ಕೋಲಾರ: ಮಿದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆಜಿಎಫ್ ನಗರದ ಶ್ವೇತಾ (28) ಅವರ ಕುಟುಂಬದವರು, ಮಗಳನ್ನು ಕಳೆದುಕೊಂಡ ತೀವ್ರ ನೋವಿನಲ್ಲೂ ಆಕೆಯ ಲಿವರ್ ಹಾಗೂ ಹೃದಯದ ಕವಾಟುಗಳನ್ನು ದಾನ ಮಾಡುವ ಮೂಲಕ ಇಬ್ಬರ ಜೀವ ಉಳಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಅವರ ಮಗಳನ್ನು ಕಳೆದುಕೊಂಡ ತೀವ್ರ ದುಃಖದಲ್ಲೂ ಪೋಷಕರು ಅಂಗಾಂಗ ದಾನಕ್ಕೆ ಮುಂದೆ ಬಂದಿದ್ದಾರೆ. ಶ್ವೇತಾರ ಲಿವರ್ ಹಾಗೂ ಹೃದಯದ ಕವಾಟುಗಳನ್ನು ದಾನ ಮಾಡಲಾಗಿದ್ದು, ಇಬ್ಬರು ರೋಗಿಗಳ ಬಾಳಿಗೆ ಹೊಸ ಭರವಸೆ ಮೂಡಿದೆ.
ಪೋಷಕರ ಈ ಶ್ಲಾಘನೀಯ ಕಾರ್ಯಕ್ಕೆ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಕೂಡ ಪೋಷಕರ ನಿರ್ಧಾರವನ್ನು ಪ್ರಶಂಸಿಸಿದ್ದು, “ಮಗಳನ್ನು ಕಳೆದುಕೊಂಡ ನೋವಿನಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾರೆ” ಎಂದು ಗೌರವ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 28 ವರ್ಷದ ಶ್ವೇತಾ ರವರು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು, ನುರಿತ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ಬ್ರೈನ್ ಡೆತ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ಮುಂಜಾನೆ ದೃಢಪಡಿಸಿದರು. ಅಪಾರ ದುಃಖ ಹಾಗೂ ನೋವಿನಲ್ಲೂ ಶ್ವೇತಾ ಅವರ ಕುಟುಂಬದವರು ತೋರಿದ ಮುಖಂಡತ್ವ ಮತ್ತು ಮಾನವೀಯತೆ ನಿಜಕ್ಕೂ ಅನುಕರಣೀಯವಾಗಿದೆ. ತಮ್ಮ ಮಗಳ ಅಗಲಿಕೆಯಲ್ಲೂ ಇತರರಿಗೆ ಮರುಜೀವ ನೀಡುವ ಮಹತ್ತರ ಉದ್ದೇಶದಿಂದ ಕುಟುಂಬಸ್ಥರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಶ್ವೇತಾ ಅವರ ಯಕೃತ್ (ಲಿವರ್) ಹಾಗೂ ಹೃದಯದ ಕವಾಟಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲಾಗಿದೆ. ಈ ಕಷ್ಟದ ಕಾಲದಲ್ಲಿ ಉದಾತ್ತ ನಿರ್ಧಾರ ಕೈಗೊಂಡ ಶ್ವೇತಾ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದ ಹಾಗೂ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ‘ಜೀವಸಾರ್ಥಕತೆ’ (SOTTO) ತಂಡದ ಸೇವೆ ಅತ್ಯಂತ ಶ್ಲಾಘನೀಯವಾಗಿದೆ.
ಶ್ವೇತಾ ರವರು ಇದಕ್ಕೂ ಮೊದಲೇ ತಮ್ಮ ತಾಯಿಯಿಂದ ಒಂದು ಕಿಡ್ನಿಯನ್ನು ದಾನವಾಗಿ ಪಡೆದಿದ್ದರು, ಅಂಗಾಂಗ ದಾನದ ಮಹತ್ವ ಅರಿತಿದ್ದ ಕುಟುಂಬಸ್ಥರು ಶ್ವೇತಾ ರವರ ಮರಣ ನಂತರ ತಕ್ಷಣವೇ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿರುವುದು ಅಂಗಾಂಗ ದಾನದ ಒಂದು ಜೀವಸಾರ್ಥಕತೆ.
ಮರಣದ ನಂತರವೂ ಬದುಕುವ ಮಾರ್ಗವೇ ಅಂಗಾಂಗ ದಾನವಾಗಿದೆ. ಆರೋಗ್ಯ ಇಲಾಖೆಯ ‘ಜೀವಸಾರ್ಥಕತೆ’ ಪೋರ್ಟಲ್ನಲ್ಲಿ ನೀವೂ ಇಂದೇ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳುವ ಮೂಲಕ ಮತ್ತು ನಿಮ್ಮ ಈ ನಿರ್ಧಾರವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಎಲ್ಲರೂ ಕೈಜೋಡಿಸೋಣ ಎಂದು ಬರೆದುಕೊಂಡಿದ್ದಾರೆ.