ಮೈಸೂರು: ಇತ್ತೀಚಿಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರ ಬೆನ್ನಲ್ಲೇ ಉರ್ದುಗೂ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಎಸ್ ಡಿಪಿಐ ಸೋಮವಾರ ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಎಸ್‌ಡಿಪಿಐ(SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು, ಕರ್ನಾಟಕದಲ್ಲಿ ಉರ್ದುವಿಗೂ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 4,236 ಉರ್ದು ಮಾಧ್ಯಮ ಶಾಲೆಗಳಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ತೆಲಂಗಾಣ ಮಾದರಿಯಲ್ಲಿ ಉರ್ದುವಿಗೆ ಸ್ಥಾನಮಾನ ನೀಡಲು ಆಗ್ರಹಿಸಿದ್ದಾರೆ.
ಉರ್ದುವಿಗೆ ಸ್ಥಾನಮಾನ ನೀಡುವುದರಿಂದ ಕನ್ನಡಕ್ಕೆ ಧಕ್ಕೆಯಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲೂ ಅರ್ಜಿ, ಮಾಹಿತಿ ನೀಡಲು ಬೇಡಿಕೆ ಇಟ್ಟಿದ್ದು, ಉರ್ದು ಶಾಲೆಗಳ ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಒತ್ತಾಯಿಸಿದ್ದಾರೆ. ಅಲ್ಲದೆ ಸರ್ಕಾರಿ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಉರ್ದುವಿನಲ್ಲೂ ನೀಡಲು ಆಗ್ರಹಿಸಿದ್ದಾರೆ.