ಬಿ.ಕೆ ಹರಿಪ್ರಸಾದ್ 
ರಾಜ್ಯ

ಪ್ರಧಾನಿ ಮೋದಿ 800 ರೈತರನ್ನು ಕೊಲೆ ಮಾಡಿದ್ದಾರೆ: ಹರಿಪ್ರಸಾದ್‌ ಹೇಳಿಕೆಗೆ BJP ಆಕ್ರೋಶ, ವಿಧಾನ ಪರಿಷತ್‌ನಲ್ಲಿ ಭಾರಿ ಕೋಲಾಹಲ..!

ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಈಗ 800 ರೈತರ ಪ್ರಾಣ ತೆಗೆದುಕೊಂಡ ನರೇಂದ್ರ ಮೋದಿ, ರೈತರ ಕೊಲೆ ಮಾಡಿದ್ದಾರೆ.

ಬೆಂಗಳೂರು: ವಿಧಾನ ಪರಿಷತ್‌ನ ವಿಶೇಷ ಅಧಿವೇಶನದ ಎರಡನೇ ದಿನವಾದ ಬುಧವಾರ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಪ್ರಧಾನಿ ಮೋದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ನೀಡಿದ ಹೇಳಿಕೆ ಹಾಗೂ ಪ್ರತಿಪಕ್ಷದ ಚರ್ಚೆಗೆ ಆಡಳಿತ ಪಕ್ಷದ ಸದಸ್ಯರು ಪದೇಪದೇ ಅಡ್ಡಿಪಡಿಸಿದ್ದನ್ನು ಖಂಡಿಸಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಂಕಷ್ಟ ಹಾಗೂ ಕೃಷಿ ಸಾಲ ಮನ್ನಾ ಕುರಿತು ನಡೆಯುತ್ತಿದ್ದ ಚರ್ಚೆ ಈ ಗದ್ದಲಕ್ಕೆ ಕಾರಣವಾಯಿತು.

ಯುಪಿಎ ಸರ್ಕಾರದ ಅವಧಿಯಲ್ಲಿ ಕೈಗೊಂಡ ಸಾಲ ಮನ್ನಾ ಕ್ರಮಗಳು ಹಾಗೂ ಮೋದಿ ಸರ್ಕಾರ ಘೋಷಿಸಿದ ಸಾಲ ಮನ್ನಾ ಯೋಜನೆಗಳ ಕುರಿತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಹರಿಪ್ರಸಾದ್‌ ಮಧ್ಯಪ್ರವೇಶಿಸಿದರು.

ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಈಗ 800 ರೈತರ ಪ್ರಾಣ ತೆಗೆದುಕೊಂಡ ನರೇಂದ್ರ ಮೋದಿ, ರೈತರ ಕೊಲೆ ಮಾಡಿದ್ದಾರೆಂದು ವಾಗ್ದಾಳಿ ನಡೆಸಿದರು.

ಇದು ವಿರೋಧ ಪಕ್ಷದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ, ಪ್ರಧಾನಿ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಾರೆ. ಬರ ಕುರಿತು ಚರ್ಚೆ ನಡೆಯದಂತೆ ಅಡ್ಡಿಪಡಿಸಿದ್ದಾರೆಂದು ಆಕ್ಷೇಪಿಸಿದರು.

ಬಿಜೆಪಿ ಸದಸ್ಯ ಸಿ.ಟಿ. ರವಿ ಹರಿಪ್ರಸಾದ್‌ ಹೇಳಿಕೆಯನ್ನು ಖಂಡಿಸಿದರೆ, ಹಲವು ಬಿಜೆಪಿ ಸದಸ್ಯರು ಆ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕುವಂತೆ ಆಗ್ರಹಿಸಿದರು.

ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ವಿಜಯಾನಂದ ಕಾಶಪ್ಪನವರ್‌ ಮತ್ತು ಅಜಯ್‌ ಸಿಂಗ್‌ ಅವರು ಹರಿಪ್ರಸಾದ್‌ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸಭಾಪತಿ ಸಲಿಂ ಅಹ್ಮದ್‌ ಅವರು ಎದ್ದು ನಿಂತು ಗದ್ದಲವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಹೇಳಿಕೆಗಳನ್ನು ದಾಖಲೆಯಿಂದ ತೆಗೆದುಹಾಕುವಂತೆ ಬಂದಿರುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಅಸಭ್ಯ ಅಥವಾ ಅಸಂಸದೀಯ ಪದಗಳಿದ್ದರೆ ಅವುಗಳನ್ನು ಕಲಾಪದ ದಾಖಲೆಯಿಂದ ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿದರು. ಸದನದ ಘನತೆಯನ್ನು ಕಾಪಾಡಿಕೊಂಡು ಸದಸ್ಯರು ನಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ವೇಳೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ಅವರು, ಸಭಾಪತಿಯ “ಮೀನು ಮಾರುಕಟ್ಟೆಯಂತಾಗಿದೆ” ಎಂಬ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಸದಸ್ಯರು ಯಾವುದೇ ಹೇಳಿಕೆ ನೀಡಬಹುದು, ಆದರೆ, ಪ್ರತಿಪಕ್ಷ ಮಾತ್ರ ಮೌನವಾಗಿರಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ವಾದಿಸಿದರು.

ಬಳಿಕ ಬರ ಪರಿಸ್ಥಿತಿ ಕುರಿತ ಚರ್ಚೆಯ ಸಂದರ್ಭದಲ್ಲೂ ಮತ್ತೊಂದು ವಿವಾದ ಉಂಟಾಯಿತು. ಛಲವಾದಿ ನಾರಾಯಣಸ್ವಾಮಿ ಅವರು ನೇರ ಲಾಭ ವರ್ಗಾವಣೆ ಮೂಲಕ ನಡೆಯುತ್ತಿರುವ ಹಣ ಪಾವತಿ ಕುರಿತು ಪ್ರಸ್ತಾಪಿಸಿದಾಗ ಸಚಿವ ಸಂತೋಷ್‌ ಲಾಡ್‌ ಸ್ಪಷ್ಟನೆ ಕೋರಿದರು.

ಆಡಳಿತ ಪಕ್ಷದ ಸದಸ್ಯರು ಪದೇಪದೇ ಮಧ್ಯಪ್ರವೇಶಿಸುತ್ತಿದ್ದು, ಪ್ರತಿಪಕ್ಷಕ್ಕೆ ಮಾತನಾಡಲು ಸಾಕಷ್ಟು ಸಮಯ ನೀಡುತ್ತಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಆರೋಪಿಸಿದರು.

ಬರ ಹಾಗೂ ರೈತರ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಸಾಧ್ಯವಾಗದಿದ್ದರೆ ವಿಶೇಷ ಅಧಿವೇಶನ ಕರೆಯುವ ಉದ್ದೇಶವೇನು ಎಂದು ಸಿ.ಟಿ. ರವಿ ಪ್ರಶ್ನಿಸಿದರು.

ಬಳಿಕ ಆಡಳಿತ ಪಕ್ಷದ ಸದಸ್ಯರ ವರ್ತನೆಯನ್ನು ಖಂಡಿಸಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಇದಾದ ಬಳಿಕ ಸಭಾಪತಿ ಸಲಿಂ ಅಹ್ಮದ್‌ ಅವರು ಸದನವನ್ನು ಕೆಲಕಾಲ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು; ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!