ಸಂಗ್ರಹ ಚಿತ್ರ online desk
ರಾಜ್ಯ

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್: ದೆಹಲಿ ಮೂಲದ ಆರೋಪಿಗೆ ಷರತ್ತುಬದ್ಧ ಜಾಮೀನು..!

ತನಿಖೆಯ ವೇಳೆ ಆರೋಪಿಯ ಡಿಜಿಟಲ್ ಚಲನವಲನಗಳ ಬಗ್ಗೆ ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಆರೋಪಿ ರಿತೇಶ್ ಪಾಂಡೆ ಪೊಲೀಸರ ಕಣ್ಣಿಗೆ ಮಣ್ಣೆರಚಲು ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಿಂದ ರೂ.15,000 ಕೊಟ್ಟು ಹಳೆಯ (ಸೆಕೆಂಡ್ ಹ್ಯಾಂಡ್) ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು 'ಸ್ಟಿಂಗ್ ಆಪರೇಷನ್' ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ದೆಹಲಿ ಮೂಲದ ರಿತೇಶ್ ಪಾಂಡೆಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು ನಗರದ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.

ಸದ್ಯ ನ್ಯಾಯಾಲಯವು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಬೆಂಗಳೂರು ತೊರೆಯುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬ ಕಠಿಣ ಷರತ್ತುಗಳೊಂದಿಗೆ ಜಾಮೀನು ನೀಡಿದೆ.

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ರಿತೇಶ್ ಪಾಂಡೆ ಎಂದು ಗುರುತಿಸಲಾಗಿದೆ. ಈತ 'ಕರ್ನಾಟಕ ಹನಿಟ್ರ್ಯಾಪ್' ಎಂಬ ಯೂಟ್ಯೂಬ್ ಚಾನೆಲ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ವೇಳೆ ಆರೋಪಿಯ ಡಿಜಿಟಲ್ ಚಲನವಲನಗಳ ಬಗ್ಗೆ ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಆರೋಪಿ ರಿತೇಶ್ ಪಾಂಡೆ ಪೊಲೀಸರ ಕಣ್ಣಿಗೆ ಮಣ್ಣೆರಚಲು ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಿಂದ ರೂ.15,000 ಕೊಟ್ಟು ಹಳೆಯ (ಸೆಕೆಂಡ್ ಹ್ಯಾಂಡ್) ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದ.

ಬಳಿಕ ಯುಎಸ್‌ಬಿ ಡ್ರೈವ್ ಬಳಸಿ ವಿಡಿಯೋವನ್ನು ಇಂಟರ್ನೆಟ್‌ಗೆ ಅಪ್‌ಲೋಡ್ ಮಾಡಿದ್ದ. ಸದ್ಯ ಪೊಲೀಸರು ಆತ ಫೋನ್ ಖರೀದಿಸಿದ ಅಂಗಡಿಯ ಬಿಲ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಭದ್ರ ಪುರಾವೆ ಕಲೆಹಾಕಿದ್ದಾರೆ.

ಕಳೆದ ತಿಂಗಳು ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪಗಳನ್ನು ಒಳಗೊಂಡ ಎರಡು ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ನ್ಯಾಯಾಲಯದ ಮೊರೆ ಹೋಗಿ, ಆ ವಿಡಿಯೋಗಳ ಕುರಿತು ಮಾಧ್ಯಮಗಳು ವರದಿ ಮಾಡದಂತೆ ತಡೆಯಾಜ್ಞೆ ಪಡೆದಿದ್ದರು. ಅಲ್ಲದೆ, ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದರು.

ತಮ್ಮನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಕುಟುಕು ಕಾರ್ಯಾಚರಣೆಯನ್ನು ಸಂಪೂರ್ಣ ಕಟ್ಟುಕಥೆ ಎಂದು ಸಿದ್ದರಾಮಯ್ಯ ಶುಕ್ರವಾರ ಕರೆದಿದ್ದರು. ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ್ದ ಅವರು, ಸತ್ಯ ಹೊರಬರಲು ಹಾಗೂ ಇದರ ಹಿಂದಿರುವವರನ್ನು ಪತ್ತೆಹಚ್ಚಲು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.

ಇದೇ ವೇಳೆ, ತಮ್ಮ ತಂದೆಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ನಡೆದಿದೆಯೆನ್ನಲಾದ ಕುಟುಕು ಕಾರ್ಯಾಚರಣೆಯ ಹಿಂದೆ ಕಾಂಗ್ರೆಸ್‌ನವರೇ ಇದ್ದಾರೆ ಎಂದು ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ಬಯಸಿದ್ದ ಕಾಂಗ್ರೆಸ್‌ನ ಮಹಿಳೆಯೊಬ್ಬರು ಹಾಗೂ ಮಾಧ್ಯಮ ಸಂಸ್ಥೆಯೊಂದರ ಮುಖ್ಯಸ್ಥರು ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ವಿಡಿಯೋ ಸೂಚಿಸುತ್ತದೆ ಎಂದು ಯತೀಂದ್ರ ಹೇಳಿದ್ದರು.

ಇನ್ನೊಂದೆಡೆ, ತಮ್ಮ ವಿರುದ್ಧದ ಸಂಚಿನ ಕುರಿತು ನೀಡಿರುವ ದೂರಿನ ತನಿಖೆಯ ಬಗ್ಗೆ ಸಿದ್ದರಾಮಯ್ಯ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕುಟುಕು ಕಾರ್ಯಾಚರಣೆಯ ಹಿಂದಿರುವವರು ಬಯಲಾಗಲು ಕೆಲವೇ ದಿನಗಳು ಬಾಕಿ ಇವೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕ್ರಿಮಿನಲ್ ಸಂಚಿನಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ, ಅದು ಎಲ್ಲಿ ನಡೆಯಿತು, ಹೇಗೆ ನಡೆಯಿತು, ಕುಟುಕು ಕಾರ್ಯಾಚರಣೆ ನಡೆಸಿದವರು ಯಾರು, ಅದನ್ನು ಏಕೆ ನಡೆಸಲಾಯಿತು, ಹಲವು ವರ್ಷಗಳ ಹಿಂದಿನ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳು ಯಾರ ಕೈಗೆ ಹೇಗೆ ಬಂದವು, ಅವುಗಳನ್ನು ಏಕಾಏಕಿ ಅಪ್‌ಲೋಡ್ ಮಾಡಿದ್ದು ಹೇಗೆ ಮತ್ತು ಪ್ರಚಾರ ಮಾಡಿದ್ದು ಹೇಗೆ ಎಂಬ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಯಲಿದೆ. ಆರಂಭದಿಂದ ಇಂದಿನವರೆಗಿನ ಎಲ್ಲ ಸಂಗತಿಗಳನ್ನು ಪರಿಶೀಲಿಸುತ್ತೇವೆ. ಕೆಲವೇ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಪೊಲೀಸರು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಮತ್ತು ಸಾಧ್ಯವಾದಷ್ಟು ತ್ವರಿತವಾಗಿ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದರು.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರ ಹಸ್ತಕ್ಷೇಪ ಅಥವಾ ರಾಜಕೀಯ ಒತ್ತಡವಿಲ್ಲದೆ ತನಿಖೆ ನಡೆಯುತ್ತಿದೆ. ಅದನ್ನು ಪೂರ್ಣಗೊಳಿಸಲಾಗುವುದು ಎಂದರು.

ಈ ಪ್ರಕರಣದಲ್ಲಿ ಕಾಂಗ್ರೆಸ್ ಸದಸ್ಯರೇ ಭಾಗಿಯಾಗಿದ್ದಾರೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಲಭ್ಯವಿರುವ ದಾಖಲೆಗಳು ಮತ್ತು ವಿಡಿಯೋದಲ್ಲಿ ಕಾಣಿಸುವ ಮುಖಗಳಿಂದಲೇ ಕೆಲವು ಸಂಗತಿಗಳು ಸ್ಪಷ್ಟವಾಗಿವೆ. ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.

ಯಾರು ಭಾಗಿಯಾಗಿದ್ದಾರೆ ಮತ್ತು ಏನಾಗಿದೆ ಎಂಬುದು ಸ್ಪಷ್ಟವಾಗಿದೆ. ನಾನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಪ್ರಕರಣದಲ್ಲಿ ಹೆಸರು ಪ್ರಸ್ತಾಪವಾಗಿರುವ ಎಲ್ಲರನ್ನೂ ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು, ವಿಚಾರಣೆಯ ವಿವರಗಳನ್ನು ಸಂಗ್ರಹಿಸಿದ್ದೇವೆ. ಸೂಕ್ತ ಸಮಯದಲ್ಲಿ ಎಲ್ಲ ಮಾಹಿತಿಯನ್ನು ನಿಮ್ಮ ಮುಂದಿಡುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೌತಿ ದಾಳಿ ಮಧ್ಯೆಯೇ Riyadh ಏರ್‌ಪೋರ್ಟ್‌ ಓಪನ್: ಕೇವಲ 2 ಟರ್ಮಿನಲ್‌ಗಳಲ್ಲಿ ಮಾತ್ರ ಸಂಚಾರ ಆರಂಭ, ಪ್ರಯಾಣಕ್ಕೂ ಮುನ್ನ ಈ ಸೂಚನೆ ಗಮನಿಸಿ..!

ಅಕ್ಟೋಬರ್ 30 ರಂದು ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಅಣಕು ಸಂಸತ್ ಅಧಿವೇಶನ, ಸಿಇಸಿ ಜ್ಞಾನೇಶ್ ಕುಮಾರ್ ಮಹಾಭಿಯೋಗ- INDIA bloc

ಕಾಶ್ಮೀರಿಗಳ ಅಸ್ತಿತ್ವ ಉಳಿಯಲು ಪಾಕಿಸ್ತಾನದ ಪ್ರಯತ್ನಗಳೇ ಕಾರಣ; ಭಾರತದ ಉದ್ದೇಶ ಸರಿ ಇಲ್ಲ: ಫಾರೂಕ್ ಅಬ್ದುಲ್ಲಾ!

'ರಾಮಾಯಣ': 10 ಕೋಟಿ ರೂ ದಾಟಿದ ಮುಂಗಡ ಬುಕಿಂಗ್; ಹಿಂದಿ ಆವೃತ್ತಿಯ 1.81 ಲಕ್ಷ ಟಿಕೆಟ್ ಸೋಲ್ಡ್ ಔಟ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?

ನಟ ಧನ್ವೀರ್ ಗೌಡ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಸಾಲು ಸಾಲು ದೂರುಗಳು ದಾಖಲು!