ಪ್ರಜ್ವಲ್ ಮತ್ತು ಭಾಸ್ಕರ್ ರೆಡ್ಡಿ 
ರಾಜ್ಯ

ಬೆಂಗಳೂರು: 13 ವರ್ಷದ ಬಾಲಕನ ಅಪಹರಿಸಿ ಹತ್ಯೆ; ಅಪಘಾತದ ಕಥೆ ಹೆಣೆದಿದ್ದ ಆರೋಪಿ ಬಂಧನ

ಯಲಹಂಕದ ವಿನಾಯಕ ನಗರದ ನಿವಾಸಿ ಪ್ರಜ್ವಲ್ (13) ಕೊಲೆಯಾದ ಬಾಲಕ. ಆರೋಪಿ ಭಾಸ್ಕರ್ ರೆಡ್ಡಿ ಬಂಧಿಸಿರುವ ಚಿಕ್ಕಜಾಲ ಠಾಣೆಯ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ಹಣದಾಸೆ ಹಾಗೂ ತಂದೆಯ ಸಾಲ ತೀರಿಸಲು ಪಕ್ಕದ ಮನೆಯ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿದ್ದ ಆರೋಪಿ ಭಾಸ್ಕರ್‌ ರೆಡ್ಡಿ (28) ಸಿನಿಮೀಯ ರೀತಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಯಲಹಂಕದ ವಿನಾಯಕ ನಗರದ ನಿವಾಸಿ ಪ್ರಜ್ವಲ್ (13) ಕೊಲೆಯಾದ ಬಾಲಕ. ಆರೋಪಿ ಭಾಸ್ಕರ್ ರೆಡ್ಡಿ ಬಂಧಿಸಿರುವ ಚಿಕ್ಕಜಾಲ ಠಾಣೆಯ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಬಾಲಕನನ್ನು ಕೊಲೆ ಮಾಡಲಾಗಿದೆ. ಕೃತ್ಯ ಎಸಗಲು ಭಾಸ್ಕರ್‌ ರೆಡ್ಡಿಗೆ ಮತ್ತೊಬ್ಬ ವ್ಯಕ್ತಿ ನೆರವು ನೀಡಿರುವ ಮಾಹಿತಿಯಿದೆ. ಆತ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಆರೋಪಿಯು ತನ್ನ ಕಾರಿನಲ್ಲಿ ಆಂಧ್ರಪ್ರದೇಶದ ಕಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ, ಚಿಕ್ಕಜಾಲದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಕಾರು ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅನುಮಾನಗೊಂಡ ಪೊಲೀಸರು ಕಾರಿನ ಡಿಕ್ಕಿ ತೆರೆದಾಗ ಬಾಲಕನ ಶವ ಪತ್ತೆಯಾಗಿದೆ. ಘಟನೆಯ ಸಮಯದಲ್ಲಿ ಆರೋಪಿಯು ಮದ್ಯದ ಅಮಲಿನಲ್ಲಿದ್ದ ಎಂದು ತಿಳಿದುಬಂದಿದೆ.

​ಪ್ರಜ್ವಲ್ ಹಾಗೂ ಭಾಸ್ಕರ್ ರೆಡ್ಡಿ ಕುಟುಂಬಗಳು ವಿನಾಯಕನಗರದಲ್ಲಿ ಅಕ್ಕಪಕ್ಕದಲ್ಲೇ ನೆಲಸಿವೆ. ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಇತ್ತು. ಬಾಲಕನ ತಂದೆ ಮನೋಹರ್ ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರ ನಡೆಸುತ್ತಾರೆ.

ಆರೋಪಿಯ ತಂದೆ, ವ್ಯವಹಾರದಲ್ಲಿ ಆರ್ಥಿಕ ನಷ್ಟ ಹೊಂದಿದ್ದರು. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ನಗರಕ್ಕೆ ಬಂದಿದ್ದ ಆರೋಪಿ, ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತಂದೆ ಆರ್ಥಿಕ ನಷ್ಟದಲ್ಲಿ ಇರುವುದು ಗೊತ್ತಿತ್ತು. ಪ್ರಜ್ವಲ್‌ನನ್ನು ಅಪಹರಿಸಿ, ಹಣಕ್ಕೆ ಬೇಡಿಕೆ ಇಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದರು.

ಕಾರಿನಲ್ಲಿ ಹೋಗಿ ಗಣಪತಿ ಹಬ್ಬಕ್ಕೆ ಪಟಾಕಿ ತರೋಣವೆಂದು ಬಾಲಕನನ್ನು ಪುಸಲಾಯಿಸಿದ್ದ. ಕಾರಿನಲ್ಲಿ ಕರೆದೊಯ್ದು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು. ಮದ್ಯದ ಅಮಲಿನಲ್ಲಿದ್ದ ಆರೋಪಿ ಬಾಲಕನಿಂದಲೇ ವಿಡಿಯೊ ಮಾಡಿಸಿ, ₹1 ಕೋಟಿ ನೀಡುವಂತೆ ಬಾಲಕನ ತಂದೆಗೆ ಬೆದರಿಕೆ ಒಡ್ಡಿದ್ದ. ಹಣ ಕೊಡದಿದ್ದರೆ ಮಗನನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದ.

ತಕ್ಷಣವೇ ಎಚ್ಚೆತ್ತ ಬಾಲಕನ ತಂದೆ ಮನೋಹರ್ ಅವರು ಆರೋಪಿ ಭಾಸ್ಕರ್ ರೆಡ್ಡಿಯ ತಂದೆಗೂ ಮಾಹಿತಿ ನೀಡಿದ್ದರು. ಇಬ್ಬರೂ ಸೇರಿ ಭಾಸ್ಕರ್‌ಗೆ ಕರೆ ಮಾಡಿ ಗದರಿಸಿ, ತಕ್ಷಣ ಬಾಲಕನೊಂದಿಗೆ ವಾಪಸ್ ಬರುವಂತೆ ಸೂಚಿಸಿದ್ದರು. ಅಲ್ಲದೆ, ತಕ್ಷಣವೇ ಪೊಲೀಸರಿಗೂ ಮಾಹಿತಿ ನೀಡಿ ಇಬ್ಬರೂ ಸೇರಿ ಹುಡುಕಾಟ ಪ್ರಾರಂಭಿಸಿದ್ದರು ಎಂದು ಮೂಲಗಳು ಹೇಳಿವೆ.

ತನ್ನ ಸಂಚು ವಿಫಲವಾಗಿದ್ದರಿಂದ ಗಾಬರಿಗೊಂಡಿದ್ದ ಆರೋಪಿ, ಕಾರಿನಲ್ಲಿದ್ದ ಸಿಮೆಂಟ್ ಇಟ್ಟಿಗೆಯಿಂದ ಪ್ರಜ್ವಲ್ ತಲೆಗೆ ಹೊಡೆದು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಆಂಧ್ರಪ್ರದೇಶದ ನಿರ್ಜನ ಪ್ರದೇಶವೊಂದಕ್ಕೆ ಕೊಂಡೊಯ್ದು ಸುಟ್ಟು ಹಾಕಲು ಯೋಜಿಸಿದ್ದ. ಅಲ್ಲಿಗೆ ತೆರಳಲು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಕಾರನ್ನು ಅತಿವೇಗದಿಂದ ಚಲಾಯಿಸುವಾಗ ಸರಣಿ ಅಪಘಾತ ಸಂಭವಿಸಿತ್ತು. ಭಾಸ್ಕರ್‌ ರೆಡ್ಡಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕಾರನ್ನು ಪರಿಶೀಲಿಸಿದಾಗ, ‌ಬಾಲಕನ ಮೃತದೇಹ ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿವೆ.

ಮೃತದೇಹ ಪತ್ತೆಯಾದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಕಾರಿಗೆ ಬಾಲಕ ಅಡ್ಡ ಬಂದಿದ್ದ. ಆಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದ. ಆದರೆ ತನಿಖೆಯ ಬಳಿಕ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಸಾಬೀತಾಯಿತು. ತಕ್ಷಣವೇ ಆತನನ್ನು ಬಂಧಿಸಲಾಯಿತು. ಭಾಸ್ಕರ್ ರೆಡ್ಡಿ ತಂದೆಯನ್ನು ವಿಚಾರಣೆ ನಡೆಸಲಾ ಗಿದೆ. ಸದ್ಯಕ್ಕೆ ಅವರ ಪಾತ್ರ ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾಗೆ ಟ್ರಂಪ್‌ ಬಿಗ್ ಶಾಕ್: ಶೇ.100ರಷ್ಟು ಸುಂಕಕ್ಕೆ ಅಸ್ತು, ಭಾರತ-ಚೀನಾ ಮೇಲೂ ನಿರ್ಬಂಧದ ತೂಗುಗತ್ತಿ..!

ಮಂಗಳೂರಿನಲ್ಲಿ ಡಿಕೆಶಿ ಸಂಪುಟ ಸಭೆ, ತುಮಕೂರಿನಲ್ಲಿ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್: ಕೈ ಪಾಳಯದಲ್ಲಿ ಶುರುವಾಯ್ತಾ ಹೊಸ ಆಂತರಿಕ ತಂತ್ರಗಾರಿಕೆ..?

ರಾಜ್ಯದ 32,611 ಕೋಟಿ ರೂ. ಯೋಜನೆಗಳಿಗೆ ಗ್ರೀನ್‌ ಸಿಗ್ನಲ್‌: ಮಂಗಳೂರು ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ಘೋಷಣೆ..!

ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ: 16 ಸಾವಿರ ಕೋಟಿ ರೂ. ಪ್ಯಾಕೇಜ್‌ಗೆ ಸಂಪುಟ ಒಪ್ಪಿಗೆ, ಪ್ರವಾಸೋದ್ಯಮ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು..!

ಸರ್ಕಾರದ ಎಲ್ಲ ಘೋಷಣೆಗಳೂ ಕಾಗದದ ಮೇಲೆಯೇ ಉಳಿಯಲಿವೆ: ಆರ್. ಅಶೋಕ್