ಕೋಲಾರ: ತಾಲ್ಲೂಕಿನ ದೊಡ್ಡಕಾರಿ ಬಳಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದ ಶಾರದಮ್ಮ(70), ದೀಕ್ಷಿತಾ (25), ದೇವೇಂದ್ರ ಕುಮಾರ್ (41), ಜಿಷ್ಣು (13) ಮೃತರು. ಕಾರಿನಲ್ಲಿದ್ದ ಚಾಲಕ ವಿಕಾಸ್, ನೀತು, ಆದ್ವಿಕ, ಕವಿತಾ ಗಾಯಾಳುಗಳು. ಇವರನ್ನು ಬಂಗಾರಪೇಟೆ, ಕೋಲಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಟುಂಬಸ್ಥರು ಸೇರಿಕೊಂಡು ತಿರುಪತಿಗೆ ತೆರಳಿದ್ದರು. ತಿರುಪತಿಯ ತಿಮ್ಮಪ್ಪನ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಟೊಯೋಟಾ ರಿಯಾನ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ವಿಕಾಸ್, ನೀತು, ಆದ್ವಿಕ ಮೂವರು ಗಾಯಗೊಂಡಿದ್ದಾರೆ.
ಕಾರು ಚಲಾಯಿಸುತ್ತಿದ್ದ ವಿಕಾಸ್ ಅವರ ಪ್ರಾಥಮಿಕ ಹೇಳಿಕೆಯ ಪ್ರಕಾರ, ಏಕಾಏಕಿ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ವಾಹನವನ್ನು ಪಕ್ಕಕ್ಕೆ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬೇತಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.