ನಮ್ಮ ಮೆಟ್ರೋ ಸಾಂದರ್ಭಿಕ ಚಿತ್ರ Online Desk
ರಾಜ್ಯ

ಮೆಟ್ರೋ ನಿಲ್ದಾಣಗಳಿಗೆ ಜಯಲಲಿತಾ, ಕರುಣಾನಿಧಿ, ಎಂ.ಜಿ.ಆರ್. ಹೆಸರು! ಬೆಂಗಳೂರು-ಹೊಸೂರು ಮೆಟ್ರೋಗೆ ಕನ್ನಡ ಸಂಘಟನೆಗಳ ವಿರೋಧ: ಮಿನಿ ತಮಿಳುನಾಡು ಆಗುತ್ತಾ ಸಿಲಿಕಾನ್ ಸಿಟಿ?

ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ತಮಿಳುನಾಡು ಗಡಿಯ ಅತ್ತಿಬೆಲೆಯವರೆಗೆ (ಹೊಸೂರು ಸಂಪರ್ಕಕ್ಕಾಗಿ) ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕದ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕದಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ, ತಾಂತ್ರಿಕ ಹಾಗೂ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿವೆ. ಅದರಲ್ಲೂ, ಕನ್ನಡಪರ ಸಂಘಟನೆಗಳ ತೀವ್ರ ಪ್ರತಿಭಟನೆಗಳ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಹಾಗೂ ನಮ್ಮ ಮೆಟ್ರೋ ಆಡಳಿತ ಮಂಡಳಿ ನಡುವಿನ ಹೊಸ ತಾಂತ್ರಿಕ ಮತ್ತು ಕಾರ್ಯತಂತ್ರದ ನಿಲುವುಗಳು ಹೊರಬಂದಿವೆ. ಆ ಕುರಿತ ವರದಿ ಇಲ್ಲಿದೆ:

ಮೆಟ್ರೋ ನಿಲ್ದಾಣಗಳಿಗೆ ಜಯಲಲಿತಾ, ಕರುಣಾನಿಧಿ, ಎಂ.ಜಿ.ಆರ್. ಹೆಸರು!

ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಕರವೇ ಮುಖಂಡ ಪ್ರವೀಣ್ ಶೆಟ್ಟಿ ಅವರು, ಗಡಿಯವರೆಗೆ ಮೆಟ್ರೋ ವಿಸ್ತರಣೆ ಮಾಡಿದರೆ ಬೆಂಗಳೂರು ನಗರ ಮಿನಿ ತಮಿಳುನಾಡು ಆಗಿ ಪರಿವರ್ತನೆಯಾಗುವ ಅಪಾಯವಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ರಾಜ್ಯ ಸರ್ಕಾರ ಕೂಡಲೇ ಅತ್ತಿಬೆಲೆ ಮೆಟ್ರೋ ಯೋಜನೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿರುವ ಕರವೇ ಮುಖಂಡ ಪ್ರವೀಣ್ ಶೆಟ್ಟಿ, ಕಾವೇರಿ ನೀರನ್ನು ಬಿಡದ ಹಾಗೂ ಮೇಕೆದಾಟು ಯೋಜನೆಗೆ ಅನುಮತಿ ನೀಡದ ನೆರೆ ರಾಜ್ಯಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಅಗತ್ಯವಿಲ್ಲ ಎಂದು ಪ್ರತಿಪಡಿಸಿದ್ದಾರೆ. ಜೊತೆಗೆ, ಅನುಮತಿ ನೀಡಿದರೆ ಮುಂದೊಂದು ದಿನ ನಿಲ್ದಾಣಗಳಿಗೆ ಜಯಲಲಿತಾ, ಕರುಣಾನಿಧಿ, ಎಂಜಿಆರ್ ಅವರ ಹೆಸರುಗಳನ್ನು ಇಡುವ ಪರಿಸ್ಥಿತಿ ಬರಬಹುದು. ಅದರಲ್ಲೂ, ಇದು ಯಾವುದೇ ಜನಾಂಗೀಯ ದ್ವೇಷದ ಪ್ರಶ್ನೆಯಲ್ಲ, ಬದಲಿಗೆ ಕರ್ನಾಟಕದ ಹಿತಾಸಕ್ತಿಯ ಹಿತದೃಷ್ಟಿಯಿಂದ ಕೈಗೊಂಡಿರುವ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಸಹ ಈ ಹಿಂದೆ, ಹೊಸೂರಿನಲ್ಲಿ ಕಡಿಮೆ ಜೀವನ ವೆಚ್ಚ ಮತ್ತು ಕೈಗಾರಿಕಾ ಭೂಮಿ ಸುಲಭವಾಗಿ ಸಿಗುವುದರಿಂದ, ಈ ಅಂತರರಾಜ್ಯ ಮೆಟ್ರೋ ಯೋಜನೆಯು ಕರ್ನಾಟಕದ ಹೂಡಿಕೆ ಮತ್ತು ಮಾನವ ಸಂಪನ್ಮೂಲವನ್ನು ಹೊಸೂರು ಪಾಲಾಗುವಂತೆ ಮಾಡಿ ರಾಜ್ಯಕ್ಕೆ ಹಿನ್ನಡೆಯಾಗಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದರು. 

ಹಾಗಾದ್ರೆ, ಯೋಜನೆಯ ಪ್ರಸ್ತಾವನೆ ಏನಾಗಿತ್ತು?

ತಮಿಳುನಾಡು ಸರ್ಕಾರವು ಹೊಸೂರಿನಿಂದ ಬೊಮ್ಮಸಂದ್ರದವರೆಗೆ 23 ಕಿ.ಮೀ ಕಾರಿಡಾರ್ ನಿರ್ಮಿಸಲು ಆಸಕ್ತಿ ತೋರಿಸಿತ್ತು. ಅದರಂತೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಹೊಸೂರು-ಬೊಮ್ಮಸಂದ್ರ ಅಂತರರಾಜ್ಯ ಮೆಟ್ರೋ ಯೋಜನೆಗೆ ಶೀಘ್ರ ಅನುಮೋದನೆ ಮತ್ತು ಹಣಕಾಸು ನೆರವು ನೀಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ಹೊಸೂರಿನ ಆರ್ಥಿಕ ಬೆಳವಣಿಗೆ ಮತ್ತು ಸಾವಿರಾರು ಕಾರ್ಮಿಕರ ಪ್ರಯಾಣಕ್ಕೆ ಇದು ಅಗತ್ಯ ಎಂಬುದು ತಮಿಳುನಾಡಿನ ವಾದ ಮಂಡಿಸಿದೆ. ಇದಕ್ಕೆ ಪೂರಕವಾಗಿ ಕರ್ನಾಟಕವು ಬೊಮ್ಮಸಂದ್ರದಿಂದ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಮೂಲಕ ಗಡಿಯವರೆಗೆ 9 ನಿಲ್ದಾಣಗಳಿರುವ ಮಾರ್ಗಕ್ಕೆ ಚಾಲನೆ ನೀಡಲು ಮುಂದಾಗಿತ್ತು. ಆದರೆ ತಾಂತ್ರಿಕ ವ್ಯತ್ಯಾಸಗಳು (BMRCL ನ 750V DC ವಿದ್ಯುತ್ ವ್ಯವಸ್ಥೆ vs ತಮಿಳುನಾಡಿನ 25kV AC ವ್ಯವಸ್ಥೆ) ಮತ್ತು ಪ್ರಸ್ತುತ ಸಾರ್ವಜನಿಕ ಆಕ್ರೋಶದಿಂದಾಗಿ ಈ ಯೋಜನೆಗೆ ದೊಡ್ಡ ವಿಘ್ನ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿಗೆ ದೂರು ನೀಡಿದ ಆಯುಕ್ತರು, ಕೇಂದ್ರ ಹೇಳಿದ್ದೇನು?

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

ರಾಜ್ಯದಲ್ಲಿ ಭೀಕರ ಬರ: 62,481 ಕೋಟಿ ರೂ. ಬೆಳೆ ನಷ್ಟ, ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ

Namma Metro ಪ್ರಯಾಣಿಕರಿಗೆ Good News: ಮುಂದಿನ 4-5 ದಿನಗಳಲ್ಲಿ Pink Line ಮೆಟ್ರೋ ಸಂಚಾರಕ್ಕೆ ಅನುಮತಿ ಸಾಧ್ಯತೆ..!