ಮೈಸೂರು: ಯುವ ದಸರಾ, ರೈತ ದಸರಾ, ಮಕ್ಕಳ ದಸರಾ, ಕ್ರೀಡಾ ದಸರಾ ಹೀಗೆ ಮೈಸೂರು ದಸರಾವನ್ನ ಹತ್ತು ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಪೈಕಿ ದಸರಾ ಚಲನಚಿತ್ರೋತ್ಸವ ಕೂಡ ಪ್ರಮುಖವಾದ್ದು. ಆದರೆ, ಈ ಬಾರಿಯ ಮೈಸೂರು ದಸರಾ 2026ರ ಮಹೋತ್ಸವದಲ್ಲಿ ದಸರಾ ಚಲನಚಿತ್ರೋತ್ಸವವನ್ನ ರಾಜ್ಯ ಸರ್ಕಾರ ರದ್ದುಗೊಳಿಸಿದ್ದು, ಸಿನಿಪ್ರೇಮಿಗಳು ಮತ್ತು ಸ್ಯಾಂಡಲ್‌ವುಡ್ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ದಸರಾ ಚಲನಚಿತ್ರೋತ್ಸವ ರದ್ದಾಗಲು ಕಾರಣವೇನು?
ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಪ್ರಕಾರ, ಕಳೆದ ಐದು ವರ್ಷಗಳ ದತ್ತಾಂಶವನ್ನು ಪರಿಶೀಲಿಸಿದಾಗ ಚಿತ್ರೋತ್ಸವಕ್ಕೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ, ಪ್ರತಿ ವರ್ಷ ಚಲನಚಿತ್ರೋತ್ಸವ ಆಯೋಜಿಸಲು ಸುಮಾರು ₹40 ರಿಂದ ₹45 ಲಕ್ಷದವರೆಗೆ ಖರ್ಚು ಮಾಡಲಾಗುತ್ತಿತ್ತು. ಆದರೆ, ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಕೆಲವು ಸಿನಿಮಾಗಳನ್ನು ವೀಕ್ಷಿಸಲು ಕೇವಲ 3 ರಿಂದ 5 ಜನ ಮಾತ್ರ ಬರುತ್ತಿದ್ದರು ಎನ್ನಲಾಗಿದೆ.
ಮುಂದುವರೆದು, ಸರ್ಕಾರದ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮತ್ತು ನಿರ್ದೇಶಕ ಮಂಸೋರೆ, ಮೈಸೂರು ಕನ್ನಡ ಚಿತ್ರೋದ್ಯಮದ ತವರು ಮನೆ. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ನಗರದಲ್ಲಿ ಚಿತ್ರೋತ್ಸವ ರದ್ದು ಮಾಡಿರುವುದು ಸ್ಯಾಂಡಲ್‌ವುಡ್‌ಗೆ ಮಾಡಿದ ಅಪಮಾನ ಎಂದು ಬೇಸರ ಹೊರಹಾಕಿದ್ದಾರೆ. ಜೊತೆಗೆ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸರ್ಕಾರದ ಈ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ, ಚಲನಚಿತ್ರ ರಂಗದ ಹಿರಿಯರೊಂದಿಗೆ ಸಮಾಲೋಚನೆ ನಡೆಸದೇ ಈ ಪ್ರತಿಷ್ಠಿತ ಕಾರ್ಯಕ್ರಮ ರದ್ದುಗೊಳಿಸಿರುವುದು ಕರ್ನಾಟಕದ ಚಲನಚಿತ್ರ ಪರಂಪರೆಯ ಬಗ್ಗೆ ಸರ್ಕಾರಕ್ಕಿರುವ ಉದಾಸೀನತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ, ಈ ಬಾರಿ ದಸರಾದಲ್ಲಿ ಹೊಸದಾಗಿ ಸೇರಿಸಲಾಗಿರುವ 'ಕಂಬಳ' ಉತ್ಸವಕ್ಕೆ ಸುಮಾರು 7 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಸರ್ಕಾರ, ಚಿತ್ರೋತ್ಸವದ ಬಜೆಟ್ ಅನ್ನು ಅದಕ್ಕೆ ಸರಿದೂಗಿಸಲು ಕಡಿತಗೊಳಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಮತ್ತೊಂದೆಡೆ, ದಸರಾ ಸಂಭ್ರಮದ ಜಂಬೂ ಸವಾರಿ ವೇಳೆಯಲ್ಲಿ, ಚಂದನವನದ ರಾಕಿಂಗ್ ಸ್ಟಾರ್ ಯಶ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ನಟ ಕಿಚ್ಚ ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್, ಹಿರಿಯ ನಟಿ ಉಮಾಶ್ರೀ, ರಚಿತಾ ರಾಮ್, ರುಕ್ಕಿಣಿ ವಸಂತ್ ಮತ್ತು ಸಪ್ತಮಿ ಗೌಡ ಸೇರಿದಂತೆ ಹಲವು ಕನ್ನಡ ಜನಪ್ರಿಯ ನಟಿ-ನಟರನ್ನು ಅಂಬಾವಿಲಾಸ ಅರಮನೆಯಿಂದ ಕೆ.ಆರ್. ವೃತ್ತದವರೆಗೆ ತೆರೆದ ಅಂಬಾರಿ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಜಂಬೂ ಸವಾರಿಯ ಮೆರವಣಿಗೆಯ ವಿಶೇಷ ಮೆರುಗು ನೀಡಲು ದಸರಾ ಸಮಿತಿ ಮುಂದಾಗಿದೆ ಎನ್ನಲಾಗಿದೆ.