ಡಿಸಿಎಂ ಪರಮೇಶ್ವರ್ 
ರಾಜ್ಯ

ರಾಜ್ಯದಲ್ಲಿ ಭೀಕರ ಬರ: 62,481 ಕೋಟಿ ರೂ. ಬೆಳೆ ನಷ್ಟ, ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ

ರಾಜ್ಯದ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಹಾನಿಯ ಪ್ರಮಾಣ ಶೇ.33ರಿಂದ ಶೇ.100ರ ವರೆಗೆ ಇದ್ದು, ಬಹುತೇಕ ಪೀಡಿತ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ತೀವ್ರ ಬರಗಾಲದಿಂದಾಗಿ ಬರೋಬ್ಬರಿ 62,481 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬೆಳೆ ನಷ್ಟ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ತಕ್ಷಣವೇ ಆರ್ಥಿಕ ನೆರವು ನೀಡುವಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದಿರುವ ಅವರು, ರಾಜ್ಯದಲ್ಲಿ ಬರದಿಂದಾಗಿ ರೂ.62,000 ಕೋಟಿಗೂ ಅಧಿಕ ಬೆಳೆ ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ರಾಜ್ಯಕ್ಕೆ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

ರಾಜ್ಯದ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಹಾನಿಯ ಪ್ರಮಾಣ ಶೇ.33ರಿಂದ ಶೇ.100ರ ವರೆಗೆ ಇದ್ದು, ಬಹುತೇಕ ಪೀಡಿತ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮುಂಗಾರು ಮಳೆಯ ಕೊರತೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನೈಋತ್ಯ ಮುಂಗಾರು ಅವಧಿಯಲ್ಲಿ ರಾಜ್ಯಕ್ಕೆ ಸಾಮಾನ್ಯವಾಗಿ 852 ಮಿ.ಮೀ. ಮಳೆಯಾಗಬೇಕಿದ್ದು, ಈ ಬಾರಿ ಕೇವಲ 551 ಮಿ.ಮೀ. ಮಳೆಯಾಗಿದೆ. 1956ರ ನಂತರದ ಮುಂಗಾರು ಅವಧಿಗಳಲ್ಲಿ ಇದು ಎರಡನೇ ಅತಿ ಕಡಿಮೆ ಮಳೆಯಾಗಿದೆಯ ಒಟ್ಟು 122 ಮುಂಗಾರು ದಿನಗಳ ಪೈಕಿ 79 ದಿನ ಮಳೆ ಕೊರತೆ ಉಂಟಾಗಿದೆ. ದೀರ್ಘಕಾಲದ ಒಣಹವೆ ಪರಿಣಾಮ ನಿಂತ ಬೆಳೆಗಳು ನಾಶವಾಗಿದ್ದು, ಕೃಷಿ ಚಟುವಟಿಕೆಗಳಿಗೂ ಅಡ್ಡಿಯಾಗಿದೆ. ಇದರಿಂದ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೆ ಒತ್ತಡ ಉಂಟಾಗಿದೆ. ರಾಜ್ಯ ಸರ್ಕಾರ ಈಗಾಗಲೇ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ ರೂ.20,585 ಕೋಟಿ ನೆರವು ಕೋರಿ ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ ಜಾನುವಾರುಗಳ ಸಂರಕ್ಷಣೆ, ಕುಡಿಯುವ ನೀರು ಪೂರೈಕೆ ಹಾಗೂ ಬೆಳೆ ನಷ್ಟಕ್ಕೆ ಇನ್‌ಪುಟ್ ಸಬ್ಸಿಡಿ ಸೇರಿದಂತೆ ವಿವಿಧ ಪರಿಹಾರ ಕ್ರಮಗಳಿಗೆ ನೆರವು ಕೋರಲಾಗಿದೆ.

ಬರದಿಂದಾಗಿ ರಾಜ್ಯದ ಸುಮಾರು 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ತಕ್ಷಣದ ಪರಿಹಾರವಾಗಿ ರೂ.12,146 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಬರಪೀಡಿತ ತಾಲೂಕುಗಳಲ್ಲಿ ಬೇಸಿಗೆ ರಜೆಯ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಪ್ರಧಾನ ಮಂತ್ರಿ ಪೋಷಣ್ ಯೋಜನೆಯಡಿ ರೂ.427.20 ಕೋಟಿ ಮಂಜೂರು ಮಾಡುವಂತೆಯೂ ಪರಮೇಶ್ವರ್ ಕೋರಿದ್ದಾರೆ.

ಇದೇ ವೇಳೆ ಅಂಗನವಾಡಿ ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ರೂ.70.96 ಕೋಟಿ ನೆರವು ನೀಡುವಂತೆಯೂ ಮನವಿ ಮಾಡಿದ್ದಾರೆ.

ಇದಲ್ಲದೆ, 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿ ಮಾನದಂಡಗಳನ್ನು ಪರಿಷ್ಕರಿಸಲು ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೃಷಿ ಕ್ಷೇತ್ರದ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಹಾಗೂ ಹವಾಮಾನ ವೈಪರೀತ್ಯಗಳಿಂದ ಉಂಟಾಗುತ್ತಿರುವ ಆಘಾತಗಳ ಹೆಚ್ಚುತ್ತಿರುವ ತೀವ್ರತೆ ಮತ್ತು ಪುನರಾವರ್ತನೆಗೆ ಅನುಗುಣವಾಗಿ ನಮ್ಮ ವಿಪತ್ತು ನಿರ್ವಹಣಾ ವ್ಯವಸ್ಥೆಯೂ ಬದಲಾಗಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

Namma Metro ಪ್ರಯಾಣಿಕರಿಗೆ Good News: ಮುಂದಿನ 4-5 ದಿನಗಳಲ್ಲಿ Pink Line ಮೆಟ್ರೋ ಸಂಚಾರಕ್ಕೆ ಅನುಮತಿ ಸಾಧ್ಯತೆ..!

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪ್ರಧಾನಿ ಮೋದಿ, ಸ್ಮಿತ್‌ ಮಚ್ಚಾರ್‌ಗೆ ನೆತನ್ಯಾಹು ಆಹ್ವಾನ!

ನೇಪಾಳದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: 2 ಬಾರಿ ಕಂಪಿಸಿದ ಭೂಮಿ!