ನವದೆಹಲಿ: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ(Gazetted Probationers) ಹುದ್ದೆಗಳ ನೇಮಕಾತಿ ವಿವಾದದಲ್ಲಿ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ಈ ಪ್ರಕರಾಣದ ಸಂಬಂಧ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಾನೂನು ಹೋರಾಟ ನಡೆಯುತ್ತಿತ್ತು. 2011 ರ ಈ ನೇಮಕಾತಿ ಪಟ್ಟಿಯನ್ನು ಊರ್ಜಿತಗೊಳಿಸಲು ರಾಜ್ಯ ಸರ್ಕಾರ 2022ರಲ್ಲಿ ವಿಶೇಷ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈಗ ಈ ಕಾಯ್ದೆಯನ್ನೇ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಪರಿಣಾಮ ಅಂದು ನೇಮಕವಾಗಿದ್ದ 362 ಕೆಎಎಸ್ ಅಧಿಕಾರಿಗಳ ನೌಕರಿಗೆ ನೇರ ಕುತ್ತು ಬಂದಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ ಈ ಮಹತ್ವದ ಆದೇಶ ಪ್ರಕಟಿಸಿದೆ. 2011ರ ಸಾಲಿನ ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕಾರಣದಿಂದ ಈ ಹಿಂದೆ ಹೈಕೋರ್ಟ್ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿತ್ತು. ಆದರೆ ಈ ಆಯ್ಕೆ ಪಟ್ಟಿಯನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ 2022ರಲ್ಲಿ ವಿಶೇಷ ಕಾಯ್ದೆಯನ್ನು ಜಾರಿಗೆ ತಂದಿತ್ತು. ಸರ್ಕಾರದ ಈ ಕಾಯ್ದೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.
ಹೈಕೋರ್ಟ್ನ ಈ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿದಾರರಾದ ಶ್ರೀನಿವಾಸ ಟಿ. ಮತ್ತು ಇತರರು ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈಗ ಸುಪ್ರೀಂ ಕೋರ್ಟ್ ಸರ್ಕಾರದ ಕಾಯ್ದೆಯನ್ನು ಸಂಪೂರ್ಣವಾಗಿ ಅಸಿಂಧುಗೊಳಿಸಿ ರದ್ದುಪಡಿಸಿದೆ.
2011ರಲ್ಲಿ ಕೆಪಿಎಸ್ಸಿ ಮೂಲಕ ನಡೆದ ಈ ನೇಮಕಾತಿಯಲ್ಲಿ ಸಂದರ್ಶನ ಮತ್ತು ಅಂಕ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ವಿವಾದದ ನಡುವೆಯೂ ನೇಮಕಗೊಂಡಿದ್ದ 363 KAS ಅಧಿಕಾರಿಗಳು ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರ ಭವಿಷ್ಯ ಅತಂತ್ರವಾಗಿದೆ.