ಬೆಂಗಳೂರು: ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡಲಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಕಾಳೇನ ಅಗ್ರಹಾರದಿಂದ ಸಂಪರ್ಕ ಕಲ್ಪಿಸುವ ಈ ಬಹುನಿರೀಕ್ಷಿತ ಮಾರ್ಗದ ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ಬಂದಿರುವ ಹೊತ್ತಿನಲ್ಲೇ, ನಮ್ಮ ಮೆಟ್ರೋದ ಪಿಂಕ್ ಲೈನ್ ವ್ಯಾಪ್ತಿಯ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಅದರಂತೆ, ಸ್ಥಳೀಯ ನಿವಾಸಿಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ನಿಯೋಗವೊಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಸಿ. ಜಾಫರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಈ ಕುರಿತು ಅಧಿಕೃತ ಮನವಿ ಪತ್ರ ಸಲ್ಲಿಸಿದೆ. ಆ ಕುರಿತ ವರದಿ ಇಲ್ಲಿದೆ:
ಬೇಡಿಕೆಗೆ ಕಾರಣಗಳೇನು?
ಸ್ಥಳೀಯ ಗುರುತು: ಮನವಿ ಸಲ್ಲಿಸಿರುವ ನಿಯೋಗದ ಪ್ರಕಾರ, ಈ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸ್ಮಿಲ್ಲಾ ನಗರ ಅತ್ಯಂತ ಪ್ರಮುಖ ಹಾಗೂ ದೊಡ್ಡ ಬಡಾವಣೆಯಾಗಿದೆ.
ಜನಸಂಖ್ಯೆಯ ಆಧಾರ: ಈ ಭಾಗದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಪ್ರತಿದಿನ ಸಾವಿರಾರು ಸ್ಥಳೀಯ ನಿವಾಸಿಗಳು ಸಂಚಾರಕ್ಕಾಗಿ ಇದೇ ನಿಲ್ದಾಣವನ್ನೇ ಅವಲಂಬಿಸಲಿದ್ದಾರೆ.
ಪರ್ಯಾಯ ಪ್ರಸ್ತಾವನೆ: ನಿಲ್ದಾಣಕ್ಕೆ ಸಂಪೂರ್ಣವಾಗಿ ಬಿಸ್ಮಿಲ್ಲಾ ನಗರ ಮೆಟ್ರೋ ನಿಲ್ದಾಣ ಎಂದು ಹೆಸರಿಡಬೇಕು, ಇಲ್ಲವೇ ಸ್ಥಳೀಯರ ಅನುಕೂಲಕ್ಕಾಗಿ ಬಿಸ್ಮಿಲ್ಲಾ ನಗರ - ತಾವರೆಕೆರೆ ಎಂದು ಜಂಟಿ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಏತನ್ಮಧ್ಯೆ, ಈ ಬೆಳವಣಿಗೆಗೆ ಕೇವಲ ಎರಡು ದಿನಗಳ ಮುನ್ನ, ಬಿಟಿಎಂ ಲೇಔಟ್ ಶಾಸಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ತಾವರೆಕೆರೆ ನಿಲ್ದಾಣ ಸೇರಿದಂತೆ ಒಟ್ಟು ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದರು. ಆದರೆ ಅವರು ತಾವರೆಕೆರೆ ನಿಲ್ದಾಣಕ್ಕೆ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣ ಎಂದು ಹೆಸರಿಡುವಂತೆ ಪ್ರಸ್ತಾಪಿಸಿದ್ದರು. ಜೊತೆಗೆ, ಸ್ಥಳೀಯ ಹೆಸರುಗಳನ್ನು ಬಳಸುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂಬ ಕಾರಣದಿಂದ ಜೆ.ಪಿ. ನಗರ 4ನೇ ಹಂತದ ನಿಲ್ದಾಣವನ್ನು ಎನ್.ಎಸ್. ಪಾಳ್ಯ ಎಂದೂ ಮತ್ತು ಡೈರಿ ಸರ್ಕಲ್ ನಿಲ್ದಾಣವನ್ನು ಲಕ್ಕಸಂದ್ರ ಎಂದೂ ಮರುನಾಮಕರಣ ಮಾಡಲು ಕೂಡ ಕೋರಿದ್ದಾರೆ