ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿಯಾಗಿ ಜೈಲು ಪಾಲಾಗಿರುವ ಪ್ರದೂಷ್ ರಾವ್, ಮಾಫಿ ಸಾಕ್ಷಿಯಾಗುವ ಮೂಲಕ ದರ್ಶನ್ ಅಂಡ್ ಗ್ಯಾಂಗ್ಗೆ ಮುಗ್ಗಲು ಮುಳುಗಿದ್ದಾನೆ. ಈ ನಡುವೆಯೇ, ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ, ಕಳ್ಳಾಟದ ಮೂಲಕ ಪತ್ನಿಯೊಂದಿಗೆ ಮಾತನಾಡಲು ಪ್ರದೂಷ್ ಬಳಸಿದ ಚಾಲಾಕಿ ತನ ಈಗ ಬಯಲಾಗಿದೆ. ಇದರಿಂದ ಪ್ರದೂಷ್ ಮೇಲೆ ರೇಣುಕಸ್ವಾಮಿ ಕೊಲೆ ಪ್ರಕರಣದ ಜೊತೆಗೆ ಮತ್ತೊಂದು ದೂರು ಕೂಡ ದಾಖಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಪ್ರದೂಷ್ ಕಳ್ಳಾಟ ಬಯಲು
ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿಯಾಗಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರದೂಷ್ ರಾವ್, ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತನ್ನ ಪತ್ನಿಯೊಂದಿಗೆ ಮಾತನಾಡಲು ಜೈಲಿನಿಂದ ಬಿಡುಗಡೆಯಾದ ಬೇರೊಬ್ಬ ಕೈದಿಯ ಸವಲತ್ತನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಹೀಗೆ, ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಕೈದಿಯೊಬ್ಬನ ಹೆಸರನ್ನು ಬಳಸಿಕೊಂಡು ಪ್ರದೂಷ್ ತನ್ನ ಪತ್ನಿಯ ಮೊಬೈಲ್ ಸಂಖ್ಯೆಯನ್ನು ಜೈಲಿನ ಇನ್‌ಮೇಟ್ ಕಾಲಿಂಗ್ ವ್ಯವಸ್ಥೆಯಲ್ಲಿ 'ಸಂತೋಷ್' ಎಂಬ ಹೆಸರಿನಲ್ಲಿ ನೋಂದಾಯಿಸಿದ್ದನು.
ಈ ಕಳ್ಳಾಟದ ಮೂಲಕ ಜೈಲಿನಲ್ಲಿದ್ದುಕೊಂಡೇ ಪ್ರದೂಷ್ ತನ್ನ ಪತ್ನಿಯೊಂದಿಗೆ ನಿಯಮಬಾಹಿರವಾಗಿ ಕರೆ ಮಾಡಿ ದೀರ್ಘಕಾಲ ಮಾತನಾಡುತ್ತಿದ್ದನು ಎನ್ನಲಾಗಿದೆ. ಜೊತೆಗೆ, ಈ ಇಡೀ ಕೃತ್ಯಕ್ಕೆ ಜೈಲಿನ ಸಿಬ್ಬಂದಿಯಾದ ಮೌನೇಶ್ ಎಂಬುವವರು ಪ್ರದೂಷ್‌ಗೆ ಸಂಪೂರ್ಣ ಸಹಕಾರ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಮುಂದುವರೆದು, ಈ ಇಂಟರ್‌ಕಾಮ್ ದುರ್ಬಳಕೆ ಪ್ರಕರಣ ಹೊರಬರುತ್ತಿದ್ದಂತೆಯೇ ಜೈಲು ಅಧಿಕಾರಿಗಳು ತನಿಖೆ ನಡೆಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಲ್ಲೂ, ನಟ ದರ್ಶನ್ ತಳುಕು ಹಾಕಿಕೊಂಡಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಮಾಫಿ ಸಾಕ್ಷಿಯಾಗಲು ಪ್ರದೂಷ್ ಮುಂದಾಗಿದ್ದನು. ಆದರೆ ಜೈಲಿನಲ್ಲೇ ಈ ರೀತಿ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿರುವುದರಿಂದ ಆತನಿಗೆ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.