ಹೊಂಬಳ (ಗದಗ ಜಿಲ್ಲೆ): ರಾಜ್ಯದಲ್ಲಿ ಮುಂಗಾರು ಸಂಪೂರ್ಣ ವಿಫಲವಾಗಿದ್ದು, ಗದಗ ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದೆ.
ಜಿಲ್ಲೆಯ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಹೊಂಬಾಳ ಗ್ರಾಮದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅನ್ನದಾತರು ಹತಾಶೆಯ ಅಂಚಿಗೆ ತಲುಪಿದ್ದಾರೆ. ಜನವರಿಯಿಂದ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಇಡೀ ಕೃಷಿ ಕ್ಷೇತ್ರ ಸಂಪೂರ್ಣವಾಗಿ ನೆಲಕಚ್ಚಿದೆ.
ಜನವರಿಯಿಂದಲೂ ಹೊಂಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಷ್ಟಾಗಿ ಮಳೆಯಾಗಿಲ್ಲ. ಹೀಗಾಗಿ ರೈತರು ಹೊಲಗಳನ್ನು ಖಾಲಿ ಬಿಟ್ಟಿದ್ದು, ಕೆಲವರು ಮಳೆ ಬಂದರೆ ಮಣ್ಣಿನಲ್ಲಿನ ತೇವಾಂಶ ಬೇಗ ಆವಿಯಾಗದಿರಲಿ ಎಂಬ ನಿರೀಕ್ಷೆಯಲ್ಲಿ ಮೇಲ್ಮಣ್ಣಿನ ಮೇಲೆ ಮರಳು ಮತ್ತು ಸಣ್ಣ ಕಲ್ಲುಗಳನ್ನು ಹರಡಿದ್ದಾರೆ.
ಗದಗದ ನಿವಾಸಿ ಪ್ರಕಾಶ್ ಅಣ್ಣಿಗೇರಿ ಅವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೊಂಬಾಳದಲ್ಲಿ ಅವರಿಗೆ ನಾಲ್ಕು ಎಕರೆ ಜಮೀನಿದ್ದು, ಕಳೆದ ಎರಡು ವರ್ಷಗಳಿಂದ ಸಹೋದರರ ನೆರವಿನೊಂದಿಗೆ ಮಲೇಷ್ಯಾ ತಳಿಯ ಸೀತಾಫಲ ಮತ್ತು ತೆಂಗು ಬೆಳೆಸುತ್ತಿದ್ದಾರೆ. ಆದರೆ, ಈ ವರ್ಷದ ಬರ ಅವರ ಯೋಜನೆಗಳಿಗೆ ಅಡ್ಡಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾದರೆ ಬೆಳೆಗಳನ್ನು ಉಳಿಸಿಕೊಳ್ಳುವ ಅವಕಾಶವಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಅಣ್ಣಿಗೇರಿ ಸೇರಿದಂತೆ ಈ ಭಾಗದ ರೈತರು ಕಳೆದ ಮೂರು ವರ್ಷಗಳಿಂದ ಸತತ ನಷ್ಟ ಅನುಭವಿಸುತ್ತಿದ್ದಾರೆ. 2024 ಮತ್ತು 2025ರಲ್ಲಿ ಈ ಪ್ರದೇಶದಲ್ಲಿ ಅತಿಯಾದ ಮಳೆಯಾಗಿ, ಹೊಲಗಳಲ್ಲಿ ನೀರು ನಿಂತು ಬೆಳೆಗಳು ಕೊಳೆತು ಹೋಗಿದ್ದವು. ಆದರೆ ಈ ವರ್ಷ ಮಳೆಯೇ ಇಲ್ಲದಂತಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅಣ್ಣಿಗೇರಿ, ಕೋವಿಡ್ ಬಳಿಕ ಪೂರ್ಣಾವಧಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಮಳೆಯ ಅನಿಶ್ಚಿತತೆ ಅವರನ್ನು ಕಾಡುತ್ತಿದೆ. ಕೆಲವೊಮ್ಮೆ ಅತಿಯಾದ ಮಳೆಯಾದರೆ, ಇನ್ನೂ ಕೆಲ ಋತುಗಳಲ್ಲಿ ಹನಿ ಮಳೆಯೂ ಇರುವುದಿಲ್ಲ.
ಮೂರು ವರ್ಷಗಳ ಹಿಂದೆ ಬದನೆಕಾಯಿ, ಟೊಮೆಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಉತ್ತಮ ಇಳುವರಿ ಪಡೆದಿದ್ದರು. ಬಳಿಕ ವಾಣಿಜ್ಯ ಬೆಳೆಗಳತ್ತ ಹೊರಳುವ ಯೋಜನೆಯನ್ನೂ ರೂಪಿಸಿದ್ದರು. ಆದರೆ ಅತಿವೃಷ್ಟಿ ಮತ್ತು ಬರ ಅವರ ಆಸೆಗೆ ತಣ್ಣೀರೆರಚಿವೆ.
ಬೆಳೆ ನಷ್ಟದಿಂದ ಅಣ್ಣಿಗೇರಿ ಸೇರಿದಂತೆ ಹಲವು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಷ್ಟವನ್ನು ಭರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.
“ಅನೇಕರು ಕೃಷಿಗೆ ಮರಳುವುದನ್ನು ನೋಡಿ ನಾನೂ ಕೃಷಿ ಆರಂಭಿಸಿದೆ. ಆರಂಭದಲ್ಲಿ ಸಂತೋಷವಾಗಿತ್ತು. ಆದರೆ, ಬರದಿಂದಾಗಿ ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದೇವೆ. ಮಲೇಷ್ಯಾ ತಳಿಯ ತೆಂಗು ಮತ್ತು ಸೀತಾಫಲ ಬೆಳೆಯಲು ಸಾವಿರಾರು ರೂಪಾಯಿ ಹೂಡಿಕೆ ಮಾಡಿದ್ದೇನೆ. ಆದರೆ, ಎಲ್ಲವೂ ವ್ಯರ್ಥವಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾದರೆ ನನಗೆ ಅನುಕೂಲವಾಗಬಹುದು. ಕೊಳವೆಬಾವಿ ಹೊಂದಿರುವ ರೈತರೂ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಣ್ಣಿಗೇರಿ ಅಳಲು ತೋಡಿಕೊಂಡರು.
ಮತ್ತೆ ರೈತನ ಆತ್ಮಹತ್ಯೆ
ಗದಗ ಜಿಲ್ಲೆಯ ಲಕ್ಕಲಕಟ್ಟಿಯ ರೈತರೊಬ್ಬರು ಆರ್ಥಿಕ ಹೊರೆಯಿಂದಾಗಿ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
53 ವರ್ಷದ ಸಂಗಯ್ಯ ಕಲ್ಲಕಯ್ಯ ಹಿರೇಮಠ ಅವರು ವಿಷ ಸೇವಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ಸಂಗಯ್ಯ ಅವರು ಖಾಸಗಿ ಸಂಸ್ಥೆಗಳು ಮತ್ತು ಸಹಕಾರಿ ಸಂಘಗಳಿಂದ ಒಟ್ಟು ರೂ.16 ಲಕ್ಷ ಸಾಲ ಪಡೆದಿದ್ದರು. ಸತತ ಎರಡು ಬಾರಿ ಬೆಳೆ ನಷ್ಟ ಅನುಭವಿಸಿದ್ದರಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಅವರು ವಿಬಿಜಿ-ರಾಮ್-ಜಿ ಉದ್ಯೋಗ ಯೋಜನೆಯಲ್ಲಿಯೂ ನೋಂದಾಯಿಸಿಕೊಂಡಿದ್ದರು.