ಬೆಂಗಳೂರು: ಮದ್ಯಪಾನ ಮಾಡಿ ನ್ಯಾಯಾಲಯದ ಕೊಠಡಿಯಲ್ಲೇ ನ್ಯಾಯಾಧೀಶರ ವಿರುದ್ಧ ಕೂಗಾಡಿ, ರಂಪಾಟ ಮಾಡಿದ್ದ ವಕೀಲನಿಗೆ ಕರ್ನಾಟಕ ಹೈಕೋರ್ಟ್ ತಕ್ಕ ಶಾಸ್ತಿ ಮಾಡಿದೆ.
ಹೌದು, ನ್ಯಾಯಾಲಯ ನಿಂದನೆ ಆರೋಪದಡಿ 51 ವರ್ಷದ ವಕೀಲ ಪಂಕಜ್ ಕೌಶಿಕ್ ಎಂಬುವವರಿಗೆ ಹೈಕೋರ್ಟ್ ಒಂದು ದಿನದ ಸಾದಾ ಜೈಲು ಶಿಕ್ಷೆ ಹಾಗೂ ರೂ. 2,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವೆಂಕಟೇಶ್ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಸೆಕ್ಷನ್ 12(1) ಅಡಿಯಲ್ಲಿ ಕೌಶಿಕ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.
ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು 2022ರಲ್ಲಿ ಸ್ವಯಂಪ್ರೇರಿತವಾಗಿ ಆರಂಭಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಈ ಶಿಕ್ಷೆ ವಿಧಿಸಲಾಗಿದೆ.
ಆರೋಪಿಯ ವರ್ತನೆಯನ್ನು ನಾವು ಗಮನಿಸಿದ್ದೇವೆ. ಆತ ಮಾಡಿದ ಆರಂಭಿಕ ನ್ಯಾಯಾಂಗ ನಿಂದನೆ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸುವ ಬದಲು, ತನ್ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಲ್ಲದೆ, ಒಟ್ಟಾರೆ ನ್ಯಾಯಾಂಗ ಸಂಸ್ಥೆಯ ವಿರುದ್ಧ ಆಧಾರರಹಿತ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಪೀಠ ಹೇಳಿದೆ.
ಆತನ ವರ್ತನೆಯನ್ನು ಉದ್ದೇಶಪೂರ್ವಕ ಹಾಗೂ ಹಠಮಾರಿ ಎಂದು ಮಾತ್ರ ಪರಿಗಣಿಸಬಹುದು. ಸಾಮಾಜಿಕ, ನೈತಿಕ ಹಾಗೂ ನ್ಯಾಯಾಂಗ ನಡವಳಿಕೆಯ ನಿಯಮಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದಾನೆ. ಇಂತಹ ವರ್ತನೆಯನ್ನು ಶಿಕ್ಷಿಸದೆ ಬಿಟ್ಟರೆ, ಆರೋಪಿಯಂತಹವರು ಯಾವುದೇ ಭಯವಿಲ್ಲದೆ ಇಂತಹ ಕೃತ್ಯಗಳನ್ನು ಪುನರಾವರ್ತಿಸುವ ಸಾಧ್ಯತೆಯಿದ್ದು, ಇದು ಕಾನೂನಿನ ಆಳ್ವಿಕೆ ಮತ್ತು ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು 2022ರ ಏಪ್ರಿಲ್ 12ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದಿದ್ದರು.
ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ-2ರ ನ್ಯಾಯಾಧೀಶ ಶ್ರೀನಿವಾಸ್ ಪಾಟೀಲ್ ಅವರು ಏಪ್ರಿಲ್ 8ರಂದು ಬರೆದಿದ್ದ ಪತ್ರ ಹಾಗೂ ಆರೋಪಿಯು ಮದ್ಯಪಾನ ಮಾಡಿದ್ದನ್ನು ದೃಢಪಡಿಸುವ ಪ್ರಮಾಣಪತ್ರವನ್ನೂ ಸಲ್ಲಿಸಲಾಗಿತ್ತು.
ಆರೋಪಿ ಕೌಶಿಕ್ ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಸ್ವತಃ ತನ್ನ ಪರವಾಗಿ ವಾದಿಸುತ್ತಿದ್ದ ವ್ಯಕ್ತಿಯಾಗಿದ್ದರು. ಅವರ ಪ್ರಕರಣ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆಗೆ ಪಟ್ಟಿ ಆಗಿರದಿದ್ದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿ ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರ ವಿರುದ್ಧ ಕೂಗಾಡಿದ್ದರು. ತಮ್ಮ ಪ್ರಕರಣಕ್ಕೆ ದಿನಾಂಕ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ತಮ್ಮ ಪ್ರಕರಣವನ್ನು ಕರೆಯದಿರುವುದಕ್ಕೆ ನ್ಯಾಯಾಲಯದ ಬೆಂಚ್ ಕ್ಲರ್ಕ್ ಮೇಲೂ ಕೂಗಾಡಿದ್ದರು.
ಇದಲ್ಲದೆ, ಅವರು ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ವಿಚಾರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಗಮನಕ್ಕೆ ತರಲಾಗಿತ್ತು. ಕೌಶಿಕ್ ಅವರು ನ್ಯಾಯಾಧೀಶರ ವಿರುದ್ಧವೂ ಮಾನಹಾನಿಕರ ಹೇಳಿಕೆಗಳನ್ನೂ ನೀಡಿದ್ದರು.
2022ರ ಏಪ್ರಿಲ್ 20ರಂದು ಹಿರಿಯ ವಕೀಲರೊಬ್ಬರು ವಾದ ಮಂಡಿಸುತ್ತಿದ್ದ ವೇಳೆ ಮಧ್ಯದಲ್ಲೇ ಅಡ್ಡಿಪಡಿಸಿದ್ದ ಕೌಶಿಕ್, ಅಸಭ್ಯ ಧಾಟಿಯಲ್ಲಿ ತಮ್ಮ ವಾದವನ್ನು ನಿಲ್ಲಿಸುವಂತೆ ಸೂಚಿಸಿ, ತಮ್ಮ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಈ ವೇಳೆ ಅವರ ವರ್ತನೆ ಕಂಡು ಅನುಮಾನಗೊಂಡ ಕೋರ್ಟ್, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರು ಮದ್ಯಪಾನ ಮಾಡಿ ಕೋರ್ಟ್‌ಗೆ ಬಂದಿರುವುದು ದೃಢಪಟ್ಟಿತ್ತು.