ಕಲಬುರಗಿ: ಸಂಬಂಧದಲ್ಲಿ ತಾಯಿ-ಮಗನಾಗಬೇಕಿದ್ದ ಜೋಡಿ ಪರಸ್ಪರ ಪ್ರೀತಿಸಿ ಅಕ್ರಮ ಸಂಬಂಧ ಬಟಾ ಬಯಲಾಗುತ್ತಲೇ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾದ ದಾರುಣ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ.
ಈ ಬಗ್ಗೆ ವಾಹಿನಿಯೊಂದು ವರದಿ ಮಾಡಿದ್ದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಬೆಟ್ಟದಲ್ಲಿ ಚಿಕ್ಕಮ್ಮ ಮತ್ತು ಅಕ್ಕನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ವಿವಾಹಿತೆಯಾಗಿದ್ದ ಮಹಿಳೆ, ಅವಿವಾಹಿತ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರ ಬಯಲಾಗುತ್ತಲೇ ಇಬ್ಬರು ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಬೆಟ್ಟ ಪ್ರದೇಶದಲ್ಲಿ ದಟ್ಟವಾದ ಗಿಡಗಂಟಿಗಳ ನಡುವೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಆತ್ಮಹತ್ಯೆ ಶಂಕೆ
ಇಬ್ಬರೂ ಒಂದೇ ಮರಕ್ಕೆ, ಒಂದೇ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಘಟನೆ ನಡೆದು ನಾಲ್ಕು ದಿನಗಳೇ ಕಳೆದು ಹೋಗಿವೆ. ಕುರಿ ಕಾಯುವ ಹುಡುಗರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ಬಂದು ಪರಿಶೀಲಿಸುವ ಹೊತ್ತಿಗೆ ಶವ ಕೊಳೆತು ದುರ್ವಾಸನೆ ಬೀರಲು ಆರಂಭಿಸಿದ್ವು. ಶವದ ಫೋಟೋಗಳನ್ನು ಕಳಿಸಿ ವಿಚಾರಿಸಿದಾಗ, ಮೃತರನ್ನು ಯಾದಗಿರಿ ಜಿಲ್ಲೆಯ ಬಾಚವಾರ ಗ್ರಾಮದ 23 ವರ್ಷದ ಬಸವರಾಜ್ ಹಾಗೂ ಚಿತ್ತಾಪುರ ಪಟ್ಟಣದ ಬಸವನಗರ ನಿವಾಸಿ 32 ವರ್ಷದ ಶರಣಮ್ಮ ಭೀಮನಹಳ್ಳಿ ಎಂದು ಗುರುತಿಸಲಾಗಿದೆ.
ಆಗಿದ್ದೇನು?
ಪೊಲೀಸ್ ಮೂಲಗಳ ಪ್ರಕಾರ ಬಸವರಾಜ್ ಮತ್ತು ಶರಣಮ್ಮ ಭೀಮನಹಳ್ಳಿ ಇಬ್ಬರೂ ಸಂಬಂಧಿಕರು. ಈ ಬಸವರಾಜ್ ಅವಿವಾಹಿತನಾದರೆ, ಶರಣಮ್ಮಳಿಗೆ 12 ವರ್ಷಗಳ ಹಿಂದೆಯೇ ಮದುವೆಯಾಗಿದೆ. ಅಲ್ಲದೆ ಆಕೆಗೆ ಹೆಣ್ಣು ಮಗು ಕೂಡ ಇದೆ. ಸ್ಥಳೀಯರು ಆರೋಪಿಸಿರುವಂತೆ ಶರಣಮ್ಮ, ತನ್ನ ಸಹೋದಿರಯ ಮಗ ಬಸವರಾಜನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಈ ವಿಚಾರ ಸ್ವತಃ ಆಕೆಯ ಗಂಡನಿಗೂ ಗೊತ್ತಾದ ನಂತರ ಬೈದು ಬುದ್ಧಿ ಹೇಳಿದ್ದ. ಸಮಾಜ ಮತ್ತು ಸ್ವಾಭಿಮಾನಕ್ಕೆ ಹೆದರಿ, ಮತ್ತು ಮಗಳ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕೆ ಆತ ಬೈದು ಬುದ್ದಿವಾದ ಹೇಳಿದ್ದ. ಇದಾಗಿ ಕಳೆದ ನಾಲ್ಕು ದಿನಗಳ ಹಿಂದೆ, ಮನೆ ಬಿಟ್ಟು ಬಸವರಾಜನ ಜೊತೆ ಬೈಕ್ ಹತ್ತಿ ಹೊರಟವಳು, ಸದ್ಯ ಆತನೊಂದಿಗೆ ಹೆಣವಾಗಿ ಪತ್ತೆಯಾಗಿದ್ದಾಳೆ.
ವಿಷಯ ಬಯಲಾಗಿದ್ದೇ ಆತ್ಮಹತ್ಯೆಗೆ ಕಾರಣವಾಯಿತೇ?
ಇನ್ನು ಬಸವರಾಜು ಮತ್ತು ಶರಣಮ್ಮ ತಮ್ಮ ಅಕ್ರಮ ಸಂಬಂಧ ಬಯಲಾಗಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದಾಗ್ಯೂ ಇವರು ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಒಂದೂವರೆ ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಮಾತ್ರ ಹೋಗಬಹುದಾಗಿದೆ.
ಹೀಗಾಗಿ ಈ ಸಾವುಗಳ ಕುರಿತು ಸಾಕಷ್ಟು ಅನುಮಾನಗಳು ಕೂಡ ಹುಟ್ಟಿಕೊಂಡಿದೆ. ಚಿತ್ತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ಸಹಾಯವಾಣಿ
ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ, ಅಥವಾ ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿರುವ ಸ್ನೇಹಿತರು/ಆಪ್ತರ ಬಗ್ಗೆ ಚಿಂತಿತರಾಗಿದ್ದರೆ, ಭಾವನಾತ್ಮಕ ಬೆಂಬಲಕ್ಕಾಗಿ ಸಹಾಯ ಪಡೆಯಬಹುದು. ನಿಮ್ಮ ಮಾತುಗಳನ್ನು ಕೇಳಲು ಹಾಗೂ ನೆರವು ನೀಡಲು ಸಹಾಯವಾಣಿ ಲಭ್ಯವಿದೆ.
ಟೆಲಿ-ಮಾನಸ್: 14416 — 24x7, ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ.