Namma Metro ಪ್ರಯಾಣಿಕರಿಗೆ Good News: ಮುಂದಿನ 4-5 ದಿನಗಳಲ್ಲಿ Pink Line ಮೆಟ್ರೋ ಸಂಚಾರಕ್ಕೆ ಅನುಮತಿ ಸಾಧ್ಯತೆ..!

2027ರ ಮಧ್ಯಭಾಗದ ವೇಳೆಗೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬ್ಲೂ ಲೈನ್ ಮೆಟ್ರೋ ಮಾರ್ಗವನ್ನು ಕಾರ್ಯಾರಂಭಗೊಳಿಸಲು ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Metro pink line - DK Shivakumar
ಮೆಟ್ರೋ ಗುಲಾಬಿ ಮಾರ್ಗ - ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಗುವ ದಿನ ಹತ್ತಿರ ಬಂದಿದೆ. ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ (Pink Line) ಮೇಲ್ಸೇತುವೆ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಮುಂದಿನ 4-5 ದಿನಗಳಲ್ಲಿ ಅಧಿಕೃತ ಅನುಮತಿ ಸಿಗುವ ಸಾಧ್ಯತೆಯಿದೆ.

ಮೆಟ್ರೋ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಪ್ರಯಾಣಿಕರ ಸೇವೆಗಳನ್ನು ಶೀಘ್ರದಲ್ಲೇ ಆರಂಭಿಸಲು ಅಧಿಕೃತ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಹೇಳಿದ್ದಾರೆ. ಇದೇ ವೇಳೆ, 2027ರ ಮಧ್ಯಭಾಗದ ವೇಳೆಗೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬ್ಲೂ ಲೈನ್ ಮೆಟ್ರೋ ಮಾರ್ಗವನ್ನು ಕಾರ್ಯಾರಂಭಗೊಳಿಸಲು ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭಿಸಲು ಮುಂದಿನ ನಾಲ್ಕೈದು ದಿನಗಳಲ್ಲಿ ಅನುಮತಿ ಸಿಗುವ ನಿರೀಕ್ಷೆಯಿದೆ. ಉದ್ಘಾಟನೆಯ ದಿನಾಂಕವನ್ನು ಆದಷ್ಟು ಬೇಗ ನಿಗದಿಪಡಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ, ಮೆಟ್ರೋ ಮಾರ್ಗದ ಉದ್ಘಾಟನೆಯ ದಿನಾಂಕದ ಕುರಿತು ಕೇಂದ್ರದಿಂದ ಅಧಿಕೃತವಾಗಿಯಾಗಲಿ, ಅನಧಿಕೃತವಾಗಿಯಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿಯಾಗಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ಬ್ಲೂ ಲೈನ್ ಕಾಮಗಾರಿಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಪ್ರಗತಿ ಕುರಿತು ಸಭೆ ನಡೆಸಿದ ಸಚಿವರು ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಯೋಜನೆಯು ಈಗಾಗಲೇ ಕನಿಷ್ಠ ಒಂದು ವರ್ಷ ವಿಳಂಬವಾಗಿದೆ ಎಂದು ಹೇಳಿದ್ದಾರೆ.

ಕೆ.ಆರ್.ಪುರ ಸಮೀಪ ಮರಗಳನ್ನು ಕಡಿಯಲು ಅನುಮತಿ ಪಡೆಯುವ ವಿಚಾರದಲ್ಲಿ ಎದುರಾದ ಕಾನೂನು ತೊಡಕುಗಳಿಂದಾಗಿ ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಎರಡನೇ ಹಂತದ 2ಎ ಕಾಮಗಾರಿಗಳು ಸುಮಾರು ಒಂದು ವರ್ಷ ವಿಳಂಬವಾಗಿವೆ. ಮರಗಳ ಸಮಿತಿಯಿಂದ ಅನುಮತಿ ದೊರೆತಿದ್ದರೂ, ಕಾನೂನು ಸಂಬಂಧಿತ ಅಡೆತಡೆಗಳು ಕಾಮಗಾರಿಗೆ ತೊಂದರೆ ಉಂಟುಮಾಡಿದ್ದವು.

ಇದಲ್ಲದೆ, ವೀರಣ್ಣಪಾಳ್ಯದಿಂದ ಹೆಬ್ಬಾಳದವರೆಗಿನ ಮಾರ್ಗದಲ್ಲಿ ಕಾವೇರಿ ನೀರು ಸರಬರಾಜು ಕೊಳವೆಗಳು ಮತ್ತು ಭೂಗತ ಒಳಚರಂಡಿ ಕೊಳವೆಗಳನ್ನು ಸ್ಥಳಾಂತರಿಸುವ ಅಥವಾ ಬದಲಿಸುವ ಅಗತ್ಯ ಎದುರಾದ ಕಾರಣ ಕಾಮಗಾರಿಗಳು ಆರರಿಂದ ಎಂಟು ತಿಂಗಳು ವಿಳಂಬವಾಗಿವೆ. ಹೊರವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ರಾತ್ರಿ 7 ಗಂಟೆಯಿಂದ ಬೆಳಗಿನ ಜಾವದವರೆಗೆ ಮಾತ್ರ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದ್ದಾರೆ.

ಇದೇ ವೇಳೆ ಗುತ್ತಿಗೆದಾರರು ನಿರೀಕ್ಷಿತ ವೇಗದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ ಎಂದಿದ್ದಾರೆ.

Metro pink line - DK Shivakumar
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಣೆ; Video

ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಮಾರ್ಗದಲ್ಲಿ ಅಕ್ಟೋಬರ್ ಅಂತ್ಯದೊಳಗೆ ಪ್ರಾಯೋಗಿಕ ಸಂಚಾರ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನವೆಂಬರ್ ಮೊದಲ ವಾರದಿಂದ ಕೆ.ಆರ್.ಪುರ ಮತ್ತು ಮಾರತ್‌ಹಳ್ಳಿಯ ನಡುವೆ ಹಂತ ಹಂತವಾಗಿ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರವನ್ನು ಮುಂದಿನ ವರ್ಷದ ಮಧ್ಯಭಾಗದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.

ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಹೊರವರ್ತುಲ ರಸ್ತೆಯ ಭಾಗಗಳಲ್ಲಿ ಅನಗತ್ಯವಾಗಿ ಹಾಕಿರುವ ತಡೆಗೋಡೆಗಳನ್ನು ತೆರವುಗೊಳಿಸುವಂತೆಯೂ ಸಚಿವರು ಸೂಚಿಸಿದ್ದಾರೆ. ಈ ತಡೆಗೋಡೆಗಳಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ನಗರದ ಇತರ ಸಾರ್ವಜನಿಕ ಸಾರಿಗೆ ಯೋಜನೆಗಳ ಕುರಿತು ಮಾತನಾಡಿದ ಅವರು, 148 ಕಿಲೋಮೀಟರ್ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು 2030ರ ಏಪ್ರಿಲ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬಿಎಂಟಿಸಿಗೆ ಹೆಚ್ಚುವರಿಯಾಗಿ 4,500 ವಿದ್ಯುತ್ ಬಸ್‌ಗಳನ್ನು ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ನಗರದ ಶೇ.50ರಷ್ಟು ಸಂಚಾರ ಸಮಸ್ಯೆ ಪರಿಹರಿಸಲು ನೆರವಾಗಬಹುದು ಎಂದು ಅಭಿಪ್ರಾಯಪಟ್ಟರು.

ಕೆ.ಆರ್.ಪುರದಿಂದ ವಿಮಾನ ನಿಲ್ದಾಣದವರೆಗಿನ ಮಾರ್ಗವು 38.44 ಕಿಲೋಮೀಟರ್ ಉದ್ದವಿದೆ. ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಮಾರ್ಗವು 19.75 ಕಿಲೋಮೀಟರ್ ಉದ್ದವಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಮತ್ತು ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೆ ಒಟ್ಟಾರೆ ಸುಮಾರು 58ರಿಂದ 60 ಕಿಲೋಮೀಟರ್ ಉದ್ದದ ಮೆಟ್ರೋ ಸಂಪರ್ಕ ಜಾಲ ರೂಪುಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಮೆಟ್ರೋ ಕಾಮಗಾರಿ ಪ್ರಗತಿ ಮತ್ತು ನಿಗದಿತ ಗಡುವುಗಳು...

  • ಪಿಂಕ್ ಲೈನ್‌ನ ಭೂಗತ ಮಾರ್ಗವು ತಾವರೆಕೆರೆಯಿಂದ ನಾಗವಾರದವರೆಗೆ 13.76 ಕಿಲೋಮೀಟರ್ ಉದ್ದವಿದ್ದು, 12 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಸಮಗ್ರ ಪರೀಕ್ಷೆ ಮತ್ತು ಕಾನೂನುಬದ್ಧ ಅನುಮತಿಗಳನ್ನು 2027ರ ಮೊದಲಾರ್ಧದಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ.

  • ಬ್ಲೂ ಲೈನ್‌ನ 2ಎ ಹಂತವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರದವರೆಗೆ 19.75 ಕಿಲೋಮೀಟರ್ ಉದ್ದವಿದ್ದು, ಅಗತ್ಯ ಅನುಮತಿಗಳಿಗೆ ಒಳಪಟ್ಟು 2027ರ ಮಧ್ಯಭಾಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ.

  • 2ಬಿ ಹಂತದಲ್ಲಿ ಕೆ.ಆರ್.ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 38.44 ಕಿಲೋಮೀಟರ್ ಉದ್ದದ ಮಾರ್ಗ ನಿರ್ಮಾಣವಾಗುತ್ತಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗಿನ ಮಾರ್ಗವನ್ನು 2027ರ ಅಂತ್ಯದೊಳಗೆ ಹಾಗೂ ಕೆ.ಆರ್.ಪುರದಿಂದ ಕೆಂಪಾಪುರದವರೆಗಿನ ಮಾರ್ಗವನ್ನು 2028ರ ಆರಂಭದಲ್ಲಿ ಕಾರ್ಯಾರಂಭಗೊಳಿಸುವ ಗುರಿ ಹೊಂದಲಾಗಿದೆ.

  • ಈ ಸಂಪೂರ್ಣ ಮೆಟ್ರೋ ಕಾರಿಡಾರ್‌ಗೆ ಆರಂಭದಲ್ಲಿ 2024ರ ಡಿಸೆಂಬರ್ ಗಡುವು ನಿಗದಿಪಡಿಸಲಾಗಿತ್ತು. ಬಳಿಕ 2026ರ ಮಧ್ಯಭಾಗ, 2026ರ ಡಿಸೆಂಬರ್ ಮತ್ತು 2027ರ ಅಂತ್ಯಕ್ಕೆ ಗಡುವುಗಳನ್ನು ಪರಿಷ್ಕರಿಸಲಾಗಿತ್ತು. ಇದೀಗ ಮಾರ್ಗದ ವಿವಿಧ ಭಾಗಗಳಲ್ಲಿ ಹಂತ ಹಂತವಾಗಿ ಸಂಚಾರ ಆರಂಭಿಸಿ, ಸಂಪೂರ್ಣ ಕಾರಿಡಾರ್ ಅನ್ನು 2028ರ ಮಾರ್ಚ್ ವೇಳೆಗೆ ಕಾರ್ಯಾರಂಭಗೊಳಿಸುವ ಗುರಿ ಹೊಂದಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com