ನವದೆಹಲಿ: ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕದ ನಾಲ್ವರು ಸಾಧಕ ಶಿಕ್ಷಕರು ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದು, ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದಾರೆ.
ಶಿಕ್ಷಕರ ದಿನಾಚರಣೆಯ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ, ದೇಶದ ಅತ್ಯುನ್ನತ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.
ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕದ ನಾಲ್ವರು ಸಾಧಕ ಶಿಕ್ಷಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಪ್ರಶಸ್ತಿಯು ರೂ.50,000 ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹೊಸನಗರ ತಾಲೂಕಿನ ಸಮಾತಗಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಎಸ್. ಅವರು ಕರ್ನಾಟಕದಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ಈ ಗೌರವ ಪಡೆದ ಏಕೈಕ ಶಿಕ್ಷಕಿಯಾಗಿದ್ದಾರೆ. ಉಳಿದ ಮೂವರು ಪ್ರಶಸ್ತಿ ಪುರಸ್ಕೃತರು ಬೆಂಗಳೂರಿನವರಾಗಿದ್ದು, ಹಿರಿಯ ವಿದ್ಯಾರ್ಥಿಗಳು ಹಾಗೂ ಕಾಲೇಜು ಪದವೀಧರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ರತ್ನಕುಮಾರಿ ಅವರು ಮಾತನಾಡಿ, ಈ ಪ್ರಶಸ್ತಿ ತಮಗೆ ದೊಡ್ಡ ಅಚ್ಚರಿ ಹಾಗೂ ಗೌರವ ತಂದಿದೆ ಎಂದು ಹೇಳಿದ್ಗಾಪೆ,
ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಸಂತಸದ ಅನುಭವವನ್ನಾಗಿಸಲು ಸದಾ ಪ್ರಯತ್ನಿಸಿದ್ದೇನೆ. ನವೀನ ಆಟಿಕೆ ಆಧಾರಿತ ಬೋಧನಾ ವಿಧಾನ, ಅಬಾಕಸ್ ಗಣಿತ, ಚದುರಂಗ, ಬ್ಯಾಗ್‌ರಹಿತ ದಿನಗಳು ಹಾಗೂ ಪರಿಸರ ಯೋಜನೆಗಳ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸಲು ಶ್ರಮಿಸಿದ್ದೇನೆ ಎಂದು ತಿಳಿಸಿದರು.
ಅವರ ಪ್ರಶಸ್ತಿ ಪ್ರಮಾಣಪತ್ರದಲ್ಲಿ, “ಸಾಂಸ್ಕೃತಿಕ ಸಂರಕ್ಷಣೆಯನ್ನು ಸಮಗ್ರ ಮಕ್ಕಳ ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಮೂಲಕ ಗ್ರಾಮೀಣ ಶಿಕ್ಷಣದಲ್ಲಿ ಪರಿವರ್ತನೆ ತಂದಿದ್ದಾರೆ. ಸಂಪನ್ಮೂಲಗಳ ಕೊರತೆಯ ನಡುವೆಯೂ ಸ್ಥಳೀಯ ಸಮುದಾಯ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ ಪಡೆದು ಗ್ರಾಮೀಣ ಶಾಲೆಯನ್ನು ಚೈತನ್ಯಮಯ ಕಲಿಕಾ ಕೇಂದ್ರವನ್ನಾಗಿ ರೂಪಿಸಿದ್ದಾರೆ” ಎಂದು ಪ್ರಶಂಸಿಸಲಾಗಿದೆ.
ತಮ್ಮ ಶಾಲೆ ದೂರದ ಪ್ರದೇಶದಲ್ಲಿದ್ದು, ಅಲ್ಲಿ ಕೇವಲ 56 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಕೇವಲ ನಾಲ್ವರು ಸಮಾತಗಾರಿನವರಾಗಿದ್ದು, ಉಳಿದವರು ಸುತ್ತಮುತ್ತಲಿನ 15 ಗ್ರಾಮಗಳಿಂದ ಬರುತ್ತಾರೆ. ನಮ್ಮ ಶಾಲೆಯನ್ನು ಈ ರೀತಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವುದು ದೊಡ್ಡ ಗೌರವ ಎಂದು ರತ್ನಕುಮಾರಿ ಅವರು ಹೇಳಿದ್ದಾರೆ.
ತಮ್ಮ ಸಾಧನೆಗೆ ಸಹೋದ್ಯೋಗಿ ಎಲ್.ಯು. ಅಂಕಿತಾ ಸೇರಿದಂತೆ ಇಡೀ ತಂಡವೇ ಕಾರಣ. “ನಾನು ಹಿರಿಯ ಶಿಕ್ಷಕಿಯಾಗಿದ್ದು, ಶೀಘ್ರದಲ್ಲೇ ಇದೇ ಶಾಲೆಯಲ್ಲಿ 25 ವರ್ಷಗಳ ಬೋಧನಾ ಸೇವೆ ಪೂರ್ಣಗೊಳಿಸಲಿದ್ದೇನೆ. ಹೀಗಾಗಿ ನನಗೆ ಪ್ರಶಸ್ತಿ ದೊರೆತಿರಬಹುದು. ಆದರೆ ಈ ಗೌರವಕ್ಕೆ ನಮ್ಮೆಲ್ಲರೂ ಅರ್ಹರು” ಎಂದು ತಿಳಿಸಿದರು.
ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಇಂದಿರಾನಗರದ ನ್ಯೂ ಹೊರೈಜನ್ ಪಬ್ಲಿಕ್ ಶಾಲೆಯ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ರಾಧಾ ರಾಜೇಶ್ ಅವರು, ಅನೇಕ ವಿದ್ಯಾರ್ಥಿಗಳನ್ನು ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ ಹಾಗೂ ರಾಷ್ಟ್ರೀಯ ಮನ್ನಣೆಯಲ್ಲಿ ಪ್ರತಿಷ್ಠಿತ ವೃತ್ತಿಜೀವನದ ಕಡೆಗೆ ಮಾರ್ಗದರ್ಶನ ಮಾಡಿದ್ದಾರೆ.