ಯಶವಂತಪುರಂ ಎಪಿಎಂಸಿ ಮಾರುಕಟ್ಟೆಯಲ್ಲಿ ಡಿಕೆ ಶಿವಕುಮಾರ್ 
ರಾಜ್ಯ

ಯಶವಂತಪುರ APMCಗೆ ಸಿಎಂ ದಿಢೀರ್ ಭೇಟಿ: ರೈತರ ಅಹವಾಲು ಆಲಿಸಿದ ಡಿಕೆ ಶಿವಕುಮಾರ್, Video

ಬೆಳಗ್ಗೆ ಸುಮಾರು 7 ಗಂಟೆಗೆ ಮಾರುಕಟ್ಟೆಗೆ ಆಗಮಿಸಿದ ಡಿಕೆ ಶಿವಕುಮಾರ್, ಈರುಳ್ಳಿ ಮಾರುಕಟ್ಟೆ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಅಲ್ಲಿನ ವಹಿವಾಟು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ, ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು.

ಬೆಳಗ್ಗೆ ಸುಮಾರು 7 ಗಂಟೆಗೆ ಮಾರುಕಟ್ಟೆಗೆ ಆಗಮಿಸಿದ ಡಿಕೆ ಶಿವಕುಮಾರ್, ಈರುಳ್ಳಿ ಮಾರುಕಟ್ಟೆ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಅಲ್ಲಿನ ವಹಿವಾಟು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ರೈತರು ಈರುಳ್ಳಿ ಬೆಲೆ, ತೂಕ ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಹಲವು ಸಮಸ್ಯೆಗಳನ್ನು ತಂದರು.

ಈರುಳ್ಳಿ, ಆಲೂಗಡ್ಡೆ ಹಾಗೂ ಶುಂಠಿ ಮಂಡಿಗಳಿಗೆ ತೆರಳಿ ರೈತರು, ವರ್ತಕರು ಮತ್ತು ಮಹಿಳಾ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಅವರು, ಸ್ಥಳದಲ್ಲೇ ಅಗತ್ಯ ನಿರ್ದೇಶನಗಳನ್ನು ನೀಡಿದರು. ಮಳೆ ಇಲ್ಲದೆ ಇಳುವರಿ ಕಡಿಮೆಯಾಗಿದೆ ಹಾಗೂ ಬೋರ್‌ವೆಲ್ ಇದ್ದರೂ ವಿದ್ಯುತ್ ಸಮಸ್ಯೆಯಿದೆ ಎಂದು ಹಾಸನದ ರೈತರು ತಮ್ಮ ಅಳಲನ್ನು ಸಿಎಂ ಬಳಿ ತೋಡಿಕೊಂಡರು.

ಕೆಲ ರೈತರು ತೂಕದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದರು. 65 ಕೆಜಿ ಈರುಳ್ಳಿ ಚೀಲವನ್ನು ಕೆಲವೊಮ್ಮೆ 50 ಕೆಜಿ ಎಂದು ಲೆಕ್ಕ ಹಾಕಲಾಗುತ್ತಿದೆ ಎಂದು ರೈತರೊಬ್ಬರು ದೂರಿದರು. ರೈತರೊಂದಿಗೆ ಮಾತನಾಡಿದ ಸಿಎಂ, ಅವರ ಸ್ವಂತ ಊರು, ಎಷ್ಟು ಜಮೀನು ಹೊಂದಿದ್ದಾರೆ, ಯಾವ ಬೆಳೆ ಬೆಳೆಯುತ್ತಿದ್ದಾರೆ, ಉತ್ಪಾದನಾ ವೆಚ್ಚ ಎಷ್ಟಿದೆ ಹಾಗೂ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಸಿಗುತ್ತಿದೆ ಎಂಬ ಮಾಹಿತಿಯನ್ನು ಪಡೆದುಕೊಂಡರು.

ಕೃಷಿ ಸಚಿವರೇ ಬರುತ್ತಿಲ್ಲ

ಮಾರುಕಟ್ಟೆಯ ಈರುಳ್ಳಿ ಮಂಡಿಗೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ವ್ಯಾಪಾರಿಗಳು ಹಾಗೂ ರೈತರ ಬಳಿ ನೇರವಾಗಿ ಮಾಹಿತಿ ಪಡೆದರು. ಮಾರಾಟದ ವೇಳೆ ತೂಕದಲ್ಲಿ ಮೋಸ ಆಗುತ್ತಿದೆಯೇ ಎಂದು ರೈತರನ್ನು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ರೈತರು ತೂಕದಲ್ಲಿ ಯಾವುದೇ ಮೋಸ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಕೃಷಿ ಸಚಿವರು ಮಾರುಕಟ್ಟೆಗೆ ಬರುತ್ತಿಲ್ಲವೆಂದು ದೂರು ನೀಡಿದರು.

ರೈತರಿಗೆ ಸಿಎಂ ಭರವಸೆ

ಗ್ರಾಮಗಳಲ್ಲಿ ವಿದ್ಯುತ್ ಮತ್ತು ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಪರಿಸ್ಥಿತಿಯನ್ನೂ ಡಿಕೆಶಿ ವಿಚಾರಿಸಿದರು. ಸಮಸ್ಯೆ ಹೇಳಿಕೊಂಡ ರೈತರೊಬ್ಬರಿಂದ ಮೊಬೈಲ್‌ ನಂಬರ್ ಪಡೆದುಕೊಂಡ ಅವರು, ವಿದ್ಯುತ್ ಸಂಪರ್ಕಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ರಸ್ತೆ ಸಮಸ್ಯೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಮಾರುಕಟ್ಟೆಯಲ್ಲಿನ ಮೂಲಸೌಕರ್ಯಗಳ ಬಗ್ಗೆಯೂ ದೂರು

ಯಶವಂತಪುರ ಎಪಿಎಂಸಿಯಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯ ಬಗ್ಗೆಯೂ ರೈತರು ಹಾಗೂ ವ್ಯಾಪಾರಿಗಳು ಮುಖ್ಯಮಂತ್ರಿಗಳ ಗಮನ ಸೆಳೆದರು. ಕುಡಿಯುವ ನೀರಿಗೆ ಬಾಟಲಿ ನೀರನ್ನೇ ಖರೀದಿಸಬೇಕಾದ ಪರಿಸ್ಥಿತಿ ಇದೆ.

ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳೂ ಸಮರ್ಪಕವಾಗಿಲ್ಲ ಎಂದು ದೂರಿದರು. ರೈತರ ಅಹವಾಲುಗಳನ್ನು ಕೆಲಕಾಲ ನಿಂತು ಆಲಿಸಿದ ಡಿಕೆಶಿ, ಮಾರುಕಟ್ಟೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಮಿಕರ ಜೊತೆ ಇಡ್ಲಿ ಸವಿದ ಸಿಎಂ

ಮಾರುಕಟ್ಟೆ ಭೇಟಿಯ ವೇಳೆ ಡಿಕೆ ಶಿವಕುಮಾರ್ ಅಲ್ಲಿನ ಸಣ್ಣ ಉಪಾಹಾರ ಅಂಗಡಿಯೊಂದರಲ್ಲಿ ಕಾರ್ಮಿಕರ ಜೊತೆ ಕುಳಿತು ಇಡ್ಲಿ ಸೇವಿಸಿದರು. ಈ ವೇಳೆ ಅಂಗಡಿ ಮಾಲೀಕರಿಗೆ 500 ನೀಡಿ, ತಮ್ಮೊಂದಿಗೆ ಉಪಾಹಾರ ಸೇವಿಸುತ್ತಿರುವ ಕಾರ್ಮಿಕರಿಂದ ಹಣ ಪಡೆಯದಂತೆ ಸೂಚಿಸಿದರು.

ಸಾಮಾನ್ಯವಾಗಿ ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ಕಾಣಿಸಿಕೊಳ್ಳುವ ಸಿಎಂ, ಯಾವುದೇ ಪೂರ್ವ ಸೂಚನೆಯಿಲ್ಲದೆ ಮಾರುಕಟ್ಟೆಗೆ ಭೇಟಿ ನೀಡಿ ರೈತರು ಮತ್ತು ಕಾರ್ಮಿಕರೊಂದಿಗೆ ಬೆರೆತಿರುವುದು ಗಮನ ಸೆಳೆಯಿತು. ರೈತರ ಸಮಸ್ಯೆಗಳನ್ನು ಕಚೇರಿಯಲ್ಲಿ ಕುಳಿತು ಕೇಳುವುದಕ್ಕಿಂತ ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿ ಅರಿಯುವ ಉದ್ದೇಶದಿಂದ ಈ ದಿಢೀರ್ ಭೇಟಿ ನಡೆದಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

LPG ಗ್ರಾಹಕರಿಗೆ ಕೇಂದ್ರದ ಭರ್ಜರಿ ರಿಲೀಫ್: ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್!

ಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ? ಪ್ಯಾರಿಸ್‌ನ Eiffel Tower ಬಂದ್, ಭಾರೀ ವಿವಾದ..!

ಮೆಜೆಸ್ಟಿಕ್‌ನಲ್ಲಿ ಜನಜಂಗುಳಿ, ಇಲ್ಲೆಲ್ಲಾ ಬಿಕೋ! ನಮ್ಮ ಮೆಟ್ರೋದ 20ಕ್ಕೂ ಹೆಚ್ಚು ಸ್ಟೇಷನ್‌ಗಳಲ್ಲಿ ಪ್ರಯಾಣಿಕರೇ ಇಲ್ಲ! ಅಸಲಿ ಕಾರಣವೇನು?

ಕೂಲ್.. ಕೂಲ್.. ಬೆಂಗಳೂರಿಗೆ ಏನಾಯ್ತು..? ಸೆಪ್ಟೆಂಬರ್‌ನಲ್ಲೇ ಏಪ್ರಿಲ್‌ ತಿಂಗಳ ಬಿಸಿಲು; 32 ಡಿಗ್ರಿ ದಾಟಿದ ತಾಪಮಾನ, ಸಿಲಿಕಾನ್‌ ಸಿಟಿ ಜನತೆ ಹೈರಾಣ..!

ಸೆ.20 ರಿಂದ 108 ಸೇವೆ ಬಂದ್: ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್; 3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!