ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಆತಂಕ ಮೂಡಿಸಿದ್ದ ಹೆಣ್ಣು ಚಿರತೆ ಮತ್ತು ಅದರ ಮರಿಗಳ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯಾಧಿಕಾರಿಗಳಿಗೆ ಶಾಕ್ ಎದುರಾಗಿದ್ದು, ಚಿರತೆ ಸೆರೆ ಕಾರ್ಯಾಚರಣೆಗೆ ಭಾರಿ ಟ್ವಿಸ್ಟ್ ದೊರೆತಿದೆ.
ಹೌದು.. ಚಿತ್ರದುರ್ಗದ ಬೀರೇನಹಳ್ಳಿ ಕಾಟನಹಟ್ಟಿ ಗ್ರಾಮದ ಹೊರವಲಯದಲ್ಲಿ ತಾಯಿ ಚಿರತೆ ಹಾಗೂ ಅದರ ಮರಿಗಳು ಪದೇಪದೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ರೈತರಲ್ಲಿ ಆತಂಕ ಹೆಚ್ಚಾಗಿತ್ತು.
ಹೀಗಾಗಿ ಮಾನವ-ವನ್ಯಜೀವಿ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು.
ತಾಯಿ ಚಿರತೆ ಹಾಗೂ ಅದರ ಮರಿಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಅನಿರೀಕ್ಷಿತವಾಗಿ ಗಂಡು ಚಿರತೆಯೊಂದು ಸಿಕ್ಕಿಬಿದ್ದು ಇಡೀ ಕಾರ್ಯಾಚರಣೆಗೆ ರೋಚಕ ತಿರುವು ನೀಡಿದೆ.
ಬೋನ್ ಇಟ್ಟಿದ್ದು ಹೆಣ್ಣಿಗೆ, ಸೆರೆಯಾಗಿದ್ದು 'ಗಂಡು'
ತಾಯಿ ಚಿರತೆ ಮತ್ತು ಮರಿಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ಆಹಾರವಿಟ್ಟು ಬಲೆ ಬೀಸಿದ್ದರು. ಆದರೆ ಬೋನನ್ನು ಪರಿಶೀಲಿಸಿದಾಗ, ಅರಣ್ಯಾಧಿಕಾರಿಗಳಿಗೂ ಅಚ್ಚರಿ ಕಾದಿತ್ತು.
ತಾಯಿ ಚಿರತೆ ಅಥವಾ ಮರಿಗಳ ಬದಲಿಗೆ ಪೂರ್ಣವಯಸ್ಕ ಗಂಡು ಚಿರತೆಯೊಂದು ಬೋನಿನಲ್ಲಿ ಸೆರೆಯಾಗಿತ್ತು. ಈ ಬಗ್ಗೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಧಾವಿಸಿ, ಪ್ರದೇಶವನ್ನು ಭದ್ರಪಡಿಸಿದರು.
ಬೋನಿನಲ್ಲಿ ಸೆರೆಯಾಗಿದ್ದ ಗಂಡು ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದು, ನಿಯಮಾನುಸಾರ ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆ ಮುಂದುವರಿಕೆ
ಇನ್ನು ಗಂಡು ಚಿರತೆ ಸೆರೆಯಾಗಿದ್ದರೂ ಬೀರೇನಹಳ್ಳಿ ಕಾಟನಹಟ್ಟಿಯಲ್ಲಿ ಆತಂಕ ಸಂಪೂರ್ಣವಾಗಿ ದೂರವಾಗಿಲ್ಲ. ತಾಯಿ ಚಿರತೆ ಹಾಗೂ ಅದರ ಮರಿಗಳು ಇನ್ನೂ ಸೆರೆಯಾಗಿಲ್ಲ.
ಹೀಗಾಗಿ ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಚಿರತೆ ಕುಟುಂಬದ ಚಲನವಲನದ ಮೇಲೆ ನಿರಂತರ ಕಣ್ಣಿಟ್ಟಿದೆ. ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ.
ಆತಂಕ ಬೇಡ ಎಂದ ಅಧಿಕಾರಿಗಳು
ಗ್ರಾಮಸ್ಥರು ಆತಂಕಪಡಬೇಕಾಗಿಲ್ಲ. ಮಾನವ-ವನ್ಯಜೀವಿ ಸಂಘರ್ಷ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.