ಕಬ್ಬು ಬೆಳೆಗಾರರ ಪ್ರತಿಭಟನೆ: 'ಸೌಹಾರ್ದಯುತ ಪರಿಹಾರ ಕಂಡುಕೊಳ್ಳೋಣ, ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ': CM DK ಶಿವಕುಮಾರ್

ಸುವರ್ಣ ಸೌಧದಲ್ಲಿ ಆರಂಭದಲ್ಲಿ ಕಾರ್ಖಾನೆ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಸತತ ಎರಡು ಗಂಟೆ ಕಾಲ ರೈತರ ಜೊತೆ ಸಭೆ ಮಾಡಿದ್ದು, ರೈತರ ಆಹವಾಲುಗಳನ್ನು ಆಲಿಸಿದರು.
CM DK Shivakumar calls for amicable solution to sugarcane farmers demands
ರೈತರೊಂದಿಗೆ ಸಿಎ ಡಿಕೆ ಶಿವಕುಮಾರ್ ಸಭೆ
Updated on: 

ಬೆಳಗಾವಿ: ಕಬ್ಬು ಬೆಳೆಗಾರರು ಕೇಳುತ್ತಿರುವ ಪ್ರತಿ ಟನ್‌ಗೆ 1,000 ರೂ ಪ್ರೋತ್ಸಾಹಧನದ ಬೇಡಿಕೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು. ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಉದ್ಯಮದ ಹಿತವನ್ನು ಕಾಪಾಡಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಅ.26) ಕಬ್ಬು ಬೆಳೆಗಾರರೊಂದಿಗಿನ ಸಭೆ ನಡೆಸಿದ್ದರು.

ಸುವರ್ಣ ಸೌಧದಲ್ಲಿ ಆರಂಭದಲ್ಲಿ ಕಾರ್ಖಾನೆ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಸತತ ಎರಡು ಗಂಟೆ ಕಾಲ ರೈತರ ಜೊತೆ ಸಭೆ ಮಾಡಿದ್ದು, ರೈತರ ಆಹವಾಲುಗಳನ್ನು ಆಲಿಸಿದರು. ಈ ವೇಳೆ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳಲು ಆಗಲ್ಲ. ಇದಕ್ಕೆ ಸ್ವಲ್ಪ ಸಮಯವಕಾಶ ಬೇಕು ಎಂದಿದ್ದಾರೆ. ಆದ್ರೆ, ರೈತರು ಮಾತ್ರ ಪ್ರೋತ್ಸಾಹ ಧನ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಕಳೆದ 10 ವರ್ಷಗಳಿಂದ ಸಕ್ಕರೆ ಬೆಲೆಯಲ್ಲಿ ಏರಿಕೆಯಾಗಿಲ್ಲ. ಇದರಿಂದ ಕಬ್ಬು ಬೆಳೆಗಾರರಿಗೆ ನಷ್ಟವಾಗುತ್ತಿದೆ. ಪ್ರತಿ ಟನ್ ಕಬ್ಬಿಗೆ 1,000 ರೂ ಪ್ರೋತ್ಸಾಹಧನ ನೀಡಬೇಕೆಂಬ ಬೇಡಿಕೆ ರಾಜ್ಯದಲ್ಲಿ ರೈತರ ಪ್ರತಿಭಟನೆಗೆ ಕಾರಣವಾಗಿದೆ ಎಂದು ಹೇಳಿದರು. “ನಾವು ಯಾರ ಪರವೂ ವಹಿಸುತ್ತಿಲ್ಲ. ಸಕ್ಕರೆ ಕಾರ್ಖಾನೆಗಳಿಲ್ಲದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ರೈತರಿಲ್ಲದಿದ್ದರೆ ಕಾರ್ಖಾನೆಗಳಿಗೂ ತೊಂದರೆಯಾಗುತ್ತದೆ. ಎಲ್ಲರ ಹಿತವನ್ನು ಕಾಪಾಡಬೇಕು” ಎಂದು ಶಿವಕುಮಾರ್ ತಿಳಿಸಿದರು.

ಈ ಹಿಂದೆ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹50 ನೀಡಲು ನಿರ್ಧರಿಸಿತ್ತು. ರಾಜ್ಯ ಸರ್ಕಾರದ ಒತ್ತಡದ ಬಳಿಕ ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿಯಾಗಿ ₹250 ನೀಡಲು ಒಪ್ಪಿಕೊಂಡಿದ್ದವು. ಸುಮಾರು ಶೇ.80ರಷ್ಟು ಕಾರ್ಖಾನೆಗಳು ಈ ನಿರ್ಧಾರವನ್ನು ಪಾಲಿಸಿವೆ. ಆದರೆ, ಕೆಲವು ಕಾರ್ಖಾನೆಗಳು ಭರವಸೆಯನ್ನು ಈಡೇರಿಸದೆ ನ್ಯಾಯಾಲಯದ ಮೊರೆ ಹೋಗಿವೆ ಎಂದು ಅವರು ಹೇಳಿದರು.

CM DK Shivakumar calls for amicable solution to sugarcane farmers demands
ಸಿಎಂ ಜತೆಗಿನ ಸಭೆ ವಿಫಲ, ಕಬ್ಬು ಬೆಳೆಗಾರರ ಹೋರಾಟ ಮುಂದುವರಿಕೆ; ಗಲಾಟೆ ಏಕೆ ಮಾಡ್ಕೊಂಡ್ರಿ: ಡಿಕೆಶಿ ಗರಂ

ಇಳುವರಿ ಕುಸಿತ, ಸಂಕಷ್ಟದಲ್ಲಿ ರೈತರು: ಸಮಾಲೋಚನೆ ಅಗತ್ಯ

ಕಳೆದ ಒಂದು ದಶಕದಿಂದ ಬೆಲೆ ಪರಿಷ್ಕರಣೆಯಾಗದಿರುವುದು ಹಾಗೂ ಇಳುವರಿ ಕುಸಿತದ ಹಿನ್ನೆಲೆಯಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ ₹5,500ರಿಂದ ₹6,000ರವರೆಗೆ ಬೆಲೆ ಅಥವಾ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕಿತ್ತೂರಿನಲ್ಲಿ ಪ್ರತಿಭಟನಾ ನಿರತ ರೈತರನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದ್ದೇನೆ. ಎಲ್ಲ ಪಾಲುದಾರರೊಂದಿಗೆ ಚರ್ಚಿಸಿ, ಸಕ್ಕರೆ ಕಾರ್ಖಾನೆ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದರು.

“ಈ ಸಮಸ್ಯೆ ಪರಿಹರಿಸುವ ಹೊಣೆ ಸಕ್ಕರೆ ಕಾರ್ಖಾನೆ ಮಾಲೀಕರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮೇಲಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ” ಎಂದು ಅವರು ತಿಳಿಸಿದರು.

ಸಕ್ಕರೆ ಉದ್ಯಮವು ಹಣಕಾಸು, ಬ್ಯಾಂಕಿಂಗ್, ಎಥೆನಾಲ್ ಮತ್ತು ವಿದ್ಯುತ್ ವೆಚ್ಚ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ, ಈ ವಿವಾದವನ್ನು ಯಾವುದೇ ಒಂದು ಪಕ್ಷ ಏಕಪಕ್ಷೀಯವಾಗಿ ಪರಿಹರಿಸಲು ಸಾಧ್ಯವಿಲ್ಲ. ಎಲ್ಲರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ ಎಂದು ಹೇಳಿದರು.

“ಇದು ರಾಜಕೀಯ ಮಾಡುವ ಸಭೆಯಲ್ಲ. ಅದಕ್ಕೆ ಬೇರೆ ವೇದಿಕೆಗಳಿವೆ. ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು” ಎಂದು ಡಿಕೆಶಿ ಹೇಳಿದರು.

ರೈತರಿಗೆ ಉಚಿತ ವಿದ್ಯುತ್‌ಗಾಗಿ 32,000 ಕೋಟಿ ವೆಚ್ಚದ ನಿರೀಕ್ಷೆ

ಇದೇ ವೇಳೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ಪ್ರತಿವರ್ಷ ₹20,000 ಕೋಟಿ ವೆಚ್ಚ ಮಾಡುತ್ತಿದೆ. ಈ ವರ್ಷ ಮಳೆ ಕೊರತೆ ಮತ್ತು ವಿದ್ಯುತ್ ಬಳಕೆ ಹೆಚ್ಚಳದಿಂದಾಗಿ ಈ ವೆಚ್ಚ 32,000 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಶಿವಕುಮಾರ್ ತಿಳಿಸಿದರು.

ಈ ವಿಷಯದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಿದ್ದು, ಕರ್ನಾಟಕದ ರೈತರ ಸಮಸ್ಯೆಗಳ ಬಗ್ಗೆ ಅವರು ಗಮನಹರಿಸಿದ್ದಾರೆ ಎಂದರು. ದೇಶದಲ್ಲಿ ಸಕ್ಕರೆ ಉತ್ಪಾದನೆ ಕುಸಿದಿರುವುದರ ಜೊತೆಗೆ ಉದ್ಯಮವು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ, ಈ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದ ನಿರ್ಧಾರದ ಅಗತ್ಯವಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿಯೊಂದಿಗೂ ಈ ಬಗ್ಗೆ ಚರ್ಚಿಸಿದ್ದು, ಸಮಸ್ಯೆ ಪರಿಹರಿಸುವ ಅಗತ್ಯದ ಕುರಿತು ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಡಿಕೆಶಿ ತಿಳಿಸಿದರು. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಧಿಕಾರಿಗಳ ಅಭಿಪ್ರಾಯ ಪಡೆದು, ರೈತರು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರತಿ ಟನ್‌ಗೆ 1,000 ರೂ ಪ್ರೋತ್ಸಾಹಧನ ನೀಡುವ ಬೇಡಿಕೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಈ ಸಮಸ್ಯೆ ಪರಿಹಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವೂ ಮಹತ್ವದ್ದಾಗಿದೆ. ರಾಜ್ಯದ ಪಾಲು ಶೇ.10ರಷ್ಟಿದ್ದರೆ, ಕೇಂದ್ರದ ಪಾಲು ಶೇ.90ರಷ್ಟಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

CM DK Shivakumar calls for amicable solution to sugarcane farmers demands
ಕಬ್ಬು ತೂಕದಲ್ಲೂ ಅಕ್ರಮ, ಸಕ್ಕರೆ MSP ಹೆಚ್ಚಳಕ್ಕೆ ಆಗ್ರಹ; ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಚರ್ಚೆ

ಪ್ರೋತ್ಸಾಹಧನ ವಿಚಾರವಾಗಿ ರೈತರ ಎರಡು ಗುಂಪುಗಳ ನಡುವೆ ಘರ್ಷಣೆ

ಪ್ರೋತ್ಸಾಹಧನದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಭಾನುವಾರ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿ ರಾಜ್ಯ ಹೆದ್ದಾರಿಯನ್ನು ತಡೆದಿದ್ದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ರೈತರೊಂದಿಗೆ ನಡೆದ ಸಭೆಯ ವೇಳೆ ಪ್ರೋತ್ಸಾಹಧನದ ಮೊತ್ತದ ವಿಚಾರವಾಗಿ ರೈತರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಹೊಡೆದಾಟ ನಡೆದಿದೆ. ಜಿಲ್ಲಾ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರತಿ ಟನ್ ಕಬ್ಬಿಗೆ 6,000 ರೂ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ಒಂದು ಗುಂಪು ₹5,500ಕ್ಕೆ ಇಳಿಸಲು ಒಪ್ಪಿಕೊಂಡಿತ್ತು. ಮತ್ತೊಂದು ಗುಂಪು 4,500 ರೂಗೆ ಇಳಿಸಲು ಮುಂದಾಗಿತ್ತು ಎನ್ನಲಾಗಿದೆ. ಈ ವಿಚಾರವೇ ಘರ್ಷಣೆಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com