ನಾಗಮಂಗಲ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಈ ಬಾರಿ ಕೋಮು ಸೌಹಾರ್ದದ ಗಣೇಶೋತ್ಸವ ನಡೆದಿದೆ. ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಕೋಮುಗಲಭೆ ಸಂಭವಿಸಿತ್ತು.
ಕಿಡಿಗೇಡಿಗಳು ರಸ್ತೆ ಬದಿಯಲ್ಲಿದ್ದ 20ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು, ಬೈಕ್ ಶೋರೂಂ ಮತ್ತು ಬಟ್ಟೆ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಈ ಹಿಂಸಾಚಾರದಲ್ಲಿ ಸರಿಸುಮಾರು ₹2.5 ಕೋಟಿ ಮೌಲ್ಯದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಆದರೆ ಈ ಬಾರಿ ಮುಸ್ಲಿಮರೇ ಗಣೇಶ ಮೂರ್ತಿ ಮೆರವಣಿಗೆಯ ಸಾರಥ್ಯ ವಹಿಸಿಕೊಂಡು ಸೌಹಾರ್ದತೆ ಮೆರೆದಿದ್ದಾರೆ.
ನಾಗಮಂಗಲದ ಮೈಸೂರು ರಸ್ತೆಯ ಎ.ಡಿ. ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಸ್ಥಳಕ್ಕೆ ಗುರುವಾರ ರಾತ್ರಿ ಮುಸ್ಲಿಮರು ಬಂದು ವಿಶೇಷ ಪೂಜೆ ಸಲ್ಲಿಸಿ, ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಂದು ನಡೆದ ವಿಸರ್ಜನಾ ಮೆರವಣಿಗೆಗೆ ಗಣೇಶೋತ್ಸವ ಸಮಿತಿಯೊಂದಿಗೆ ಕೈ ಜೋಡಿಸಿದರು.
ಅಲಂಕೃತ ಟ್ರಾಕ್ಟರ್ ಗೆ ಗಣೇಶ ಮೂರ್ತಿಯನ್ನು ಕೂರಿಸಿದ ಮುಸ್ಲಿಂ ಯುವಕರು ತಾವೇ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು, ಮಸೀದಿ ಮುಂಭಾಗಕ್ಕೆ ಕರೆ ತಂದಿದ್ದಾರೆ. ಮೆರವಣಿಗೆ ಮಸೀದಿ ಮುಂಭಾಗ ತಲುಪುತ್ತಿದ್ದಂತೆ ಮಸೀದಿ ಕಮಿಟಿ ಹಾಗೂ ಮುಸ್ಲಿಂ ಮುಖಂಡರು ಗಣೇಶ ಮೂರ್ತಿಗೆ ಹಾರ ಹಾಕಿ ಗೌರವ ಸಲ್ಲಿಸಿದ್ದಾರೆ.
ಅಲ್ಲದೇ ಮೆರವಣಿಗೆಯಲ್ಲಿದ್ದ ಭಕ್ತರಿಗೆ ಮುಸ್ಲಿಂ ಯುವಕರು ಸಿಹಿ ತಿಂಡಿ, ಶರಬತ್ತು ಹಾಗೂ ಕುಡಿಯುವ ನೀರನ್ನು ವಿತರಿಸಿದ್ದು, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಹಿಂದೂ ಬಾಂಧವರನ್ನು ಅಪ್ಪಿಕೊಂಡು ಶುಭಾಶಯ ಹಂಚಿಕೊಂಡಿದ್ದಾರೆ.