ಕೃಷ್ಣ ಬೈರೇಗೌಡ 
ರಾಜ್ಯ

'ಫುಟ್‌ಪಾತ್‌ಗೆ ಮತ್ತೆ ಕನ್ನ ಹಾಕಿದ್ರೆ FIR, ಪೊಲೀಸ್-ಪಾಲಿಕೆ ಜಂಟಿ ಟಾಸ್ಕ್‌ಫೋರ್ಸ್'; ಕೃಷ್ಣ ಬೈರೇಗೌಡ ಖಡಕ್‌ ಎಚ್ಚರಿಕೆ

ನಗರದ ಐದು ನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಪೊಲೀಸ್ ಹಾಗೂ ನಾಗರಿಕ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಟಾಸ್ಕ್‌ಫೋರ್ಸ್‌ಗಳನ್ನು ರಚಿಸಿ, ಫುಟ್‌ಪಾತ್‌ಗಳ ಮೇಲೆ ನಿರಂತರ ನಿಗಾ ವಹಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.

ಬೆಂಗಳೂರು: ಬೆಂಗಳೂರಿನ ವಿವಿಧೆಡೆ ಈಗಾಗಲೇ ತೆರವುಗೊಳಿಸಿರುವ ಫುಟ್‌ಪಾತ್‌ಗಳಲ್ಲಿ ಮತ್ತೆ ಒತ್ತುವರಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮರುಒತ್ತುವರಿ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು Greater Bengaluru Development ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಐದು ನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಪೊಲೀಸ್ ಹಾಗೂ ನಾಗರಿಕ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಟಾಸ್ಕ್‌ಫೋರ್ಸ್‌ಗಳನ್ನು ರಚಿಸಿ, ಫುಟ್‌ಪಾತ್‌ಗಳ ಮೇಲೆ ನಿರಂತರ ನಿಗಾ ವಹಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.

ಫುಟ್‌ಪಾತ್ ಒತ್ತುವರಿ ಕುರಿತಂತೆ ನಡೆದ ವರ್ಚುವಲ್‌ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆ ಪರಿಶೀಲಿಸಿದ ಸಚಿವರು, ಒತ್ತುವರಿ ತೆರವುಗೊಳಿಸಿದ ಬಳಿಕ ಅದೇ ಸ್ಥಳದಲ್ಲಿ ಮತ್ತೆ ಒತ್ತುವರಿ ಕಾಣಿಸಿಕೊಳ್ಳುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

“ಒತ್ತುವರಿ ತೆರವುಗೊಳಿಸುವುದಷ್ಟೇ ಸಾಕಾಗುವುದಿಲ್ಲ. ತೆರವುಗೊಳಿಸಿದ ಜಾಗ ಮತ್ತೆ ಒತ್ತುವರಿಯಾಗದಂತೆ ಶಾಶ್ವತ ವ್ಯವಸ್ಥೆ ರೂಪಿಸಬೇಕು,” ಎಂದು ಅವರು ಸೂಚಿಸಿದರು.

ಮರು ಒತ್ತುವರಿಯಾದ್ರೆ ಕಠಿಣ ಕ್ರಮ

ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳನ್ನೊಳಗೊಂಡ ಜಂಟಿ ಟಾಸ್ಕ್‌ಫೋರ್ಸ್ ಇರಬೇಕು. ತೆರವುಗೊಳಿಸಿರುವ ಫುಟ್‌ಪಾತ್‌ಗಳನ್ನು ನಿಯಮಿತವಾಗಿ ಹಾಗೂ ಅನಿರೀಕ್ಷಿತವಾಗಿ ಪರಿಶೀಲಿಸಬೇಕು. ಮರು ಒತ್ತುವರಿ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೈರೇಗೌಡ ನಿರ್ದೇಶಿಸಿದರು.

ಮರುಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಛಾಯಾಚಿತ್ರ ಹಾಗೂ ಜಿಯೋ-ಟ್ಯಾಗ್‌ ಮಾಡಿದ ದಾಖಲೆಗಳೊಂದಿಗೆ ವರದಿ ಮಾಡಬೇಕು. ಮಾರ್ಷಲ್‌ಗಳು ಮತ್ತು ಬೀಟ್‌ ಪೊಲೀಸರು ಜಂಟಿಯಾಗಿ ನಿಯಮಿತ ತಪಾಸಣೆ ನಡೆಸಬೇಕು. ಮರುಒತ್ತುವರಿ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವುದು, ಒತ್ತುವರಿಗೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದು ಹಾಗೂ ನಿಯಮಾನುಸಾರ ಹೆಚ್ಚಿನ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಕಣ್ಗಾವಲು ಮತ್ತು ಜಾರಿ ಕಾರ್ಯಾಚರಣೆಯ ಜವಾಬ್ದಾರಿಯನ್ನು ಪ್ರತಿ ಅಧಿಕಾರಿಗೂ ಸ್ಪಷ್ಟವಾಗಿ ಹಂಚಿಕೆ ಮಾಡಬೇಕು. ಕೈಗೊಂಡ ಕ್ರಮ ಹಾಗೂ ಪ್ರಗತಿಯ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಲು ವ್ಯವಸ್ಥೆ ರೂಪಿಸಬೇಕು ಎಂದರು.

ಬೀದಿ ವ್ಯಾಪಾರಿಗಳಿಗೂ ಕಡಿವಾಣ

ಬೀದಿ ವ್ಯಾಪಾರಕ್ಕೆ ನಿರ್ಬಂಧ ಅಥವಾ ನಿಷೇಧ ಇರುವ ರಸ್ತೆಗಳನ್ನು ಸ್ಪಷ್ಟವಾಗಿ ಗುರುತಿಸಿ, ಈ ಕುರಿತು ಸಂಬಂಧಪಟ್ಟ ಪೊಲೀಸ್ ಹಾಗೂ ನಾಗರಿಕ ಸಂಸ್ಥೆಗಳಿಗೆ ಅಧಿಕೃತವಾಗಿ ಮಾಹಿತಿ ನೀಡಬೇಕು ಎಂದು ಸಚಿವರು ನಿರ್ದೇಶಿಸಿದರು. ಹೆಚ್ಚು ಸಂಚಾರವಿರುವ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ನಗರದಲ್ಲಿರುವ ಬೀದಿ ವ್ಯಾಪಾರಿಗಳ ಕುರಿತು ಹೊಸದಾಗಿ ಸಮಗ್ರ ಸಮೀಕ್ಷೆ ನಡೆಸಬೇಕು. ಸಮೀಕ್ಷೆಯ ಬಳಿಕ ಅರ್ಹತೆ ಹಾಗೂ ಅನ್ವಯವಾಗುವ ಕಾನೂನು ಮಾನದಂಡಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಬೈರೇಗೌಡ ತಿಳಿಸಿದರು.

ಕಾನೂನು ಪ್ರಕಾರ ಟೌನ್ ವೆಂಡಿಂಗ್ ಕಮಿಟಿಗಳ ರಚನೆ ಸೇರಿದಂತೆ ಬಾಕಿ ಉಳಿದಿರುವ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆಯೂ ಅವರು ಸೂಚಿಸಿದರು. ಪೊಲೀಸ್-ಪಾಲಿಕೆ ಜಂಟಿ ಕಾರ್ಯಾಚರಣೆ, ಟಾಸ್ಕ್‌ಫೋರ್ಸ್‌ಗಳ ರಚನೆ, ರಸ್ತೆವಾರು ನಿರ್ಬಂಧಿತ ಪ್ರದೇಶಗಳ ಗುರುತಿಸುವಿಕೆ, ಮರುಒತ್ತುವರಿ ಪತ್ತೆ ಹಾಗೂ ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರ ಮಟ್ಟದಲ್ಲಿ ಜಂಟಿ ಆದೇಶ/ಸುತ್ತೋಲೆ ಹೊರಡಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

“ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿ ಮತ್ತು ವ್ಯಾಪ್ತಿಯನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು,” ಎಂದು ಕೃಷ್ಣ ಬೈರೇಗೌಡ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೈತರ ಸಾಲ ಮನ್ನಾಗೆ ಕೇಂದ್ರದ ನೆರವು ಕೇಳಿದ CM ಡಿಕೆ ಶಿವಕುಮಾರ್: ವಿಜಯೇಂದ್ರ, ಅಶೋಕ್‌ಗೂ ದೆಹಲಿಗೆ ಬರುವಂತೆ ಆಹ್ವಾನ

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

'Hanuman Ansh': ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video

ಮಳೆ ಕೊರತೆ, ಬರದ ಆತಂಕ; ರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಾಲನೆ

Mangaluru; ಬ್ರೇಕ್‌ಫಾಸ್ಟ್‌ಗೆ ತೆರಳಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳಿಗೆ ಬೆದರಿಕೆ: ಸಂಘ ಪರಿವಾರದ ಇಬ್ಬರು ಸೇರಿ ಮೂವರ ವಿರುದ್ಧ FIR