆಕೃತಿಯನ್ನು ರೂಪಿಸಿದವು. ಈ ಮೂಲಕ ಆಕಾಶದಲ್ಲಿ ಅತಿ ದೊಡ್ಡ ಆಕೃತಿ ರಚಿಸಿದ ಸಾಧನೆಗಾಗಿ ಗಿನ್ನೆಸ್‌ ವಿಶ್ವ ದಾಖಲೆಯನ್ನು ನಿರ್ಮಿಸಲಾಯಿತು.

ಮೈಸೂರು ದಸರಾ ಡ್ರೋನ್‌ ಶೋನ ಮೊದಲ ಎರಡು ದಿನಗಳ ಪ್ರದರ್ಶನಗಳ ವೇಳೆ ಪ್ರೇಕ್ಷಕರ ಸಂಖ್ಯೆ ಭಾರಿ ಪ್ರಮಾಣದಲ್ಲಿತ್ತು. ಆಸನ ವ್ಯವಸ್ಥೆಯ ಅಧಿಕೃತ ಸಾಮರ್ಥ್ಯ 33,500 ಆಗಿದ್ದರೂ, 40,000ಕ್ಕೂ ಹೆಚ್ಚು ಜನರು ಮೈದಾನದಲ್ಲಿ ಪ್ರದರ್ಶನ ವೀಕ್ಷಿಸಿದರು.

ಮತ್ತೊಂದೆಡೆ, 20,000ಕ್ಕೂ ಅಧಿಕ ಮಂದಿ ಮೈದಾನದ ಹೊರಗೆ ಸೇರಿ ಡ್ರೋನ್‌ ಪ್ರದರ್ಶನವನ್ನು ಕಣ್ತುಂಬಿಕೊಂಡರು. ನಗರದಾದ್ಯಂತ ಮನೆಗಳ ಟೆರೇಸ್‌ಗಳು, ಬಾಲ್ಕನಿಗಳು ಹಾಗೂ ರೆಸ್ಟೋರೆಂಟ್‌ಗಳಿಂದಲೂ ಜನರು ಪ್ರದರ್ಶನ ವೀಕ್ಷಿಸಿದರು. ಇದರಿಂದ ಮನೆಗಳ ಮೇಲ್ಛಾವಣಿ ಮತ್ತು ರೆಸ್ಟೋರೆಂಟ್‌ಗಳ ಊಟದ ಮೇಜುಗಳೇ ಪ್ರದರ್ಶನ ವೀಕ್ಷಣೆಯ ಮುಂಚೂಣಿ ಆಸನಗಳಂತಾದವು.

ವೀಕ್ಷಣೆಗೆ ಅನುಕೂಲಕರವಾದ ಪರಿಸ್ಥಿತಿಗಳಲ್ಲಿ ದೊಡ್ಡ ಪ್ರಮಾಣದ ಡ್ರೋನ್‌ ಪ್ರದರ್ಶನಗಳನ್ನು 10 ಕಿ.ಮೀ.ಗೂ ಹೆಚ್ಚು ದೂರದಿಂದ ನೋಡಬಹುದು ಎಂದು ಬೋಟ್‌ಲ್ಯಾಬ್‌ ಡೈನಾಮಿಕ್ಸ್‌ನ ಮಾರ್ಕೆಟಿಂಗ್‌ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ನೇಹಾ ವರ್ಮಾ ತಿಳಿಸಿದ್ದಾರೆ.

ಸ್ಥಳೀಯರಿಗೆ ಮೈಸೂರು ದಸರಾ ಡ್ರೋನ್‌ ಶೋ ಕೇವಲ ಹೊಸ ಆಕರ್ಷಣೆಯಾಗಿ ಉಳಿದಿಲ್ಲ. ಅರಮನೆಯ ದೀಪಾಲಂಕಾರ ವೀಕ್ಷಣೆ ಅಥವಾ ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡುವಷ್ಟೇ ಮಹತ್ವದ ವಾರ್ಷಿಕ ಸಂಪ್ರದಾಯವಾಗಿ ಬೆಳೆದಿದೆ. ಪ್ರದರ್ಶನ ವೀಕ್ಷಿಸಿದವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಾವು ಪ್ರತಿವರ್ಷ ಕುಟುಂಬದೊಂದಿಗೆ ಬರುತ್ತೇವೆ. ದೀಪಗಳಿಂದ ಕಂಗೊಳಿಸುವ ಅರಮನೆಯ ವೀಕ್ಷಣೆಯಂತೆಯೇ ಡ್ರೋನ್‌ ಶೋ ಕೂಡ ನಮ್ಮ ದಸರಾ ಆಚರಣೆಯ ಅವಿಭಾಜ್ಯ ಭಾಗವಾಗಿದೆ ಎಂದು ಮೂರು ತಲೆಮಾರಿನ ಕುಟುಂಬದೊಂದಿಗೆ ಆಗಮಿಸಿದ್ದ ಮೈಸೂರಿನ ನಿವಾಸಿ ರಘುವೇಂದ್ರ ಹೇಳಿದ್ದಾರೆ.

ನಮ್ಮ ರೆಸ್ಟೋರೆಂಟ್‌ನ ಬಾಲ್ಕನಿಯಿಂದಲೇ ಇಡೀ ಡ್ರೋನ್‌ ಪ್ರದರ್ಶನ ಆಕಾಶದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ಮೈಸೂರಿನ ರೆಸ್ಟೋರೆಂಟ್‌ ಮಾಲೀಕ ವಿನೋದ್‌ ಹೇಳಿದ್ದಾರೆ.

ಮೊದಲ ದಿನದ ಮೈಸೂರು ದಸರಾ ಡ್ರೋನ್‌ ಶೋ ಈಗಾಗಲೇ ಸಾಮಾಜಿಕ ಮಾಧ್ಯಮಗಳು ಮತ್ತು ಮೆಸೇಜಿಂಗ್‌ ಗುಂಪುಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುವ ಮೂಲಕ ವೈರಲ್‌ ಆಗಿತ್ತು. ಇದೀಗ 3,473 ಡ್ರೋನ್‌ಗಳಿಂದ ಅದ್ಭುತ ನವಿಲಿನ ಆಕೃತಿ ರಚಿಸಿ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿರುವ ಸುದ್ದಿ ಇನ್ನಷ್ಟು ವೇಗವಾಗಿ ಹರಡುತ್ತಿದ್ದು, ದೇಶದಾದ್ಯಂತ ಗಮನ ಸೆಳೆಯುತ್ತಿದೆ.

ಪ್ರತಿವರ್ಷ ದಸರಾ ಸಂದರ್ಭದಲ್ಲಿ ಮೈಸೂರಿಗೆ ವಿದ್ಯುತ್‌ ದೀಪಾಲಂಕಾರದ ಮೆರುಗು ನೀಡುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌), ಈ ವರ್ಷ 146 ಕಿ.ಮೀ. ಉದ್ದದ ರಸ್ತೆ ಜಾಲಕ್ಕೆ ದೀಪಾಲಂಕಾರ ಮಾಡಿದೆ. ಇದೀಗ ಮೈಸೂರು ದಸರಾ ಡ್ರೋನ್‌ ಶೋ ನಗರದ ರಾತ್ರಿಯ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ.

ಸತತ ಐದನೇ ವರ್ಷ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುತ್ತಿರುವ ಬೋಟ್‌ಲ್ಯಾಬ್‌ ಡೈನಾಮಿಕ್ಸ್‌, ಪ್ರತಿ ವರ್ಷವೂ ಡ್ರೋನ್‌ ಪ್ರದರ್ಶನದ ಪ್ರಮಾಣವನ್ನು ಹೆಚ್ಚಿಸುತ್ತಾ ಬಂದಿದೆ. 2022 ಮತ್ತು 2023ರಲ್ಲಿ 250 ಡ್ರೋನ್‌ಗಳು, 2024ರಲ್ಲಿ 1,500 ಡ್ರೋನ್‌ಗಳು ಹಾಗೂ 2025ರಲ್ಲಿ 3,000 ಡ್ರೋನ್‌ಗಳ ಸಮೂಹದೊಂದಿಗೆ 2,983 ಡ್ರೋನ್‌ಗಳಿಂದ ಹುಲಿಯ ಆಕೃತಿ ರಚಿಸಿ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಲಾಗಿತ್ತು. ಇದೀಗ 2026ರಲ್ಲಿ 3,473 ಡ್ರೋನ್‌ಗಳಿಂದ ನವಿಲಿನ ಆಕೃತಿ ರಚಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಈ ಬಾರಿ ಪ್ರದರ್ಶನದಲ್ಲಿ ಹಲವು ಆಕರ್ಷಕ ದೃಶ್ಯಗಳನ್ನು ರೂಪಿಸಲಾಗಿತ್ತು. ಮುಖ್ಯಮಂತ್ರಿ ಅವರಿಗೆ ಕನ್ನಡದಲ್ಲಿ ದಸರಾ ಶುಭಾಶಯ ಕೋರುವ ಸಂದೇಶ, ಸುರುಳಿಯಾಕಾರದ ನಕ್ಷತ್ರಪುಂಜ, ರಾಷ್ಟ್ರಧ್ವಜ ಹಾರಿಸುವ ಸೈನಿಕ, ಚಿಟ್ಟೆ, ಘರ್ಜಿಸುವ ಸಿಂಹ, ವಿವಿಧ ಕಲ್ಯಾಣ ಯೋಜನೆಗಳ ಸಂಕೇತಗಳಿರುವ ಕರ್ನಾಟಕದ ನಕ್ಷೆ, ವಿಷ್ಣುವಿನ ಸುದರ್ಶನ ಚಕ್ರ, ಶಿವ, ನಂದಿ, ಅಂಬಾರಿ ಆನೆ ಹಾಗೂ ತಾಯಿ ಚಾಮುಂಡೇಶ್ವರಿಯ ಆಕೃತಿಗಳು ಪ್ರೇಕ್ಷಕರ ಗಮನ ಸೆಳೆದವು.

ದಕ್ಷಿಣ ಭಾರತದ ದಸರಾದಿಂದ ಪೂರ್ವ ಭಾರತದ ದುರ್ಗಾಪೂಜೆಯವರೆಗೆ, ಭಾರತದಲ್ಲಿ ಹಬ್ಬಗಳನ್ನು ಆಚರಿಸುವ ವಿಧಾನವನ್ನು ಡ್ರೋನ್‌ ಪ್ರದರ್ಶನಗಳು ಹೇಗೆ ಬದಲಾಯಿಸುತ್ತಿವೆ ಎಂಬುದಕ್ಕೆ ಈ ಕಾರ್ಯಕ್ರಮಗಳು ಸಾಕ್ಷಿಯಾಗಿವೆ. 700ಕ್ಕೂ ಹೆಚ್ಚು ಪ್ರದರ್ಶನಗಳು, 10,000ಕ್ಕೂ ಅಧಿಕ ಡ್ರೋನ್‌ಗಳ ಸಮೂಹ ಮತ್ತು ಈಗ ಎಂಟು ಗಿನ್ನೆಸ್‌ ವಿಶ್ವ ದಾಖಲೆಗಳನ್ನು ಹೊಂದಿರುವ ಬೋಟ್‌ಲ್ಯಾಬ್‌ ಡೈನಾಮಿಕ್ಸ್‌, ಡ್ರೋನ್‌ ಲೈಟ್‌ ಶೋ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.

ಮೈಸೂರು ದಸರಾ ಡ್ರೋನ್‌ ಶೋ ವೀಕ್ಷಿಸಲು ಇನ್ನೂ ಅವಕಾಶವಿದೆ. ನಾಡಹಬ್ಬ ಮೈಸೂರು ದಸರಾ 2026ರ ಅಂಗವಾಗಿ ನಾಳೆ ಮತ್ತು 21ರಂದು ರಾತ್ರಿ 7 ಗಂಟೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಪ್ರದರ್ಶನಗಳು ನಡೆಯಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್​ ನಟ ಟೈಗರ್​ ಶ್ರಾಫ್​ ಶೂಟಿಂಗ್ ಪ್ರಕರಣ: ನೇಪಾಳಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಆರೋಪಿಗಳು!

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣ: ರಾಜಸ್ಥಾನದ ಕೋಟಾದಲ್ಲಿ ಮೂವರ ಬಂಧನ! Video

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಬ್ಯಾಂಡೇಜ್ ಧರಿಸಿರುವ ನಟನ ಫಸ್ಟ್ ಇಮೇಜ್; ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿಎಂ ಏಕನಾಥ್ ಶಿಂಧೆ; Video

ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್: ದಾಳಿ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್; Video

ಕಬ್ಬು ಬೆಳೆಗಾರರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ: ಸಂಧಾನ ಯಶಸ್ವಿ?; Video