ಬಿಜೆಪಿ ಪ್ರತಿಭಟನೆ  
ರಾಜ್ಯ

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕಾಂಗ್ರೆಸ್‌ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: BJP ವಾಗ್ದಾಳಿ

ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದ ಕಾಂಗ್ರೆಸ್ ಈಗ ವೈಯಕ್ತಿಕ ನಿಂದನೆಯ ರಾಜಕಾರಣಕ್ಕೆ ಇಳಿದಿದೆ. ರಾಜಕೀಯ ಚರ್ಚೆಗೆ ಪ್ರಧಾನಿಯವರ ಪೋಷಕರನ್ನು ಎಳೆದು ತರುವುದು ಕಾಂಗ್ರೆಸ್‌ನ ಹತಾಶೆ ಮತ್ತು ಕುಸಿಯುತ್ತಿರುವ ರಾಜಕೀಯ ಮಟ್ಟವನ್ನು ತೋರಿಸುತ್ತದೆ.

ಬೆಂಗಳೂರು: ಬಿಹಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಂದೆಯ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ವೇಳೆ ಕಾಂಗ್ರೆಸ್ ಹಾಗೂ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಖರ್ಗೆ ಅವರ ಹೇಳಿಕೆ ಅವರ ಹಿರಿಯತನ ಮತ್ತು ಘನತೆಗೆ ತಕ್ಕುದಲ್ಲ. ಇದು ತೀವ್ರ ಖಂಡನೀಯ ಎಂದು ಹೇಳಿದ್ದಾರೆ.

ಈ ಹಿಂದೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದಾಗ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸಿದ್ದರು ಎಂಬುದನ್ನು ಗಮನಿಸಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಖರ್ಗೆ ಅವರಿಗೆ ಸಲಹೆ ನೀಡಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದ ಕಾಂಗ್ರೆಸ್ ಈಗ ವೈಯಕ್ತಿಕ ನಿಂದನೆಯ ರಾಜಕಾರಣಕ್ಕೆ ಇಳಿದಿದೆ. ರಾಜಕೀಯ ಚರ್ಚೆಗೆ ಪ್ರಧಾನಿಯವರ ಪೋಷಕರನ್ನು ಎಳೆದು ತರುವುದು ಕಾಂಗ್ರೆಸ್‌ನ ಹತಾಶೆ ಮತ್ತು ಕುಸಿಯುತ್ತಿರುವ ರಾಜಕೀಯ ಮಟ್ಟವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಮಾತನಾಡಿ, ಕಾಂಗ್ರೆಸ್‌ಗೆ ಸೂಕ್ತ ದಿಕ್ಕು ತೋರಿಸುವುದು, ಸಮತೋಲನ ಕಾಯ್ದುಕೊಳ್ಳುವುದು ಮತ್ತು ಪ್ರಬುದ್ಧ ನಾಯಕತ್ವ ನೀಡುವುದನ್ನು ಬಿಡಿ, ತಮ್ಮ ತವರು ರಾಜ್ಯದಲ್ಲೇ ಕಾಂಗ್ರೆಸ್ ಘಟಕ ಹಾಗೂ ಸರ್ಕಾರವನ್ನು ಒಗ್ಗಟ್ಟಿನಿಂದ ಮುನ್ನಡೆಸಲು ಖರ್ಗೆ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.

ಭಾರಿ ಬಹುಮತ ಹೊಂದಿರುವ ಸರ್ಕಾರವೇ ಪತನದ ಅಂಚಿನಲ್ಲಿದೆ. ಒಂದು ಪ್ರಬಲ ಬಣ ಮತ್ತೊಂದು ಪ್ರಬಲ ಬಣವನ್ನು ಬ್ಲ್ಯಾಕ್‌ಮೇಲ್ ಮಾಡುವ ಹಾಗೂ ಹನಿಟ್ರ್ಯಾಪ್‌ಗೆ ಒಳಪಡಿಸುವ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಖರ್ಗೆ ಹೇಳಿಕೆ ಕಾಂಗ್ರೆಸ್ ಪಕ್ಷದ ಹತಾಶೆ ಹಾಗೂ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ದೇಶದ ಜನರ ಮುಂದೆ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ನವೆಂಬರ್ 2ಕ್ಕೆ ಪದಾಧಿಕಾರಿಗಳ ಸಭೆ

ಈ ನಡುವೆ ಕರ್ನಾಟಕ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನವೆಂಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಪಕ್ಷದ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಅವರು ನವೆಂಬರ್ 2ರಿಂದ 4ರವರೆಗೆ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ಅಲೆ ಸೃಷ್ಟಿಯಾಗುತ್ತಿದೆ ಎಂದು ಪ್ರತಿಪಾದಿಸಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಲು ಪಕ್ಷ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Microsoft ಉದ್ಯೋಗಿಗಳಿಗೆ ಬಿಗ್ ಶಾಕ್: ಭಾರತ ಸೇರಿ 4 ದೇಶಗಳ 60,000 ಟೆಕ್ಕಿಗಳಿಗೆ ಸ್ವಯಂ ನಿವೃತ್ತಿ ಪ್ಯಾಕೇಜ್ ಘೋಷಿಸಿದ ಮೈಕ್ರೋಸಾಫ್ಟ್, ಟೆಕ್ ಲೋಕದಲ್ಲಿ ಸಂಚಲನ..!

ಕಬ್ಬು ಬೆಳೆಗಾರರ ಪ್ರತಿಭಟನೆ: 'ಸೌಹಾರ್ದಯುತ ಪರಿಹಾರ ಕಂಡುಕೊಳ್ಳೋಣ, ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ': CM DK ಶಿವಕುಮಾರ್

‘A’ ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!

ಸಿಎಂ ಜತೆಗಿನ ಸಭೆ ವಿಫಲ, ಕಬ್ಬು ಬೆಳೆಗಾರರ ಹೋರಾಟ ಮುಂದುವರಿಕೆ; ಗಲಾಟೆ ಏಕೆ ಮಾಡ್ಕೊಂಡ್ರಿ: ಡಿಕೆಶಿ ಗರಂ

ಕಬ್ಬು ತೂಕದಲ್ಲೂ ಅಕ್ರಮ, ಸಕ್ಕರೆ MSP ಹೆಚ್ಚಳಕ್ಕೆ ಆಗ್ರಹ; ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಚರ್ಚೆ