ಬೆಂಗಳೂರು: ಇತ್ತೀಚೆಗೆ ಕೆಲವು ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ, ಕೆಲವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ (SC/ST Act) ಅಡಿಯಲ್ಲಿ ಬೇರೆ ಬೇರೆ ಪ್ರಕರಣಗಳಿಗೂ ದೂರು ದಾಖಲಿಸುತ್ತಿದ್ದರು. ಆದರೆ, ಇದಕ್ಕೆ ಲಗಾಮು ಹಾಕಿರುವ ಕರ್ನಾಟಕ ಹೈಕೋರ್ಟ್, "ನಾಗರಿಕ (ಸಿವಿಲ್) ವ್ಯಾಜ್ಯಗಳನ್ನು ಕ್ರಿಮಿನಲ್ ಪ್ರಕರಣಗಳಾಗಿ ಪರಿವರ್ತಿಸಿ ಸೇಡು ತೀರಿಸಿಕೊಳ್ಳಲು ಬಳಸಬಾರದು" ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಮಹಾಲಿಂಗಪುರದಲ್ಲಿರುವ 6.20 ಎಕರೆ ಜಮೀನಿಗೆ ಸಂಬಂಧಿಸಿದಂತೆ ದೂರುದಾರರು ಮತ್ತು ಆರೋಪಿಗಳ ನಡುವೆ ಈಗಾಗಲೇ 2016ರಿಂದ ಸಿವಿಲ್ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಇದರ ನಡುವೆಯೇ, ದೂರುದಾರೆ ಉಮಾ ಎಂಬುವವರು ಮಂಜುನಾಥ್ ಸೇರಿದಂತೆ ಏಳು ಜನರ ವಿರುದ್ಧ ಗಂಭೀರ ಆರೋಪ ಮಾಡಿ, ಜಿಗಣಿಯ ಜಾಗದಲ್ಲಿದ್ದ ತಮ್ಮ ದಿವಂಗತ ತಂದೆಯ ಸಮಾಧಿ ಕಲ್ಲನ್ನು ಕಿತ್ತುಹಾಕಲಾಗಿದೆ ಮತ್ತು ತಮ್ಮ ಕುಟುಂಬಕ್ಕೆ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಇದರ ಅನ್ವಯ ಆರೋಪಿಗಳ ಮೇಲೆ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಹಲವು ಕಲಂಗಳು ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329, 351 ಮತ್ತು 45 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಂದುವರೆದು, ಅಧೀನ ನ್ಯಾಯಾಲಯವು ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದಾಗ, ಆರೋಪಿಗಳು ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಈ ವಿವಾದವು ಸಂಪೂರ್ಣವಾಗಿ ಸಿವಿಲ್ ಸ್ವರೂಪದ್ದು ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ, ಸ್ಥಿರಾಸ್ತಿಯ ಹಕ್ಕು ಯಾರಿಗೆ ಸೇರಿದ್ದು ಎಂಬುದು ನ್ಯಾಯಾಲಯದಲ್ಲಿ ಇನ್ನೂ ನಿರ್ಧಾರವಾಗದಿರುವಾಗ, ಸಿವಿಲ್ ವ್ಯಾಜ್ಯವನ್ನು ಆಧಾರವಾಗಿಟ್ಟುಕೊಂಡು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಈ ಮೂಲಕ, ಆಸ್ತಿ ಜಗಳದ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಒಂದು ಅಸ್ತ್ರವಾಗಿ ಬಳಸುವುದು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಎಂದು ಹೈಕೋರ್ಟ್ ಕಠಿಣವಾಗಿ ಹೇಳಿದೆ.
ಒಟ್ಟಾರೆಯಾಗಿ, ಈ ತೀರ್ಪು ಸಿವಿಲ್ ವಿವಾದಗಳನ್ನು ಕ್ರಿಮಿನಲ್ ಕೇಸ್‌ಗಳಾಗಿ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಸುಳ್ಳು ಪ್ರಕರಣಗಳಾಗಿ ದಾಖಲಿಸುವುದಕ್ಕೆ ಬ್ರೇಕ್ ಹಾಕುತ್ತದೆ. ಜೊತೆಗೆ, ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕಾದ ಆಸ್ತಿ ವಿಚಾರಗಳನ್ನು ಅಲ್ಲೇ ಬಗೆಹರಿಸಿಕೊಳ್ಳಬೇಕೇ ಹೊರತು, ಪೊಲೀಸರ ಮೂಲಕ ಕ್ರಿಮಿನಲ್ ತನಿಖೆಗೆ ಒಳಪಡಿಸಿ ಕಿರುಕುಳ ನೀಡಬಾರದು ಎಂಬುದನ್ನು ಇದು ಪುನರುಚ್ಚರಿಸುತ್ತದೆ.