ಡಿ ಕೆ ಶಿವಕುಮಾರ್, ಡೊನಾಲ್ಡ್ ಟ್ರಂಪ್(ಸಂಗ್ರಹ ಚಿತ್ರ) 
ರಾಜ್ಯ

'ಟ್ರಂಪ್ ಕೂಡ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ, ಅದು ನಮ್ಮ ಕಾಂಗ್ರೆಸ್ ಪಕ್ಷದ ಶಕ್ತಿ': ಡಿ.ಕೆ ಶಿವಕುಮಾರ್

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್, ಕಾಂಗ್ರೆಸ್‌ನ ಕಲ್ಯಾಣ ಮಾದರಿಯನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳು ಅಳವಡಿಸಿಕೊಂಡಿವೆ. ಇದೀಗ ಅಮೆರಿಕ ಕೂಡ ಅದನ್ನು ನಕಲು ಮಾಡುತ್ತಿದೆ ಎಂದು ಹೇಳಿದರು.

ಹಲವು ರಾಜ್ಯಗಳ ಬಳಿಕ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಾಂಗ್ರೆಸ್‌ನ ಕಲ್ಯಾಣ ಮಾದರಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಈ ವರ್ಷದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಕಾಂಗ್ರೆಸ್‌ನ ಮೇಲಿನ ತನ್ನ ನಿಯಂತ್ರಣವನ್ನು ಉಳಿಸಿಕೊಂಡರೆ, ಪ್ರತಿ ಅಮೆರಿಕನ್ ವಯಸ್ಕನಿಗೂ 5,000 ಡಾಲರ್ ನೀಡುವುದಾಗಿ ಟ್ರಂಪ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.

ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್, ಕಾಂಗ್ರೆಸ್‌ನ ಕಲ್ಯಾಣ ಮಾದರಿಯನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳು ಅಳವಡಿಸಿಕೊಂಡಿವೆ. ಇದೀಗ ಅಮೆರಿಕ ಕೂಡ ಅದನ್ನು ನಕಲು ಮಾಡುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರ, ಮಧ್ಯಪ್ರದೇಶ ನಮ್ಮನ್ನು ನಕಲು ಮಾಡಿದೆ. ರಾಜಸ್ಥಾನ, ಬಿಹಾರ ನಕಲು ಮಾಡಿದೆ. ಇದೀಗ ಟ್ರಂಪ್ ನಮ್ಮನ್ನು ನಕಲು ಮಾಡುತ್ತಿದ್ದಾರೆ! ಟ್ರಂಪ್!” ಎಂದು ಅವರು ಹೇಳಿದರು.

ನೀವು ಅದನ್ನು ನೋಡಿದ್ದೀರಾ? 5,000 ಡಾಲರ್. ಎಷ್ಟು? 5,000 ಡಾಲರ್! ಈಗ ನಮ್ಮ ಮಾದರಿಯನ್ನು ಯಾರು ನಕಲು ಮಾಡುತ್ತಿದ್ದಾರೆ ನೋಡಿ. ಮತ ಹಾಕಿದರೆ ಇಷ್ಟು ಡಾಲರ್ ನೀಡುವುದಾಗಿ ಟ್ರಂಪ್ ಹೇಳುತ್ತಿದ್ದಾರೆ. ಇದರರ್ಥ ನಮ್ಮ ಚಿಂತನೆ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಪರಿಚಯವಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.

‘ಟ್ರಂಪ್ ಡಿವಿಡೆಂಡ್’

ಸೆಪ್ಟೆಂಬರ್ 9ರಂದು ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಅಮೆರಿಕನ್ನರಿಗೆ 5,000 ಡಾಲರ್ ಹಣ ಪಾವತಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು.

ರಿಪಬ್ಲಿಕನ್ನರು ಗೆದ್ದರೆ, ನೀವು ನಮ್ಮೊಂದಿಗೆ ಗೆಲ್ಲುತ್ತೀರಿ ಮತ್ತು 5,000 ಡಾಲರ್ ಪಡೆಯುತ್ತೀರಿ ಎಂದು ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಮಧ್ಯಂತರ ಚುನಾವಣಾ ಸಮಾವೇಶದಲ್ಲಿ ಟ್ರಂಪ್ ಹೇಳಿದ್ದರು. ಇದನ್ನು ‘ಟ್ರಂಪ್ ಡಿವಿಡೆಂಡ್’ ಎಂದು ಕರೆಯಲಾಗುವುದು ಎಂದಿದ್ದರು.

ತಾವು ನೀಡಿರುವ ಭರವಸೆಯನ್ನು ಈಡೇರಿಸಲು ಅಮೆರಿಕಕ್ಕೆ ಸಾಮರ್ಥ್ಯವಿದೆ, ರಿಪಬ್ಲಿಕನ್ನರು ಗೆದ್ದರೆ ಇದು ಸುಲಭ. ದೇಶದ ಎಲ್ಲ ವಯಸ್ಕರಿಗೆ 5,000 ಡಾಲರ್ ನೀಡಬಹುದು. ನಾವು ಅದನ್ನು ಸುಲಭವಾಗಿ ನಿಭಾಯಿಸಬಹುದು. ನಾವು ಸಾಕಷ್ಟು ಹಣವನ್ನು ಸಂಗ್ರಹಿಸುತ್ತಿದ್ದೇವೆ ಎಂದು ಕಾಂಗ್ರೆಸ್‌ನ ಅನುಮೋದನೆ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು. ದೇಶಕ್ಕೆ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳು ಹರಿದುಬರುತ್ತಿವೆ ಎಂದೂ ಅವರು ಹೇಳಿದರು.

ಆದರೆ ಇಂತಹ ಯಾವುದೇ ಹಣ ಪಾವತಿಗೆ ಕಾಂಗ್ರೆಸ್‌ನ ಅನುಮೋದನೆ ಅಗತ್ಯ ಎಂದು ಅಮೆರಿಕದ ಹೌಸ್ ಸ್ಪೀಕರ್ ಹಾಗೂ ಲೂಸಿಯಾನಾ ರಾಜ್ಯದ ರಿಪಬ್ಲಿಕನ್ ನಾಯಕ ಮೈಕ್ ಜಾನ್ಸನ್ ಹೇಳಿದ್ದಾರೆ. ಇದರಲ್ಲಿರುವ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಬೇಕಿದೆ. ಎಲ್ಲವನ್ನೂ ನಾವು ನಿರ್ಧರಿಸಬೇಕಾಗಿದೆ ಎಂದು ಜಾನ್ಸನ್ CNNನ ‘State of the Union’ ಕಾರ್ಯಕ್ರಮದಲ್ಲಿ ಹೇಳಿದರು.

ಜನರು ಸರ್ಕಾರಕ್ಕೆ ಹೆದರಿದಾಗ ಪ್ರಜಾಪ್ರಭುತ್ವ ಸರ್ವಾಧಿಕಾರವಾಗಿ ಬದಲಾಗುತ್ತದೆ

ಜನರಿಗೆ ಸರ್ಕಾರ ಬಗ್ಗೆ ಹೆದರಿಕೆ ಹುಟ್ಟಲು ಆರಂಭಿಸಿದಾಗ ಪ್ರಜಾಪ್ರಭುತ್ವವು ಸರ್ವಾಧಿಕಾರವಾಗಿ ಬದಲಾಗುತ್ತದೆ. ಎಲ್ಲರಿಗೂ ಸಮಾನ ಗೌರವ ಮತ್ತು ಅವಕಾಶವನ್ನು ಖಚಿತಪಡಿಸುವ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ಕೂಡ ಹೇಳಿದರು.

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ ಮತ್ತು ಮತದಾನಕ್ಕೆ ಸೀಮಿತವಾಗಿಲ್ಲ. ಅದು ಜನರ ಹಕ್ಕುಗಳು, ಗೌರವ ಮತ್ತು ಆಡಳಿತದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಒಳಗೊಂಡಿದೆ ಎಂದು ಹೇಳಿದರು.

ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರವಾಗುತ್ತದೆ. ಸರ್ಕಾರ ತನ್ನ ಜನರನ್ನು ಗೌರವಿಸಿದಾಗ ಅದು ಪ್ರಜಾಪ್ರಭುತ್ವವಾಗುತ್ತದೆ ಎಂದು ಹೇಳಿದರು.

ಭಾರತವು ದೀರ್ಘಕಾಲದ ಪ್ರಜಾಸತ್ತಾತ್ಮಕ ಪರಂಪರೆಯನ್ನು ಹೊಂದಿದೆ. 12ನೇ ಶತಮಾನದ ಅನುಭವ ಮಂಟಪವನ್ನು ಸ್ಮರಿಸಿದ ಅವರು, ಅಲ್ಲಿ ಪ್ರತಿಪಾದಿಸಲಾಗಿದ್ದ ಸಮಾನತೆ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಉಲ್ಲೇಖಿಸಿದರು.

ಮುಖ್ಯಮಂತ್ರಿಯಾದ ಮೂರು ದಿನಗಳಲ್ಲೇ ತಾವು ಐತಿಹಾಸಿಕ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿದ್ದಾಗಿ ಅವರು ಹೇಳಿದರು.

ಪ್ರಜಾಪ್ರಭುತ್ವವೆಂದರೆ ಕೇವಲ ಮತ ಚಲಾಯಿಸುವ ಹಕ್ಕಲ್ಲ; ಅದು ಗೌರವಯುತವಾಗಿ ಬದುಕುವ ಹಕ್ಕು ಕೂಡ ಆಗಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!

ದ್ವಿಪಕ್ಷೀಯ ಮಾತುಕತೆ ವೇಳೆ ಚೀನಾ ಅಧ್ಯಕ್ಷ ಜಿನ್ಪಿಂಗ್ ಗೆ ಮೋದಿ ಹೇಳಿದ್ದೇನು? MEA ಹೇಳಿದ್ದಿಷ್ಟು...

ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ

ಡ್ರಾಮಾ ಬಿಡಿ, ಎರಡು ವಾರದಲ್ಲಿ 2 ಕೋಟಿ ರೂ. ಠೇವಣಿ ಇಡಿ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ

'ಯಾರನ್ನೂ ಸ್ಟಾಪ್ ಮಾಡೋಕೆ ಆಗಲ್ಲ, ಯಾವ ದಾಖಲೆ ಬೇಕಾದ್ರೂ ಬಿಡುಗಡೆ ಮಾಡಿಕೊಳ್ಳಲಿ: ಸಿಎಂ ಶಿವಕುಮಾರ್; Video