ವಾಣಿ ವಿಲಾಸ ಆಸ್ಪತ್ರೆ 
ರಾಜ್ಯ

ಜ್ವರಕ್ಕೆ ಆಸ್ಪತ್ರೆಗೆ ದಾಖಲಾದ 57 ದಿನದ ಕಂದಮ್ಮನ ಕಾಲ್ಬೆರಳುಗಳೇ ಕಟ್: ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ..!

ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಮಗುವಿನ ಸ್ಥಿತಿ ಹದಗೆಡುತ್ತಿದ್ದರೂ ಬಲಗಾಲು ನೀಲಿ ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೆಲ್ಲ ಶಸ್ತ್ರಚಿಕಿತ್ಸಕರಿಗಾಗಿ ಕಾಯುವಂತೆ ಸಿಬ್ಬಂದಿ ಹೇಳುತ್ತಿದ್ದರು.

ಬೆಂಗಳೂರು: ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 57 ದಿನಗಳ ಹೆಣ್ಣು ಮಗುವಿನ ಕಾಲ್ಬೆರಳುಗಳನ್ನು ಕತ್ತರಿಸಲಾಗಿದ್ದು, ಈ ಘಟನೆಗೆ ವೈದ್ಯರ ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನವೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮಗುವಿನ ಬಲಗಾಲು ನೀಲಿ ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಹಲವು ಬಾರಿ ತಿಳಿಸಿದರೂ ಸಿಬ್ಬಂದಿ ತಕ್ಷಣ ಸ್ಪಂದಿಸಲಿಲ್ಲ ಎಂದು ಅವರು ದೂರಿದ್ದಾರೆ.

ಆದರೆ, ಮಗು ತೀವ್ರ ಸೋಂಕಿನ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಕಾಲ್ಬೆರಳುಗಳನ್ನು ಕತ್ತರಿಸುವುದು ಅನಿವಾರ್ಯವಾಗಿತ್ತು ಎಂದು ಆಸ್ಪತ್ರೆಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಮಗುವಿನ ತಂದೆ ಅಮರನಾಥ್ ಅವರು ಮಾತನಾಡಿ, ಸೆಪ್ಟೆಂಬರ್ 15ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿದ್ದಲ್ಲದೆ, ಪ್ರಜ್ಞೆ ತಪ್ಪಿದ ಲಕ್ಷಣಗಳೂ ಕಂಡುಬಂದಿದ್ದವು. ಹೀಗಾಗಿ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಮಗುವಿನ ಸ್ಥಿತಿ ಹದಗೆಡುತ್ತಿದ್ದರೂ ಬಲಗಾಲು ನೀಲಿ ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೆಲ್ಲ ಶಸ್ತ್ರಚಿಕಿತ್ಸಕರಿಗಾಗಿ ಕಾಯುವಂತೆ ಸಿಬ್ಬಂದಿ ಹೇಳುತ್ತಿದ್ದರು. ಮಗುವಿಗೆ ರಕ್ತನಾಳದ ಮೂಲಕ ಔಷಧ ನೀಡಲು ಸೂಜಿ ಅಳವಡಿಸುವಾಗ ಸಿಬ್ಬಂದಿ ಹಲವು ಕಡೆ ಪ್ರಯತ್ನಿಸಿದ್ದರು. ಮಗುವಿಗೆ ಇದೀಗ ಜನನಾಂಗದ ಸಮೀಪ ಹೊಲಿಗೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ನಂತರ ಮಗುವಿಗೆ ನಡೆಸಿದ ತಪಾಸಣೆಯಲ್ಲಿ ರಕ್ತಕ್ಕೆ ಸಂಬಂಧಿಸಿದ ತೊಂದರೆ ಪತ್ತೆಯಾಗಿದ್ದು, ವೈದ್ಯರು ಶಿಫಾರಸು ಮಾಡಿದ ಚುಚ್ಚುಮದ್ದು ನೀಡಿದ ನಂತರ ಮಗುವಿನ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ, ಬಾಧಿತ ಕಾಲಿಗೆ ಸರಿಯಾಗಿ ಬ್ಯಾಂಡೇಜ್ ಮಾಡದ ಕಾರಣ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಬಳಿಕ ರಕ್ತದ ಅಗತ್ಯವಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದರು. ಆದರೆ, ಅದರ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿರಲಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಆರೋಪಗಳಿಗೆ ಪ್ರತಿಕ್ರಿಯಿಸಿದ ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ ಅವರು, ಮಗು ಬೇರೆ ಆಸ್ಪತ್ರೆಯಲ್ಲಿ ಜನಿಸಿದ್ದು, ಜನನದ ಸುಮಾರು 21 ದಿನಗಳ ಬಳಿಕ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಯಿಂದ ಶಿಫಾರಸಿನ ಮೇರೆಗೆ ವಾಣಿ ವಿಲಾಸ್‌ಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬಂದಾಗ ಮಗುವಿಗೆ ಜ್ವರವಿದ್ದು, ಸ್ಥಿತಿ ಗಂಭೀರವಾಗಿತ್ತು.

ಮಗುವಿಗೆ ತೀವ್ರ ಸೋಂಕು ಕಾಣಿಸಿಕೊಂಡಿತ್ತು. ಹೆಚ್ಚಿನ ಸಾಮರ್ಥ್ಯದ ಪ್ರತಿಜೀವಕ ಔಷಧಗಳನ್ನು ನೀಡಲಾಗಿತ್ತು. ಏಳು ದಿನಗಳ ಕಾಲ ವೆಂಟಿಲೇಟರ್‌ನಲ್ಲಿರಿಸಲಾಗಿತ್ತು. ಆರಂಭದಲ್ಲೇ ಮಗುವಿನ ಜೀವ ಉಳಿಯುವ ಸಾಧ್ಯತೆ ಕಡಿಮೆ ಇದೆ ಎಂಬುದನ್ನು ಪೋಷಕರಿಗೆ ತಿಳಿಸಿದ್ದೆವು.

ಮಗುವಿನಲ್ಲಿ ಪ್ಲೇಟ್‌ಲೆಟ್‌ಗಳ ಪ್ರಮಾಣವೂ ಕಡಿಮೆಯಾಗಿತ್ತು. ಜೊತೆಗೆ, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ (ವೆನಸ್ ಥ್ರಾಂಬೋಸಿಸ್) ಕಾಣಿಸಿಕೊಂಡಿದ್ದರಿಂದ ರಕ್ತನಾಳಗಳಲ್ಲಿ ಅಡಚಣೆ ಉಂಟಾಗಿ ಕಾಲ್ಬೆರಳುಗಳಲ್ಲಿ ಗ್ಯಾಂಗ್ರೀನ್ ಬೆಳವಣಿಗೆಯಾಯಿತು ಎಂದು ವಿವರಿಸಿದ್ದಾರೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಗಳು ಮತ್ತು ಪ್ರತಿಜೀವಕಗಳ ಚಿಕಿತ್ಸೆಯಿಂದ ಹಾನಿಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಇಲ್ಲದಿದ್ದರೆ ಮೊಣಕಾಲಿನ ಕೆಳಭಾಗವನ್ನೇ ಕತ್ತರಿಸಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಸೋಂಕಿಗೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟಿದ್ದರೆ ಅದು ಮತ್ತಷ್ಟು ಉಲ್ಬಣಿಸುತ್ತಿತ್ತು. ಅದನ್ನು ತಡೆಯುವ ಉದ್ದೇಶದಿಂದ ಕಾಲ್ಬೆರಳುಗಳನ್ನು ಮಾತ್ರ ಕತ್ತರಿಸಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಮಗು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಸ್ಥಿತಿ ಈಗ ಜೀವಕ್ಕೆ ಅಪಾಯಕಾರಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸಕರ ಪರಿಶೀಲನೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ಸಲಹೆ ನೀಡಿದರೆ ಮಗುವನ್ನು ಮನೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ. ನಷ್ಟದ ಎಚ್ಚರಿಕೆ!

ಬರೀ ವೈಭವ್​, ವೈಭವ್​ ಅಂದ್ರೆ ಹೇಗೆ? ನಿಮ್ಮಿಷ್ಟದಂತೆ ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ಟೀಂ​ ಇಂಡಿಯಾ ಬ್ಯಾಟಿಂಗ್​ ಕೋಚ್ ಶಾಕಿಂಗ್ ಹೇಳಿಕೆ!

'ಸಲ್ಮಾನ್ ಖಾನ್ ಒಬ್ಬರೇ ಬಾಲಿವುಡ್ ಟೈಗರ್': ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿಗೆ ಸ್ಫೋಟಕ ಕಾರಣ ಬಹಿರಂಗ!

ನಂದಿಬೆಟ್ಟದ ಜಲಾನಯನ ಪ್ರದೇಶಕ್ಕೆ ಮರುಜೀವ: 1.8 ಲಕ್ಷ ಸ್ಥಳೀಯ ಮರಗಳ ನೆಡುವಿಕೆಗೆ ಅರಣ್ಯ ಇಲಾಖೆ ಸಿದ್ಧತೆ

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ