ಬಳ್ಳಾರಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿ ಆತಂಕ ಹುಟ್ಟಿಸಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಎದುರಲ್ಲೇ ಈ ಹೈಡ್ರಾಮಾ ನಡೆದಿದ್ದು, ಪೊಲೀಸರೇ ಆಘಾತಕ್ಕೊಳಗಾಗಿದ್ದರು.
ಪತ್ನಿಯೊಂದಿಗೆ ಜಗಳದ ಬೆನ್ನಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿದ್ದ ವ್ಯಕ್ತಿಯನ್ನು ಬಳಿಕ ಪೊಲೀಸರು ಸಮಾಧಾನ ಪಡಿಸಿ ಕೆಳಗಿಳಿಸಿದ್ದಾರೆ.
ಈ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಪತ್ನಿ ಕಾಟ ಆರೋಪ
ಮೂಲಗಳ ಪ್ರಕಾರ ಮುಂಡರಗಿ ಪ್ರದೇಶದ ನಿವಾಸಿ ಇಸ್ಮಾಯಿಲ್ ಎಂಬಾತ ಪತ್ನಿಯೊಂದಿಗೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ಬಂದಿದ್ದ ಎನ್ನಲಾಗಿದೆ.
ಈ ವೇಳೆ ಪತ್ನಿಯೊಂದಿಗೆ ಇಸ್ಮಾ.ಯಿಲ್ ಜಗಳ ಮಾಡಿಕೊಂಡಿದ್ದು, ಪತ್ನಿಯೊಂದಿಗೆ ಉಂಟಾದ ವಿವಾದದಿಂದ ಬೇಸರಗೊಂಡ ಇಸ್ಮಾಯಿಲ್ ಠಾಣೆ ಎದುರಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿ ಆತಂಕ ಸೃಷ್ಟಿಸಿದ್ದ.
ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ಇಸ್ಮಾಯಿಲ್ ಏಕಾಏಕಿ ಠಾಣೆಯಿಂದ ಓಡಿ ಹೋಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿದ್ದಾನೆ. ಇದರಿಂದ ಪೊಲೀಸರು ಹಾಗೂ ಸ್ಥಳೀಯರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ಬಳಿಕ ಪೊಲೀಸರು ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಮನವೊಲಿಸಲು ಹರಸಾಹಸಪಟ್ಟಿದ್ದಾರೆ.