ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR 2026) ವೇಳೆ ಬೂತ್ ಮಟ್ಟದ ಅಧಿಕಾರಿ (BLO) ಮಾಡಿದ ತಪ್ಪಿನಿಂದ ಮಂಗಳೂರಿನ ನಿವಾಸಿ ಡೊನಾಲ್ಡ್ ಜೋಸೆಫ್ ರೆಗೋ ಅವರನ್ನು ತಪ್ಪಾಗಿ ಮೃತರೆಂದು ದಾಖಲಿಸಿ, ಕರಡು ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಮಂಗಳವಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಡಳಿತ ಈ ಕುರಿತು ಮಾಹಿತಿ ನೀಡಿದೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 24ರ ಮತದಾರರಾಗಿರುವ ರೆಗೋ, ತಮ್ಮ ತಂದೆಯ ಮರಣ ಪ್ರಮಾಣಪತ್ರದೊಂದಿಗೆ Enumeration Form ಅನ್ನು BLOಗೆ ಸಲ್ಲಿಸಿದ್ದರು.
ಅರ್ಜಿಯನ್ನು ಡಿಜಿಟಲೀಕರಣ ಮಾಡುವ ಸಂದರ್ಭದಲ್ಲಿ BLO, ಲಗತ್ತಿಸಿದ್ದ ಮರಣ ಪ್ರಮಾಣಪತ್ರವು ಮತದಾರ ರೆಗೋ ಅವರದ್ದೇ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಇದರ ಪರಿಣಾಮವಾಗಿ ರೆಗೋ ಅವರನ್ನು ‘ಮೃತ’ ಎಂದು ಗುರುತಿಸಲಾಗಿದ್ದು, ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
‘No Mapping Case’ ಎಂದು ಪರಿಗಣನೆ
ತನಿಖೆಯಲ್ಲಿ ರೆಗೋ ಅವರು Enumeration Formನಲ್ಲಿ Mapping ಮತ್ತು Progeny ವಿವರಗಳನ್ನು ಭರ್ತಿ ಮಾಡಿರಲಿಲ್ಲ ಎಂಬುದು ಕೂಡ ಪತ್ತೆಯಾಗಿದೆ. ಹೀಗಾಗಿ BLO ಅವರ ಅರ್ಜಿಯನ್ನು ‘No Mapping Case’ ಎಂದು ಪರಿಗಣಿಸಿದ್ದರು ಎಂದು ಜಿಲ್ಲಾಡಳಿತ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ, ಚುನಾವಣಾ ನೋಂದಣಿ ಅಧಿಕಾರಿ (ERO) ಈಗಾಗಲೇ ಸಂಬಂಧಪಟ್ಟ BLO ಅವರಿಂದ ವಿವರಣೆ ಕೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯೂ ಕೂಡ ಅಧಿಕಾರಿಗೆ ಸ್ಪಷ್ಟನೆ ಸಲ್ಲಿಸುವಂತೆ ಸೂಚಿಸಿದೆ. ಚುನಾವಣಾ ನಿಯಮಗಳ ಅನ್ವಯ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 24ರ ಅಂತಿಮ ಮತದಾರರ ಪಟ್ಟಿಯಲ್ಲಿ ಡೊನಾಲ್ಡ್ ಜೋಸೆಫ್ ರೆಗೋ ಅವರ ಹೆಸರನ್ನು ಮರು ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
‘ERO, BLO ನನ್ನನ್ನು ಸಂಪರ್ಕಿಸಿಯೇ ಇಲ್ಲ’: ರೆಗೋ
ಏತನ್ಮಧ್ಯೆ, ಜಿಲ್ಲಾಡಳಿತದ ಹೇಳಿಕೆಗೆ ಡೊನಾಲ್ಡ್ ಜೋಸೆಫ್ ರೆಗೋ ವಿರೋಧ ವ್ಯಕ್ತಪಡಿಸಿದ್ದಾರೆ. ತಪ್ಪು BLO ಗಮನಕ್ಕೆ ಬಂದ ಬಳಿಕ ಆಗಸ್ಟ್ 29ರಂದು ERO ಮತ್ತು BLO ತಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸಿ, BLO App ಮೂಲಕ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.
ಆದರೆ ಈ ಹೇಳಿಕೆಯನ್ನು ರೆಗೋ ತಳ್ಳಿಹಾಕಿದ್ದು, ERO ಆಗಲಿ, BLO ಆಗಲಿ ತಮ್ಮನ್ನು ಸಂಪರ್ಕಿಸಿಲ್ಲ. ಬದಲಿಗೆ ತಾವೇ ಆಗಸ್ಟ್ 28ರಂದು ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ, ಜೀವಂತ ಮತದಾರನನ್ನು ಮೃತ ಎಂದು ದಾಖಲಿಸಿದ ಪ್ರಕರಣದಲ್ಲಿ BLO ಮಾಡಿದ ತಪ್ಪು ಹಾಗೂ ನಂತರದ ಕ್ರಮಗಳ ಕುರಿತು ಜಿಲ್ಲಾಡಳಿತದ ಹೇಳಿಕೆ ಮತ್ತು ಮತದಾರನ ಹೇಳಿಕೆ ನಡುವೆ ವ್ಯತ್ಯಾಸ ಕಂಡುಬಂದಿದೆ.