ಚಾಮರಹಳ್ಳಿಯ ರೈತರಾದ ನಾಗೇಶಪ್ಪ ಮತ್ತು ವೆಂಕಟಸ್ವಾಮಿ. 
ರಾಜ್ಯ

ಮಳೆ ಕೊರತೆ, ಬೆಳೆ ನಷ್ಟ; ಅನ್ನದಾತನಿಗೆ ಬರಸಿಡಿಲು; ಕೃಷಿ ಕೈಬಿಟ್ಟು ದಿನಗೂಲಿಗೆ ಕೆಲಸದತ್ತ ಮುಖ ಮಾಡಿದ ಕೋಲಾರ ರೈತರು..!

ಹಿಂದೆ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದೆ. ಆಗ ಕೃಷಿ ಕಾರ್ಮಿಕರ ಕೂಲಿಯೂ ಕಡಿಮೆ ಇತ್ತು. ದಿನಕ್ಕೆ 150ರಿಂದ 175 ರೂ. ನೀಡಿದರೆ ಕಾರ್ಮಿಕರು ಸಿಗುತ್ತಿದ್ದರು. ಈಗ 500 ರೂ. ಕೊಟ್ಟರೂ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ನಾಗೇಶಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಚಾಮರಹಳ್ಳಿ: ಸತತ ಮಳೆ ಕೊರತೆ ಮತ್ತು ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಕೋಲಾರ ಹಾಗೂ ಕೆ.ಜಿ.ಎಫ್. ತಾಲೂಕುಗಳ ರೈತರ ಬದುಕು ದುಸ್ತರವಾಗಿದೆ. ಎಂದೂ ಪರಾವಲಂಬಿಯಾಗದ, ಹತ್ತಾರು ಜನರಿಗೆ ಅನ್ನ ನೀಡುತ್ತಿದ್ದ ಸ್ವಾವಲಂಬಿ ಭೂಮಾಲೀಕರು, ಇಂದು ಕೃಷಿ ಕೈಬಿಟ್ಟು ಜೀವನೋಪಾಯಕ್ಕಾಗಿ ದಿನಗೂಲಿ ಮತ್ತು ಹೈನುಗಾರಿಕೆಯತ್ತ ಮುಖ ಮಾಡುವಂತಾಗಿದೆ.

ಕಳೆದ ವರ್ಷ ರಾಗಿ ಬೆಳೆ ನಷ್ಟ ಅನುಭವಿಸಿದ್ದ ಕೋಲಾರ ತಾಲ್ಲೂಕಿನ ಚಾಮರಹಳ್ಳಿಯ 56 ವರ್ಷದ ನಾಗೇಶಪ್ಪ ಅವರು, ಈ ಬಾರಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಹಸಿಮೆಣಸಿನಕಾಯಿ ಬೆಳೆದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಪತ್ನಿ ಹಾಗೂ ಇಬ್ಬರು ಪುತ್ರರಾದ ದಿನೇಶ್ ಮತ್ತು ನಂಜುಂಡ ಅವರ ಜವಾಬ್ದಾರಿ ಹೊತ್ತಿರುವ ಅವರು, ಬೆಳೆಯ ಜೊತೆಗೆ ಕೂಲಿ ಕೆಲಸವನ್ನೂ ಮಾಡುತ್ತಿದ್ದಾರೆ.

ಹಸಿಮೆಣಸಿನಕಾಯಿ ಬೆಳೆ ಐದರಿಂದ ಆರು ತಿಂಗಳ ಅಲ್ಪಾವಧಿಯ ಬೆಳೆಯಾಗಿರುವುದರಿಂದ ಹೆಚ್ಚು ಆತಂಕವಿಲ್ಲ ಎಂಬುದು ಅವರ ಲೆಕ್ಕಾಚಾರ. ಪ್ರತಿದಿನ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಬೆಳೆ ನೋಡಿಕೊಂಡು, ಬಳಿಕ ಇತರರ ಹೊಲಗಳಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಾರೆ.

ಹಿಂದೆ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದೆ. ಆಗ ಕೃಷಿ ಕಾರ್ಮಿಕರ ಕೂಲಿಯೂ ಕಡಿಮೆ ಇತ್ತು. ದಿನಕ್ಕೆ 150ರಿಂದ 175 ರೂ. ನೀಡಿದರೆ ಕಾರ್ಮಿಕರು ಸಿಗುತ್ತಿದ್ದರು. ಈಗ 500 ರೂ. ಕೊಟ್ಟರೂ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ನಾಗೇಶಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಇದೀಗ ತಾವೇ ದಿನಗೂಲಿ ಕೆಲಸಕ್ಕೆ ಹೋಗುತ್ತಿರುವುದರಿಂದ ಈ ಪರಿಸ್ಥಿತಿಯ ಇನ್ನೊಂದು ಮುಖವನ್ನೂ ಅವರು ನೋಡುತ್ತಿದ್ದಾರೆ.

ಆಗಿನ ದಿನಗಳಲ್ಲಿ ಕೃಷಿಯಿಂದ ಬರುತ್ತಿದ್ದ ಆದಾಯದಲ್ಲಿ ಸರಳ ಜೀವನ ನಡೆಸಲು ಸಾಧ್ಯವಿತ್ತು. ಹಾಗಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲಿಲ್ಲ. ಆದರೆ, ಬರ ಪರಿಸ್ಥಿತಿ ಎಲ್ಲವನ್ನೂ ಬದಲಿಸಿದೆ ಎಂದು ನಾಗೇಶಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ನಾಗೇಶಪ್ಪ ಅವರ ಸ್ನೇಹಿತ ವೆಂಕಟಸ್ವಾಮಿ ಕೂಡ ಜಮೀನು ಹೊಂದಿದ್ದರೂ ಕೃಷಿ ಮಾಡುವುದನ್ನು ನಿಲ್ಲಿಸಿದ್ದಾರೆ. ಜಾನುವಾರು ಸಾಕಣೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ಅವರು, ಹಾಲು ಮಾರಾಟದಿಂದ ಬರುವ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಳೆಯ ಪರಿಸ್ಥಿತಿ ಸುಧಾರಿಸಿದರೆ ಮತ್ತೆ ತಮ್ಮ ಜಮೀನಿನಲ್ಲಿ ಕೃಷಿ ಆರಂಭಿಸುವುದಾಗಿ ತಿಳಿಸಿದ್ದಾರೆ.

ಟಿ. ಗೊಲ್ಲಹಳ್ಳಿಯ 55 ವರ್ಷದ ರೈತ ನಾರಾಯಣಸ್ವಾಮಿ ಅವರಿಗೂ ಬರದ ಬಿಸಿ ತಟ್ಟಿದೆ. ಮಳೆಯ ಕೊರತೆಯಿಂದ ತಮ್ಮ ಟೊಮೆಟೊ ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕೊಳವೆಬಾವಿ ಹೊಂದಿರುವ ರೈತರಿಗೂ ಉತ್ತಮ ಟೊಮೆಟೊ ಇಳುವರಿ ಪಡೆಯಲು ಸಾಕಷ್ಟು ಮಳೆಯ ಅಗತ್ಯವಿದೆ. ಅವರ ಕುಟುಂಬದ ಕೆಲವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೃಷಿ ನೋಡಿಕೊಳ್ಳಲು ನಾರಾಯಣಸ್ವಾಮಿ ಮಾತ್ರ ಊರಿನಲ್ಲಿ ಉಳಿದಿದ್ದಾರೆ.

ಈ ಋತುವಿನಲ್ಲಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆಯಲು ಸುಮಾರು 5 ಲಕ್ಷ ರೂ. ಖರ್ಚು ಮಾಡಿದ್ದರು. ಮಹಿಳಾ ಕಾರ್ಮಿಕರಿಗೆ ದಿನಕ್ಕೆ 500 ರೂ. ಹಾಗೂ ಪುರುಷ ಕಾರ್ಮಿಕರಿಗೆ 700 ರೂ. ಕೂಲಿ ನೀಡಿದ್ದರು. ಗಿಡಗಳು ಎರಡೂವರೆ ಅಡಿ ಎತ್ತರಕ್ಕೆ ಬೆಳೆದಿದ್ದರೂ ಮಳೆಯ ಅಭಾವದಿಂದ ಬೆಳೆ ನಷ್ಟವಾಗಿದೆ.

ಹೀಗಾಗಿ, ಹೆಚ್ಚು ಬಂಡವಾಳ ಹೂಡಿಕೆ ಮಾಡದೆ ಮತ್ತು ಕಡಿಮೆ ಕಾರ್ಮಿಕರ ಅಗತ್ಯವಿರುವ ಸೌತೆಕಾಯಿ ಬೆಳೆಯಲು ಅವರು ನಿರ್ಧರಿಸಿದ್ದಾರೆ. ಕೊಳವೆಬಾವಿ ಕೊರೆಸಿರುವ ರೈತರೂ ಭಾರೀ ನಷ್ಟ ಅನುಭವಿಸಿದ್ದಾರೆ. ನಮಗೆ ಈಗ ಮಳೆಯೊಂದೇ ಆಸರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ತಮ್ಮ ಹಿರಿಯ ಮಗ ಶ್ರೀಕಾಂತ್ ಪದವೀಧರನಾಗಿದ್ದು, ಕೃಷಿಯಲ್ಲಿ ಆಸಕ್ತಿ ತೋರದೆ ಮರದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾನೆ. ಎರಡನೇ ಮಗ ಶ್ರೀಧರ್ ಪಿಯುಸಿ ಓದುತ್ತಿದ್ದು, ಆಗಾಗ ಹೊಲದ ಕೆಲಸದಲ್ಲಿ ತಂದೆಗೆ ನೆರವಾಗುತ್ತಾನೆ. ಟೊಮೆಟೊ ಕೃಷಿಯಲ್ಲಿ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಾಗಿರುವುದರಿಂದಲೇ ಸೌತೆಕಾಯಿ ಬೆಳೆಯಲು ಮುಂದಾಗಿದ್ದೇನೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇದೇ ಗ್ರಾಮದ 60 ವರ್ಷದ ಮತ್ತೊಬ್ಬ ರೈತ ಶ್ರೀನಿವಾಸ ಕೃಷಿ ಮಾಡುವುದನ್ನೇ ನಿಲ್ಲಿಸಿ ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ.

ನಾಲ್ಕು ಜಾನುವಾರುಗಳನ್ನು ಖರೀದಿಸಿರುವ ಅವರು, ಪ್ರತಿ ತಿಂಗಳು ಸುಮಾರು 25 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಇದರಲ್ಲಿ 10 ಸಾವಿರ ರೂ. ಮೇವು ಖರೀದಿಗೆ ಖರ್ಚಾಗುತ್ತದೆ. ಉಳಿದ 15 ಸಾವಿರ ರೂ.ನಲ್ಲಿ ನಾಲ್ವರ ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕೃಷಿಯಲ್ಲಿನ ಅನಿಶ್ಚಿತತೆ ಮತ್ತು ಮಳೆಯ ಆತಂಕವಿಲ್ಲದೆ ಈಗ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯಿಂದ ನಿದ್ರಿಸುತ್ತಿದ್ದೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮತಗಳ್ಳತನ’ ಕುರಿತು ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ, ಆದರೆ ವಿರೋಧ ಪಕ್ಷಗಳಿಗೆ ಆಸಕ್ತಿಯಿಲ್ಲ: ಅಮಿತ್ ಶಾ

ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ..!

Hormuzನಲ್ಲಿ ತೈಲ ಟ್ಯಾಂಕರ್‌ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು..!

ನಂದಿನಿ ಗ್ರಾಹಕರ ಜೇಬಿಗೆ ಕತ್ತರಿ; ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಪರಿಷ್ಕರಿಸಿದ ಕೆಎಂಎಫ್, ಪ್ರತಿ ಲೀಟರ್‌ಗೆ 14 ರೂ. ಹೆಚ್ಚಳ..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಹವಾಮಾನ ಇಲಾಖೆ 'Yellow alert' ನಡುವೆಯೂ ಟೇಕಾಫ್, ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!