ಚಿಕ್ಕಮಗಳೂರು: ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಕೆಲವರು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿ, ಹಿಂದೂಗಳ ಪವಿತ್ರ ಹಬ್ಬ ಗಣೇಶೋತ್ಸವಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಸಾರಥ್ಯವಹಿಸುವ ಮೂಲಕ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು.. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಪಟ್ಟಣದ ಮುಸ್ಲಿಂ ಮಹಿಳೆಯೊಬ್ಬರು ಕಳೆದ 18 ವರ್ಷಗಳಿಂದ ಗಣೇಶೋತ್ಸವ ಸಮಿತಿಯ ನೇತೃತ್ವ ವಹಿಸುವ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ.
ಎನ್.ಆರ್. ಪುರ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆಯಾಗಿರುವ ಜುಬೇದಾ ಅವರು ರಾಜೀವ್‌ನಗರ ಶ್ರೀ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಸಮಿತಿ ಪ್ರತಿವರ್ಷ ಮೂರು ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುತ್ತದೆ.
ಹೋಮ-ಹವನಗಳಲ್ಲಿ ಭಾಗಿ
ಸಮಿತಿಯ ಅಧ್ಯಕ್ಷೆಯಾಗಿ ಜುಬೇದಾ ಅವರು ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಹಬ್ಬದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ವಹಿಸುತ್ತಾರೆ. ಅಷ್ಟೇ ಅಲ್ಲದೆ, ಅವರು ಕಾರ್ತಿಕ ದೀಪೋತ್ಸವ ಸಮಿತಿಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಪಟ್ಟಣದ ಅಶ್ವತ್ಥಕಟ್ಟೆ ಬಳಿಯ ನಾಗರಬನದಲ್ಲಿ ದೀಪೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಗಣೇಶೋತ್ಸವದ ಸಂದರ್ಭದಲ್ಲಿ ಪೆಂಡಾಲ್ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಮಹಿಳೆಯರನ್ನು ಪ್ರೋತ್ಸಾಹಿಸುವ ಜುಬೇದಾ, ಗೋಮಯದಿಂದ ಸ್ಥಳವನ್ನು ಸ್ವಚ್ಛಗೊಳಿಸಿ ಬಣ್ಣಬಣ್ಣದ ರಂಗೋಲಿ ಹಾಕುವಂತೆ ನೋಡಿಕೊಳ್ಳುತ್ತಾರೆ. ಸ್ಥಳೀಯ ಯುವಕರು ಗಣೇಶೋತ್ಸವದ ಪೆಂಡಾಲ್ ನಿರ್ಮಾಣಕ್ಕೆ ನೆರವಾಗುತ್ತಾರೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೂ ಎಲ್ಲ ಪೂಜೆ-ಪುನಸ್ಕಾರಗಳು ಸಂಪ್ರದಾಯದಂತೆ ನಡೆಯುವಂತೆ ಖುದ್ದು ಜವಾಬ್ದಾರಿ ವಹಿಸುತ್ತಾರೆ.
ಪಟ್ಟಣದ ಇತರ ಗಣೇಶೋತ್ಸವ ಪೆಂಡಾಲ್‌ಗಳಿಗೂ ಭೇಟಿ ನೀಡುವ ಅವರು, ಅಲ್ಲಿ ಪೂಜೆ ಸಲ್ಲಿಸುವುದರ ಜೊತೆಗೆ ಅಗತ್ಯವಿರುವ ಸಹಾಯವನ್ನೂ ಮಾಡುತ್ತಾರೆ. ವಿವಿಧ ಹಬ್ಬಗಳ ಸಂದರ್ಭದಲ್ಲಿ ಹಿಂದೂ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಪ್ರಸಾದ ಸ್ವೀಕರಿಸುವುದು ಅವರ ಹಲವು ವರ್ಷಗಳ ಸಂಪ್ರದಾಯವಾಗಿದೆ.
‘ಧರ್ಮಕ್ಕಿಂತ ಮಾನವೀಯತೆ ಮುಖ್ಯ’
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾತನಾಡಿರುವ ಜುಬೇದಾ ಅವರು, “ನಾನು ಮೊದಲು ನನ್ನನ್ನು ಭಾರತೀಯಳು ಎಂದು ಪರಿಗಣಿಸುತ್ತೇನೆ. ಧರ್ಮ ಮತ್ತು ಜಾತಿ ನಂತರ ಬರುತ್ತವೆ. ನನ್ನ ಧರ್ಮಕ್ಕೆ ನಿಷ್ಠೆಯಾಗಿಯೇ ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ನನಗೆ ಧರ್ಮಕ್ಕಿಂತ ಮಾನವೀಯತೆ ಮುಖ್ಯ,” ಎಂದು ಹೇಳಿದ್ದಾರೆ.
“ನಾವು ಹಿಂದೂಗಳ ಹಬ್ಬಗಳಲ್ಲಿ ಭಾಗವಹಿಸಿದರೆ, ಅವರು ನಮ್ಮ ಮುಸ್ಲಿಂ ಹಬ್ಬಗಳಲ್ಲೂ ನಮ್ಮೊಂದಿಗೆ ಸೇರುತ್ತಾರೆ. ಇಲ್ಲಿ ಎಲ್ಲ ಧರ್ಮಗಳ ಜನರು ಪರಸ್ಪರ ಸೌಹಾರ್ದದಿಂದ ಬದುಕುತ್ತಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.
ಬಡ ಮಹಿಳೆಯರಿಗೆ ನೆರವು
ಹೌಸಿಂಗ್ ಬೋರ್ಡ್ ಪ್ರದೇಶದ ನಿವಾಸಿ ಶಾಂತಮ್ಮ ಅವರು ಜುಬೇದಾ ಅವರನ್ನು ಸಂಕಷ್ಟದಲ್ಲಿರುವ ಮಹಿಳೆಯರಿಗೆ ‘ಧರ್ಮ ದೇವತೆ’ ಎಂದು ಬಣ್ಣಿಸಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಬಡ ಹಿಂದೂ ಮಹಿಳೆಯರಿಗೆ ಜುಬೇದಾ ಆರ್ಥಿಕ ನೆರವು ನೀಡುತ್ತಾರೆ. ಅಲ್ಲದೆ, ಬಡ ಹಾಗೂ ಹಿಂದುಳಿದ ಮಹಿಳೆಯರು ಸ್ವಾವಲಂಬಿಗಳಾಗಲು ಸಹಾಯವಾಗುವಂತೆ ಹೊಲಿಗೆ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದಾರೆ ಎಂದು ಶಾಂತಮ್ಮ ಹೇಳಿದ್ದಾರೆ.
‘ದ್ವೇಷ ಬಿತ್ತುವವರು ಜುಬೇದಾ ಅವರಿಂದ ಕಲಿಯಬೇಕು’
ನೇತಾಜಿ ಯುವಕ ಸಂಘ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಸ್.ಇ. ಪರಮೇಶ್ವರ ಮಾತನಾಡಿ, ಜುಬೇದಾ ಅವರು ಎಲ್ಲ ಸಮುದಾಯಗಳ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರ ಸಂತೋಷದಲ್ಲೂ, ಕಷ್ಟದಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಾರೆ ಎಂದು ಹೇಳಿದ್ದಾರೆ.
“ದೀಪಾವಳಿ ಸಂದರ್ಭದಲ್ಲಿ ಜುಬೇದಾ ತಮ್ಮ ಮನೆಯನ್ನು ದೀಪಗಳಿಂದ ಅಲಂಕರಿಸುತ್ತಾರೆ. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷದ ಬೀಜ ಬಿತ್ತಲು ಪ್ರಯತ್ನಿಸುವವರು ಜುಬೇದಾ ಅವರ ಜೀವನದಿಂದ ಪಾಠ ಕಲಿಯಬೇಕು,” ಎಂದು ಅವರು ಹೇಳಿದ್ದಾರೆ.
ಧರ್ಮದ ಗಡಿಗಳನ್ನು ಮೀರಿ 18 ವರ್ಷಗಳಿಂದ ಗಣೇಶೋತ್ಸವದ ನೇತೃತ್ವ ವಹಿಸುತ್ತಿರುವ ಜುಬೇದಾ ಅವರ ನಡೆ, ಸಹಬಾಳ್ವೆ, ಪರಸ್ಪರ ಗೌರವ ಮತ್ತು ಮಾನವೀಯತೆಯೇ ಸಮಾಜದ ನಿಜವಾದ ಶಕ್ತಿ ಎಂಬ ಸಂದೇಶವನ್ನು ಸಾರುತ್ತಿದೆ.